ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ತಪ್ಪಿಸಲು ಕೆಎಸ್‌ಆರ್‌ಟಿಸಿ ಚಾಲಕರಿಗೆ ‘ಉಸಿರು’ ತಪಾಸಣೆ

ಕೆಎಸ್‌ಆರ್‌ಟಿಸಿ ಚಾಲಕರಿಗೆ ಮದ್ಯಪಾನ ಪರೀಕ್ಷೆ ನಡೆಸಲು ನಿರ್ಧಾರ
Published 29 ಮಾರ್ಚ್ 2024, 21:29 IST
Last Updated 29 ಮಾರ್ಚ್ 2024, 21:29 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿತದಿಂದ ಯಾವುದೇ ಅಪಘಾತ ಉಂಟಾಗಬಾರದು ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ಕರ್ತವ್ಯದ ಮಧ್ಯೆ ‘ಉಸಿರು ತಪಾಸಣೆ’ ನಡೆಸಲು ನಿಗಮ ನಿರ್ಧರಿಸಿದೆ. ಅಮಲು ಪದಾರ್ಥ ಸೇವಿಸಿ ಬಸ್‌ ಚಲಾಯಿಸುತ್ತಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ರಾತ್ರಿ ಸಂಚರಿಸುವ ಬಸ್‌ಗಳ ಚಾಲಕರಿಗೆ ಮಾರ್ಗ ಮಧ್ಯೆ ನಿಗದಿಪಡಿಸಿದ ಸ್ಥಳಗಳಲ್ಲಿ ಪ್ರತಿದಿನ ತಪ್ಪದೇ ‘ಉಸಿರು ತಪಾಸಣಾ ಯಂತ್ರಗಳ’ ಮೂಲಕ ‘ಮದ್ಯಪಾನ ತಪಾಸಣೆ’ ಮಾಡಬೇಕು. ಚಾಲಕರ ಸಂಖ್ಯೆ ಮತ್ತು ತಪಾಸಣೆಯ ಫಲಿತಾಂಶವನ್ನು ಕೇಂದ್ರ ಕಚೇರಿಯ ಕಂಟ್ರೋಲ್‌ ರೂಂಗೆ ರವಾನಿಸಬೇಕು ಎಂದು ನಿಗಮದ ಎಲ್ಲ ತನಿಖಾ ಸಂಯೋಜಕರಿಗೆ ಸೂಚನೆ ನೀಡಲಾಗಿದೆ.

ವಿಶ್ರಾಂತಿ ಅಗತ್ಯ: ಚಾಲನಾ ಸಿಬ್ಬಂದಿಗೆ ಕರ್ತವ್ಯಗಳ ನಡುವೆ ಸರಿಯಾದ ವಿಶ್ರಾಂತಿ ನೀಡಬೇಕು. ಇಲ್ಲದೇ ಇದ್ದರೆ ಬಸ್‌ ಚಲಾಯಿಸುವ ಸಂದರ್ಭದಲ್ಲಿ ತೂಕಡಿಕೆ ಉಂಟಾಗಿ ಅಪಘಾತಕ್ಕೆ ಕಾರಣವಾಗಬಹುದು. ಕರ್ತವ್ಯಕ್ಕೆ ನಿಯೋಜಿಸುವಾಗಲೇ ವಿಶ್ರಾಂತಿಯ ಪೂರ್ಣ ಮಾಹಿತಿಯನ್ನು ಹೊಂದಿರಬೇಕು ಎಂದು ಘಟಕದ ಅಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಚಾಲನೆಯ ವೇಳೆ ಮುಂಜಾನೆ ಅಪಘಾತ ಹೆಚ್ಚು ಉಂಟಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದ ಮೇಲೆ ರಾತ್ರಿ ಕರ್ತವ್ಯ ನಿರ್ವಹಿಸುವವರಿಗೆ ಅರ್ಧ ಲೀಟರ್‌ನ ಥರ್ಮೋ ಫ್ಲ್ಯಾಸ್ಕ್‌ ವಿತರಣೆ ಮಾಡಲಾಗಿದೆ. ಹೋಟೆಲ್‌ಗಳಿಂದ ಕಾಫಿ, ಟೀಯನ್ನು ಫ್ಲ್ಯಾಸ್ಕ್‌ನಲ್ಲಿ ತುಂಬಿಸಿಕೊಂಡು ಬೆಳಿಗ್ಗಿನ ಜಾವ ಸೇವಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಅಪಘಾತ ಬಹಳ ಕಡಿಮೆ, ಕಾಲಕ್ರಮೇಣ ಅಪಘಾತ ರಹಿತವಾಗಿ ಮಾಡಬೇಕು ಎಂಬ ಕಾರಣಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಚಾಲಕರಿಗೆ, ಸಿಬ್ಬಂದಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಪರ್ಧೆಗಾಗಿ ವೇಗ ಬೇಡ: ದ್ವಿಚಕ್ರ ವಾಹನಗಳಿಂದಲೇ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ. ಹಾಗಾಗಿ ದ್ವಿಚಕ್ರವಾಹನಗಳು ಬಂದಾಗ ಬಸ್‌ ಚಾಲಕರು ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪಘಾತವಾದರೆ ಬೈಕ್‌ ಸವಾರರ ಕುಟುಂಬಕ್ಕೂ ನಷ್ಟ, ಕೆಎಸ್‌ಆರ್‌ಟಿಸಿ ಸಂಸ್ಥೆಗೂ ನಷ್ಟ. ಬೇರೆ ವಾಹನಗಳೊಂದಿಗೆ ಸ್ಪರ್ಧೆ ಮಾಡಬಾರದು ಎಂಬ ಅರಿವು ಮೂಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಪೊದಲ್ಲಿಯೂ ಕೌನ್ಸೆಲಿಂಗ್‌: ಬೇಸಿಗೆ ಸಮಯದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸ ಹೋಗುವವರ ಸಂಖ್ಯೆ ಅಧಿಕವಾಗಿರುತ್ತದೆ. ಜಾತ್ರೆ, ಹಬ್ಬಗಳೂ ಇದೇ ಸಮಯದಲ್ಲಿ ಇರುತ್ತವೆ. ಇಂಥ ಸಂದರ್ಭದಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಳವಾಗುತ್ತದೆ. ಇದೆಲ್ಲ ಚಾಲಕರ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಬೆಳಿಗ್ಗೆ 6ಕ್ಕೆ ಡಿಪೊ ಮ್ಯಾನೇಜರ್‌ಗಳು ಹಾಜರಿದ್ದು, ಚಾಲಕರೊಂದಿಗೆ ಮಾತನಾಡಬೇಕು. ಒತ್ತಡಕ್ಕೆ ಒಳಗಾಗಿ ವೇಗದ ಚಾಲನೆ ಮಾಡದಂತೆ ಕೌನ್ಸೆಲಿಂಗ್‌ ಮಾಡಬೇಕು ಎಂದು ಘಟಕದ ಮ್ಯಾನೇಜರ್‌ಗಳಿಗೂ ಸೂಚನೆ ನೀಡಲಾಗಿದೆ.

ವಿ. ಅನ್ಬು ಕುಮಾರ್
ವಿ. ಅನ್ಬು ಕುಮಾರ್

ಮುನ್ನೆಚ್ಚರಿಕೆ ಕ್ರಮ!

‘ಕೆಎಸ್‌ಆರ್‌ಟಿಸಿ ಚಾಲಕರು ಮದ್ಯಪಾನ ಮಾಡಿ ಅಪಘಾತ ನಡೆಸಿದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಉಸಿರು ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್‌ ತಿಂಗಳ ಅಪಘಾತ ಪ್ರಕರಣಗಳ ವಿಶ್ಲೇಷಣಾ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT