ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BWSSB ಯೋಜನಾ ಶುಲ್ಕ ಸಂಗ್ರಹ ಕಾನೂನು ಬಾಹಿರ- ಹೈಕೋರ್ಟ್

ನೀರು ಸರಬರಾಜು ಮಂಡಳಿ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನಿಂದ ಆದೇಶ
Published 13 ಏಪ್ರಿಲ್ 2024, 0:29 IST
Last Updated 13 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ಜನವಸತಿ ಕಟ್ಟಡಗಳಿಂದ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಸಂಗ್ರಹ ಮಾಡುತ್ತಿರುವ, ಗ್ರೇಟರ್‌ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ (ಜಿಬಿಡಬ್ಲ್ಯುಎಸ್‌ಎಸ್‌ಪಿ) ಹಾಗೂ ಬೆನಿಫಿಷಿಯರಿ ಕ್ಯಾಪಿಟಲ್‌ ಕಾಂಟ್ರಿಬ್ಯೂಷನ್‌(ಬಿಸಿಸಿ) ಶುಲ್ಕಗಳನ್ನು ಕಾನೂನು ಬಾಹಿರ ಎಂದು ಹೈಕೋರ್ಟ್‌ ಘೋಷಿಸಿದೆ.

ಈ ಸಂಬಂಧ ಶೋಭಾ ಲಿಮಿಟೆಡ್‌ ಮತ್ತು ಬ್ರಿಗೇಡ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಅರ್ಜಿದಾರರಿಂದ ಸಂಗ್ರಹಿಸಿರುವ ಗ್ರೇಟರ್‌ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕವನ್ನು ವಾಪಸ್‌ ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಸ್ತುತ ಜಲಮಂಡಳಿಯು ಬಹು ಮಹಡಿಕಟ್ಟಡಗಳಿಂದ ಸಂಗ್ರಹ ಮಾಡುತ್ತಿರುವ ಮುಂಗಡ ಪ್ರೊ ರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹದ ಕ್ರಮವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.

ಏತನ್ಮಧ್ಯೆ, ‘ರಾಜ್ಯ ಸರ್ಕಾರ ಅಥವಾ ಬೆಂಗಳೂರು ಜಲಮಂಡಳಿ, ಈ ಎರಡೂ ಶುಲ್ಕಗಳನ್ನು ವಿಧಿಸಲು ಬೆಂಗಳೂರು ನೀರು ಮತ್ತು ಒಳಚರಂಡಿ ಕಾಯ್ದೆ-1964 ಮತ್ತು ಬೆಂಗಳೂರು ನೀರು ಪೂರೈಕೆ ನಿಯಂತ್ರಣ-1965ರ ಅಡಿ ಸೂಕ್ತ ತಿದ್ದುಪಡಿ ತರುವ ಮೂಲಕ ಮುಂದಿನ ಕ್ರಮ ಜರುಗಿಸಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

‘ಅರ್ಜಿದಾರರು ಈಗಾಗಲೇ ಜಲಮಂಡಳಿಗೆ ಪಾವತಿ ಮಾಡಿರುವ ಬಿಸಿಸಿ ಹಾಗೂ ಜಿಬಿಡಬ್ಲ್ಯುಎಸ್‌ಎಸ್‌ಪಿ ಶುಲ್ಕವನ್ನು ವಾಪಸು ಪಡೆಯಲು ಅರ್ಹರಿದ್ದಾರೆ. ಜಲಮಂಡಳಿ ಅವರಿಗೆ 12 ವಾರಗಳಲ್ಲಿ ಹಣ ಮರು ಪಾವತಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಜಿಬಿಡಬ್ಲ್ಯುಎಸ್‌ಎಸ್‌ಪಿ ಹಾಗೂ ಬಿಸಿಸಿ ಶುಲ್ಕವನ್ನು ಜಲಮಂಡಳಿ ಸಂಗ್ರಹ ಮಾಡುತ್ತಿದೆ. ಇದರಿಂದ ಬಂದ ಹಣವನ್ನು ಮಂಡಳಿಯು ಹೊಸ ಪ್ರದೇಶಗಳ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಯ ಮೂಲ ಸೌಕರ್ಯಕ್ಕಾಗಿ ಬಳಕೆ ಮಾಡುತ್ತಿದೆ. ಆದರೆ, ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲದೆ ಈ ರೀತಿ ಶುಲ್ಕಗಳನ್ನು ವಿಧಿಸುವ ಅಧಿಕಾರ ಮಂಡಳಿಗಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT