ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಅರ್ಚಕರ ಬಂಧನ: ಬ್ರಾಹ್ಮಣ ಮಹಾಸಭಾ ಖಂಡನೆ

Published 27 ಅಕ್ಟೋಬರ್ 2023, 16:33 IST
Last Updated 27 ಅಕ್ಟೋಬರ್ 2023, 16:33 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಉಗುರಿನ ಲಾಕೆಟ್‌ ಹೊಂದಿದ್ದ ಆರೋಪದಡಿ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ. ಅರ್ಚಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ನಾಗರಿಕರಿಗೆ ತಿಳಿವಳಿಕೆ ನೀಡದೇ ನೇರವಾಗಿ ಬಂಧಿಸುವುದು ಸೂಕ್ತವಲ್ಲ. ಈ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಾಗ ಆಯಾ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅಪರಾಧ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.

ವನ್ಯಜೀವಿಗಳಿಂದ ತಯಾರಿಸಿದ ಪದಾರ್ಥಗಳನ್ನು ಎಲ್ಲ ಧರ್ಮೀಯರೂ ಬಹಳ ವರ್ಷಗಳಿಂದ ಮಠ, ಮಂದಿರಗಳಲ್ಲಿ ಉಪಯೋಗಿಸುತ್ತಿದ್ದಾರೆ. ಸನ್ಯಾಸಿಗಳು ಶತಮಾನಗಳಿಂದ ಕೃಷ್ಣಾಜಿನ(ಜಿಂಕೆಯ ಚರ್ಮ) ಬಳಕೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಸಮುದಾಯಗಳಲ್ಲೂ ನವಿಲುಗರಿಯನ್ನು ಉಪಯೋಗಿಸುವುದು ರೂಢಿಯಲ್ಲಿದೆ. ಮೊಕದ್ದಮೆ ದಾಖಲಿಸಬೇಕಾದ ಸಂದರ್ಭ ಎದುರಾದರೂ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಆ ವ್ಯಕ್ತಿಗಳಿಗೆ ಅಪರಾಧ ಹಿನ್ನೆಲೆ ಇರುವುದಿಲ್ಲ. ತಪ್ಪಿಸಿಕೊಂಡು ಹೋಗುವ ಸಾಧ್ಯತೆಯೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಅರ್ನೇಶ್‌ಕುಮಾರ್ ಮತ್ತು ಬಿಹಾರ ರಾಜ್ಯದ ಮೊಕದ್ದಮೆಯಲ್ಲಿ ಈ ರೀತಿಯ ಅನವಶ್ಯಕವಾಗಿ ಬಂಧಿಸುವುದನ್ನು ಖಂಡಿಸಲಾಗಿದೆ. ಸರ್ಕಾರವು ಒಂದು ಮಧ್ಯಮ ಮಾರ್ಗ ಅನುಸರಿಸಬೇಕು. ವನ್ಯಜೀವಿಗಳಿಂದ ತಯಾರಿಸಿದ ಪದಾರ್ಥಗಳು ಯಾರ ಬಳಿಯಿದ್ದರೂ ಸಹ ಮುಂದೆ ನಿಗದಿಪಡಿಸುವ ಅವಧಿ ಒಳಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಹಾಗೂ ಸ್ವಇಚ್ಛೆಯಿಂದ ಮಾಹಿತಿ ನೀಡಿದಲ್ಲಿ ಅಂತವರ ಮೇಲೆ ಯಾವುದೇ ಕ್ರಮ ಜರುಗಿಸಬಾರದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT