ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕಾರ್ಡ್‌, ಬೆರಳಚ್ಚು ಬಳಸಿ ವಂಚನೆ: ಬಿಹಾರದ ನಾಲ್ವರ ಬಂಧನ

Published 17 ಜನವರಿ 2024, 22:44 IST
Last Updated 17 ಜನವರಿ 2024, 22:44 IST
ಅಕ್ಷರ ಗಾತ್ರ

ಬೆಂಗಳೂರು: ಆಧಾರ್‌ ಕಾರ್ಡ್‌ ಹಾಗೂ ಬೆರಳಚ್ಚು ಬಳಸಿ ಬ್ಯಾಂಕ್‌ನಲ್ಲಿದ್ದ ಸಾರ್ವಜನಿಕರ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಬಿಹಾರದ ನಾಲ್ವರು ಆರೋಪಿಗಳನ್ನು ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ರೆಹಮಾನ್, ಅಬುಜರ್, ಆರೀಫ್, ನಾಶೀರ್ ಅಹಮದ್ ಬಂಧಿತರು.

ಈ ವಂಚನೆ ಸಂಬಂಧ 120ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್ ಅವರು ಎಸ್‌ಐಟಿ ರಚಿಸಿ, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ‌ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ಹೋಗದೇ ಕೇವಲ ಆಧಾರ್ ಬಳಸಿಕೊಂಡು ಹಣ ಪಡೆಯಲು ದೇಶದಲ್ಲಿ ಎಇಪಿಎಸ್ (ಆಧಾರ್‌ ಆಧಾರಿತ ಹಣ ಪಾವತಿ ವ್ಯವಸ್ಥೆ) ಜಾರಿಗೆ ತರಲಾಗಿತ್ತು. ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡ ಸೈಬರ್ ವಂಚಕರು ಜನರ ಖಾತೆಗಳಲ್ಲಿರುವ ಹಣ ದೋಚುತ್ತಿದ್ದರು.

ಬಂಧಿತರು, ಸರ್ಕಾರದ ಕಂದಾಯ ಇಲಾಖೆ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯುತ್ತಿದ್ದರು. ಹಣ ದೋಚುವ ಜತೆಗೆ ಅರೋಪಿಗಳು ವೆಬ್‌ಸೈಟ್‌ನಿಂದ ಮಾಹಿತಿ ಪಡೆದು, ₹5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಗ್ರಾಹಕರ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸದ ಮೂಲಕ ವೆಬ್‌ಸೈಟ್‌ಗೆ ಪ್ರವೇಶಿಸುತ್ತಿದ್ದ ಆರೋಪಿಗಳು, ಅದರಲ್ಲಿದ್ದ ಸಾರ್ವಜನಿಕರ ನೋಂದಣಿ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದರು. ಬಳಿಕ, ಅದರಲ್ಲಿರುವ ಆಧಾರ್ ಸಂಖ್ಯೆ, ಬೆರಳಚ್ಚನ್ನು ಫೋಟೊ ಪ್ರಿಂಟ್ ಹಾಳೆ ಮೇಲೆ ನಕಲು ಮಾಡಿಕೊಳ್ಳುತ್ತಿದ್ದರು. ಎಇಪಿಎಸ್ (ಆಧಾರ್ ಎನೆಬಲ್ ಪೇಮೆಂಟ್ ಸಿಸ್ಟಂ) ಸೌಲಭ್ಯದ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಗ್ರಾಹಕರು ಬ್ಯಾಂಕ್‌ ಖಾತೆಯ ಮಾಹಿತಿ, ಒಟಿಪಿ ನೀಡದಿದ್ದರೂ ಖಾತೆಯಿಂದ ಆರೋಪಿಗಳು ಹಣ ಪಡೆದುಕೊಳ್ಳುತ್ತಿದ್ದರು. ಯಾವುದೇ ಅಪರಿಚಿತರು ಲಿಂಕ್‌ ತೆರೆಯದೇ ಇದ್ದರೂ ವಂಚಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಂಚನೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ವಂಚಕರು ಸ್ಥಳೀಯವಾಗಿ ಗ್ರಾಹಕರ ಸೇವಾ ಕೇಂದ್ರ ತೆರೆದಿದ್ದರು. ಅಲ್ಲಿ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸರ್ಕಾರಿ ಇಲಾಖೆಯ ವೆಬ್​ಸೈಟ್‌ಗಳಲ್ಲಿ ಸಿಗುವ ಬೆರಳಚ್ಚು ಹಾಗೂ ಆಧಾರ್ ನಂಬರ್ ಇರುವ ದಾಖಲಾತಿ ಕಳವು ಮಾಡುತ್ತಿದ್ದರು.

ಎಇಪಿಎಸ್ ವ್ಯವಸ್ಥೆ ಮೂಲಕ ಹಣ ರವಾನೆ ಮಾಡುವಾಗ ಬ್ಯಾಂಕ್ ಖಾತೆದಾರರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಇನ್ನಿತರ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT