ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಒತ್ತುವರಿ ಕೆರೆಗಳ ಕಹಾನಿ

ಒತ್ತುವರಿ ತೆರವಿಗೆ ಜಿ‌ಲ್ಲಾಡಳಿತ ಮೀನ ಮೇಷ; ಪರ್ಯಾಯ ಮಾರ್ಗದ ಬದಲು ಕೆರೆ ಕರಗಿಸಿದ ಬಿಆರ್‌ಟಿಎಸ್‌ !
Last Updated 15 ಏಪ್ರಿಲ್ 2018, 8:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 1,274 ಕೆರೆಗಳಿವೆ. ಕೆರೆಗಳಿಂದಾಗಿ ಜಿಲ್ಲೆಯು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ನಗರೀಕರಣ ಬೆಳೆದಂತೆಲ್ಲ ಕೆರೆಗಳು ಮಾಯವಾಗುತ್ತಿವೆ. ಕೆಲವೆಡೆ ಕೆರೆಗಳು ಪ್ರಭಾವಿ ಕುಟುಂಬಗಳ ಪಾಲಾಗಿವೆ. ಜನರ ಜೀವನಾಡಿಯಾಗಿದ್ದ ಕೆರೆಗಳ ವಿಸ್ತಾರ ಕರಗುತ್ತಾ ಮಾಯವಾಗುವ ಹಂತ ತಲುಪಿವೆ.

ಧಾರವಾಡ ಹಾಗೂ ಕಲಘಟಗಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೆರೆಗಳಿವೆ. ಒಂದೊಂದು ಕೆರೆಗಳು ಇಡೀ ಊರಿನ ನೀರ ದಾಹವನ್ನೇ ತೀರಿಸುವ ಸಂಜೀವಿನಿಯಾಗಿದ್ದವು. ಬದಲಾದ ಕಾಲದಲ್ಲಿ ಕೊಳವೆಬಾವಿಗಳನ್ನು ಕೊರೆದು ಮನೆಗಳಿಗೆ ನೀರು ಸರಬರಾಜು ಮಾಡುವ ಸೌಕರ್ಯ ಪ್ರತಿಯೊಂದು ಬಂತು. ಹೀಗಾಗಿ, ಕೆರೆಗಳ ನಿರ್ವಹಣೆ ಮಾಡುವವರಿಲ್ಲದಂತಾಯಿತು.

ಮಳೆಯ ವೈಪ‍ರೀತ್ಯದಿಂದ ಕೆರೆಗಳು ಭರ್ತಿಯಾಗುತ್ತಿರಲಿಲ್ಲ. ಇದನ್ನೇ ಕಾಯುತ್ತಿದ್ದ ಬಲಾಢ್ಯರು ಕ್ರಮೇಣ ಕೆರೆಯಂಗಳದಲ್ಲಿ ಗುಡಿಸಲು ಹಾಕಿ
ಕೊಂಡರು. ನಂತರ ಜಾಗವನ್ನು ವಿಸ್ತರಿಸಿಕೊಳ್ಳುತ್ತಾ ಹೋದರು. ಕೆಲವೆಡೆ ಇಟ್ಟಿಗೆ ಭಟ್ಟಿಗಳೇ ಆರಂಭವಾಗಿದ್ದವು. ಅಲ್ಲಿಯೇ ಮಣ್ಣನ್ನು ತೆಗೆದುಕೊಂಡು ಇಟ್ಟಂಗಿ ತಯಾರಿಸಿ, ಐದು ಪೈಸೆ ಖರ್ಚಿಲ್ಲದೇ ಆದಾಯ ಮಾಡಿಕೊಂಡರು.

‘ಅತಿಕ್ರಮಣಕ್ಕೆ ಒಳಗಾದ ಕೆರೆಗಳ ಪೈಕಿ ಧಾರವಾಡದ ಎಮ್ಮಿಕೆರೆಯೂ ಒಂದು. 25–30 ವರ್ಷಗಳ ಹಿಂದೆ ಮಳೆಗಾಲ ಬಂತೆಂದರೆ ಎಮ್ಮಿಕೆರೆ ಮೈದುಂಬಿಕೊಳ್ಳುತ್ತಿತ್ತು. ಮಾಳಮಡ್ಡಿ, ಲಕ್ಷ್ಮಿಸಿಂಗನಕೇರಿಯ ಜನರೆಲ್ಲ ಸ್ನಾನ ಮಾಡುತ್ತಿದ್ದರು. ಪಕ್ಕದಲ್ಲೇ ಇರುವ ಗೌಳಿಗಲ್ಲಿಯ ಗೌಳಿಗರು ನೂರಾರು ಎಮ್ಮೆಗಳ ಜಳಕಕ್ಕೂ ಇದೇ ಕೆರೆ ಬಳಕೆಯಾಗುತ್ತಿತ್ತು. ಸುತ್ತಮುತ್ತಲೂ ಬಡಾವಣೆಗಳು ಎದ್ದು ನಿಂತವು. ರಸ್ತೆಗಳು ನಿರ್ಮಾಣವಾದವು. ನೀರಿನ ಒಳಹರಿವು ಕಡಿಮೆಯಾಯಿತು. ಹಾಗಾಗಿ, ನೀರು ಹರಿದು ಬರುವ ಮಾರ್ಗಗಳೆಲ್ಲ ಮುಚ್ಚಿ ಹೋಗಿ ಕೆರೆ ಮರೆಯುವಂತಾಗಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಸಂಜಯ ಕಪಟಕರ.

2011–12ರಲ್ಲಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆಗಳ ಪಕ್ಕದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ಜಿಲ್ಲಾಡಳಿತ ನೆಲಸಮ ಮಾಡಿತ್ತು. ಆದರೆ, ಆ ಬಳಿಕ ಮನೆ ಕಳೆದುಕೊಂಡ ನಿವಾಸಿಗಳು ಪುನರ್ವಸತಿ ಮಾಡಿಕೊಡುವಂತೆ ಪಟ್ಟು ಹಿಡಿದು ಸಾಕಷ್ಟು ಪ್ರತಿಭಟನೆ ಮಾಡಿದ್ದು ಈಗ ಇತಿಹಾಸ.

ಸರ್‌ ಎಂ. ವಿಶ್ವೇಶ್ವರಯ್ಯ ಅವರು ನೀಲನಕ್ಷೆ ಸಿದ್ಧಪಡಿಸಿಕೊಟ್ಟಿದ್ದ ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯೂ ಒತ್ತುವರಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಕೆರೆಯ ನೀರನ್ನು ಬಳಸಿಕೊಳ್ಳುವ ಕೃಷಿ ವಿಶ್ವವಿದ್ಯಾಲಯವು ಇದರ ಅಭಿವೃದ್ಧಿ ಹಾಗೂ ಹೂಳು ತೆಗೆಯುವ ಜವಾಬ್ದಾರಿಯನ್ನೂ ಹೊತ್ತಿದೆ.

ವನಸಿರಿ ನಗರದ ಬಳಿ ಪ್ರಭಾವಿ ಮುಖಂಡರೊಬ್ಬರು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಪ್ರಶ್ನಿಸಿ ವಿಶ್ವವಿದ್ಯಾಲಯದ ಎಸ್ಟೇಟ್‌ ಅಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನುತ್ತಾರೆ ನೆಲ ಮತ್ತು ನೀರು ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ.

‘ಖಾಸಗಿ ಒತ್ತುವರಿ ಜೊತೆಗೆ ಹಲವು ಕೆರೆಗಳನ್ನು ಸರ್ಕಾರವೇ ರಸ್ತೆ ನಿರ್ಮಾಣ, ಮತ್ತಿತರ ಅವಶ್ಯಕತೆಗಳ ಹೆಸರಿನಲ್ಲಿ ಕೆರೆಯನ್ನು ಬಳಸಿಕೊಂಡಿದೆ. ಅದಕ್ಕೆ ಜ್ವಲಂತ ಉದಾಹರಣೆ ಎಂದರೆ ರಾಯಾಪುರದ ಮುಖ್ಯ ರಸ್ತೆಯಲ್ಲಿರುವ ಕೆರೆ. ಅವಳಿ ನಗರದ ಮಧ್ಯೆ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಿಆರ್‌ಟಿಎಸ್‌
ಕಂಪನಿಯು ರಸ್ತೆ ವಿಸ್ತರಣೆಗೆ ಪರ್ಯಾಯ ಮಾರ್ಗ ಅನುಸರಿಸಬಹುದಾಗಿತ್ತು. ಆದರೆ, ಕೆರೆಯ ಕೆಲ ಭಾಗವನ್ನು ಮುಚ್ಚಿ ಜೋಡಿ ರಸ್ತೆಗಳನ್ನು ನಿರ್ಮಿಸಿದೆ. ಇದಕ್ಕೂ ಮುನ್ನ ರಾಯಾಪುರ ಗ್ರಾಮಕ್ಕೆ ಹೊಂದಿಕೊಂಡಂತೆ ರಸ್ತೆ ಇತ್ತು. ಕೆರೆಯಲ್ಲಿ ಸಂಪೂರ್ಣವಾಗಿ ನೀರಿತ್ತು. ಪಕ್ಕದ ಬೆಟ್ಟದಿಂದ ನೀರು ಸರಾಗವಾಗಿ ಹರಿದು ಬರುತ್ತಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ಕೆರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ’ ಎಂದು ರಾಯಾಪುರದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಹುಬ್ಬಳ್ಳಿಯ ಉಣಕಲ್‌ ಕೆರೆ, ತೋಳನಕೆರೆಗಳ ಪ್ರದೇಶವನ್ನೂ ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಒತ್ತುವರಿಯನ್ನು ತಡೆಯಲು ಸರ್ಕಾರ ಕೆರೆಯ ಸುತ್ತಲೂ ಉದ್ಯಾನ ನಿರ್ಮಿಸಿ, ಕಬ್ಬಿಣದ ಸರಳುಗಳನ್ನು ಹಾಕಿದ್ದಾರೆ. ಆದರೆ, ಇದು ಎಲ್ಲ ಕೆರೆಗಳಿಗೂ ವಿಸ್ತರಣೆಯಾಗಿಲ್ಲ.

ಧಾರವಾಡ ತಾಲ್ಲೂಕಿನ ಡೋರಿ ಕೆರೆ, ಮುಗದ ಕೆರೆ, ಹುಲಿಕೇರಿ ಕೆರೆ, ಬೆಣಚಿ ಕೆರೆಯ ಸುತ್ತಲೂ ರೈತರು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಅದನ್ನು ತಡೆಯುವ ಯತ್ನಗಳು ಫಲ ನೀಡಿಲ್ಲ.

‘ಎಷ್ಟೋ ಕೆರೆಗಳ ಪಕ್ಕದಲ್ಲೇ ಇಟ್ಟಿಗೆ ಭಟ್ಟಿಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಕೆರೆ, ಹೀಗಾಗಿ, ಇದನ್ನು ಒತ್ತುವರಿಯಾಗಲು ಬಿಡಬಾರದು ಎಂಬ ಕಾಳಜಿ ಜನಮಾನಸದಲ್ಲಿ ಮೂಡದೇ ಇರುವುದು ವಿಷಾದನೀಯ’ ಎನ್ನುತ್ತಾರೆ ಧಾರವಾಡದ ಸ್ಕೋಪ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಪ್ರಕಾಶ ಭಟ್‌.

‘ಒತ್ತುವರಿ ತಡೆಗೆ ಜಿಲ್ಲಾಡಳಿತ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ನೈಸರ್ಗಿಕವಾಗಿ ನಿರ್ಮಾಣ ಕೆರೆಗಳನ್ನು ಕೊಡಬೇಕು’ ಎನ್ನುತ್ತಾರೆ ಗ್ರೀನ್‌ ಆರ್ಮಿ ಮುಖ್ಯಸ್ಥ ಪ್ರಕಾಶ ಗೌಡರ.

‘ರಾಜಕಾರಣಿಗಳದ್ದೇ ಕುಮ್ಮಕ್ಕು’

ಪ್ರಾಮಾಣಿಕವಾಗಿ ಹೇಳುವುದಾದರೆ ಬಹುತೇಕ ಕೆರೆ ಒತ್ತುವರಿಗಳ ಹಿಂದೆ ಅಲ್ಲಿನ ರಾಜಕಾರಣಿಗಳ ಕುಮ್ಮಕ್ಕು ಹಾಗೂ ಅಭಯ ಹಸ್ತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒತ್ತುವರಿ ತೆರವುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬಹುದೇ ಹೊರತು ಪೂರ್ತಿಯಾಗಿ ಈ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೇವೆ ಎಂದು ಹೇಳಲಾಗುವುದಿಲ್ಲ.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿಯನ್ನು ನನಗೆ ವಹಿಸಿದ್ದರು. ಆಗ ಕೆರೆಗಳ ಸರ್ವೆ ಮಾಡಿಸಿ, ಸುತ್ತಲೂ ಬೇಲಿ ಹಾಕಿಸಲು ಮುಂದಾದೆ. ಈ ಸಂದರ್ಭದಲ್ಲಿ ಬಂದ ಕೆಲವರು, ನೀವು ಹೀಗೆ ಮಾಡಿದರೆ ನಾವೇನು ಮಣ್ಣು ತಿನ್ನೋಣವೇ ಎಂದು ಪ್ರಶ್ನಿಸಿದರು. ಇದು ಸದ್ಯದ ಪರಿಸ್ಥಿತಿ. ಕೆರೆ ಒತ್ತುವರಿ ಮಾಡಲು, ಅಕ್ರಮ ಸಕ್ರಮ ಮಾಡಲು ಹೆಚ್ಚು ಪೈಪೋಟಿ ಕಂಡು ಬರುತ್ತದೆ. ಇದು ವಿಷಾದನೀಯ – ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ.

‘ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’

ಸಮುದಾಯದ ಉಪಯೋಗಕ್ಕಾಗಿ ಇರುವ ಕೆರೆಗಳನ್ನು ಖಾಸಗಿಯವರು ಒತ್ತುವರಿ ಮಾಡಿದರೆ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಅಧಿಕಾರಿ ವರ್ಗದವರ ಪಾತ್ರ ಬಹಳ ಮಹತ್ವದ್ದಾಗಿದೆ. ಅವರು, ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಗೊತ್ತಿರುತ್ತದೆ. ಆದರೂ, ಅವರು ಕ್ರಮ ಕೈಗೊಳ್ಳುವುದಿಲ್ಲ. ಇಂಥ ಧೋರಣೆಗಳು ಸರಿಯಲ್ಲ. ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನಕ್ಷೆಯಲ್ಲಿ ಕೆರೆ ಎಂದಿದ್ದರೆ, ವಾಸ್ತವದಲ್ಲಿ ಇರುವುದಿಲ್ಲ. ಕೆರೆಯ ಅಕ್ಕ ಪಕ್ಕ ಮನೆಗಳನ್ನು ಕಟ್ಟಿಕೊಳ್ಳುವ ಜನರು ಕ್ರಮೇಣ, ಮಳೆಯಾಗದೇ ಕೆರೆ ಸಂಪೂರ್ಣ ಒಣಗಿ ಹೋದಾಗ ಅಲ್ಲಿಯೂ ಗುಡಿಸಲುಗಳನ್ನು ಹಾಕಿಕೊಳ್ಳುತ್ತಾರೆ. ಇದು ತಪ್ಪಬೇಕು – ಅನ್ವರ್‌ ಮುಧೋಳ, ಹುಡಾ ಅಧ್ಯಕ್ಷರು.

ಕೆರೆ ಅಂಗಳದಲ್ಲಿ ಹೌಸಿಂಗ್ ಬೋರ್ಡ್‌ ಮನೆ

ಕೆರೆ ಒತ್ತುವರಿ ತಡೆಯುವ ಆಸಕ್ತಿ ರಾಜಕಾರಣಿಗಳಿಗೂ ಇಲ್ಲ. ಅಧಿಕಾರಿಗಳಿಗೂ ಇಲ್ಲ. ಇದರಿಂದಾಗಿಯೇ ಬತ್ತಿ ಹೋದ ಹಲವಾರು ಕೆರೆ ಅಂಗಳದಲ್ಲಿ ಹೌಸಿಂಗ್‌ ಬೋರ್ಡ್‌ನ ಮನೆಗಳು ಎದ್ದು ನಿಂತಿವೆ. ನಮ್ಮ ಮನೆಯ ಮುಂದಿನ ಜಾಗವನ್ನು ಯಾರಾದರೂ ಕಬಳಿಸುತ್ತಾರೆ ಎಂದು ಗೊತ್ತಾದರೆ ಕೂಡಲೇ ಪ್ರತಿರೋಧ ಒಡ್ಡುತ್ತೇವೆ. ಆದರೆ, ಕೆರೆಯನ್ನು ಯಾರಾದರೂ ನುಂಗುತ್ತಾರೆ ಎಂದರೆ ನಮಗೇನೂ ಅನಿಸುವುದಿಲ್ಲ. ನ್ಯಾಯಾಲಯಗಳ ತೀರ್ಪಿನಿಂದ
ಕೆರೆಗಳ ಅತಿಕ್ರಮಣಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ. ಸರ್ಕಾರೇತರ ಸಂಸ್ಥೆಗಳಿಂದ ಮಾತ್ರ ಕೆರೆಗಳ ರಕ್ಷಣೆ ಸಾಧ್ಯ. ಹಾಗಾಗಿ, ಎನ್‌ಜಿಒಗಳಿಗೆ ಕೆರೆ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು – ಪಾಂಡುರಂಗ ಪಾಟೀಲ, ಪಾಲಿಕೆ ಸದಸ್ಯ.

‘ಜನತೆಯೇ ಜಾಗೃತರಾಗಬೇಕು’

‌ಕೆರೆಗಳನ್ನು ಉಳಿಸಿಕೊಳ್ಳುವ ಹಂಬಲ ಗ್ರಾಮಸ್ಥರಲ್ಲಿ ಬರಬೇಕು. ಆದರೆ, ಕಾಲ ಕಳೆದಂತೆ ಇದು ಕಡಿಮೆಯಾಗುತ್ತಿರುವುದು ವಿಷಾದನೀಯ. ಸಾಮೂಹಿಕ ಶ್ರಮದಿಂದ ಒಂದು ಕಾಲದಲ್ಲಿ ನಿರ್ಮಿಸಲಾಗಿದ್ದ ಕೆರೆಗಳಲ್ಲಿ ಇಂದು ಮೈದಾನಗಳು, ಕಲ್ಯಾಣ ಮಂಟಪಗಳು ನಿರ್ಮಾಣವಾಗುತ್ತಿರುವುದು ವಿಷಾದನೀಯ. ನಾನು, ಕಲಘಟಗಿ ತಾಲ್ಲೂಕಿನ ಭೋಗೆನಾಗರಕೊಪ್ಪ ಹಾಗೂ ಸೂರಶೆಟ್ಟಿಕೊಪ್ಪದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೆರೆಯನ್ನು ಮುಚ್ಚಿ ಆಟದ ಮೈದಾನ, ಕಲ್ಯಾಣ ಮಂಟಪ ಕಟ್ಟಿಸುವ ಪ್ರಸ್ತಾವವನ್ನು ಗ್ರಾಮಸ್ಥರು ಇಟ್ಟಿದ್ದರು. ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಜನರ ಮನಸ್ಥಿತಿ ಈ ಮಟ್ಟಿಗೆ ಬದಲಾಗಿದೆ. ಮಹಾರಾಷ್ಟ್ರದ ಪಾನಿ ಫೌಂಡೇಷನ್‌ನಂತೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿರಬೇಕು. ಸರ್ಕಾರ ನಮ್ಮ ಸಹಾಯಕ್ಕೆ ಬರಲಿ, ಬಿಡಲಿ. ನಮ್ಮ ಪ್ರಯತ್ನ ಮುಂದುವರಿಸಬೇಕು – ಡಾ. ಪ್ರಕಾಶ ಭಟ್‌ ಸ್ಕೋಪ್‌ ಸಂಸ್ಥೆಯ ಸಿಇಒ,

‘ಜನರು–ಸರ್ಕಾರಗಳು ಒಂದಾಗಬೇಕು’

ಕೆರೆ ಒತ್ತುವರಿಯಂಥ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಸರ್ಕಾರದಿಂದಲೇ ಕೆರೆ ಒತ್ತುವರಿ ತಡೆಯಲು ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಜನರ ಸಹಭಾಗಿತ್ವ ಇದ್ದಾಗ ಮಾತ್ರ ಕೆರೆ ಒತ್ತುವರಿ ಮಾಡುವ ಶಕ್ತಿಗಳನ್ನು ತಡೆಯಬಹುದು. ಕೆಲಗೇರಿ ಕೆರೆ ಹೂಳೆತ್ತಲು ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ಪ್ರಾಧಿಕಾರದ ಬಳಿ ₹1.50 ಕೋಟಿ ಇತ್ತು. ಅದನ್ನು ಬಳಸಿಕೊಂಡು ಕೆರೆ ಒತ್ತುವರಿ ತಡೆಯುವುದರ ಜತೆಗೆ ಅಭಿವೃದ್ಧಿಯನ್ನೂ ಮಾಡಬಹುದಾಗಿದೆ – ಡಾ. ರಾಜೇಂದ್ರ ಪೋದ್ದಾರ ನೆಲ ಮತ್ತು ನೀರು ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕರು, ಧಾರವಾಡ

**

ಕೆರೆಯನ್ನು ಯಾರು ಒತ್ತುವರಿ ಮಾಡಿದ್ದಾರೆ ಎಂಬ ಮಾಹಿತಿ ಕೊಟ್ಟರೆ, ಅವರು ಜಾಗೃತರಾಗುವ ಸಂಭವವಿದೆ. ಹಾಗಾಗಿ, ಆ ಮಾಹಿತಿ ಹಂಚಿಕೊಳ್ಳುವುದಿಲ್ಲ – ಎಸ್‌.ನಿಸಾರ್‌ ಅಹ್ಮದ್‌, ಭೂಮಾಪನ ಇಲಾಖೆ ಜಿಲ್ಲಾ ಅಧಿಕಾರಿ, ಧಾರವಾಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT