ಪಾರ್ಕಿಂಗ್‌ ಕಟ್ಟಡ ಕಾಮಗಾರಿ ಪರಿಶೀಲನೆ

7
ಸ್ವಾತಂತ್ರ್ಯ ಉದ್ಯಾನವನ

ಪಾರ್ಕಿಂಗ್‌ ಕಟ್ಟಡ ಕಾಮಗಾರಿ ಪರಿಶೀಲನೆ

Published:
Updated:

ಬೆಂಗಳೂರು: ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಸ್ವಾತಂತ್ರ್ಯ ಉದ್ಯಾನವನದ ಬಳಿ ನಿರ್ಮಿಸುತ್ತಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡ ಕಾಮಗಾರಿ ಪ್ರಗತಿಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪರಿಶೀಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ₹ 80 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಪಾರ್ಕಿಂಗ್ ಕಟ್ಟಡದಲ್ಲಿ 500 ಕಾರು ಮತ್ತು 500 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಪರಿಶೀಲನೆ ವೇಳೆ ನೆಲ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಪರಮೇಶ್ವರ ಅವರು, ಎಂಜಿನಿಯರ್‌ ಲೋಕೇಶ್‌ ಅವರನ್ನು ಕರೆದು ತರಾಟೆ ತೆಗೆದುಕೊಂಡರು. ‘ನಿರ್ಮಾಣ ಹಂತದಲ್ಲೇ ಕಳಪೆ ಕಾಮಗಾರಿ ಕಂಡುಬಂದಿದೆ. ಇನ್ನು ಮುಂದೆ ಬಿರುಕು ಬಾರದಂತೆ ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ಜೆ.ಸಿ ರಸ್ತೆಯಲ್ಲೂ ಬಹುಮಹಡಿ ಪಾರ್ಕಿಂಗ್ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿಗೂ ಭೇಟಿ ನೀಡಲಿದ್ದೇನೆ. ಎಲ್ಲ ಕಾಮಗಾರಿಗಳೂ ಶೀಘ್ರವೇ ಮುಗಿಯಲಿವೆ’ ಎಂದು ಭರವಸೆ ನೀಡಿದರು.

‘ಬೆಂಗಳೂರಿನಲ್ಲಿ ದಿನೆದಿನೇ ಪಾರ್ಕಿಂಗ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಸುಗಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅಗತ್ಯ‌ ಸ್ಥಳಗಳಲ್ಲಿ‌ ವಾಹನ ನಿಲುಗಡೆಗೆ ಬಹುಮಹಡಿ‌‌ ಕಟ್ಟಡಗಳನ್ನು‌‌‌ ನಿರ್ಮಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಮಾಫಿಯಾಗಳ ಮಟ್ಟಹಾಕಲು ಕ್ರಮ: ಕಸ ವಿಲೇವಾರಿ ಗುತ್ತಿಗೆ ಮಾಫಿಯಾಗಳ ಕೈಯಲ್ಲಿದೆ ಎಂಬ ಸಂಗತಿ ಗಮನಕ್ಕೆ ಬಂದಿದ್ದು, ಅದನ್ನು ಮಟ್ಟ ಹಾಕಲಾಗುವುದು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದರು.

ಶಾಸಕ ದಿನೇಶ್‌ ಗುಂಡೂರಾವ್‌, ಮೇಯರ್ ಸಂಪತ್ ರಾಜು, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್,  ಮುಖ್ಯ ಎಂಜಿನಿಯರ್(ಯೋಜನೆ) ಕೆ.ಟಿ.ನಾಗರಾಜು  ಇದ್ದರು.‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !