ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಗಳಲ್ಲಿ ದೇಗುಲ, ಮಸೀದಿ, ಚರ್ಚ್‌: ಹೈಕೋರ್ಟ್ ಆಕ್ರೋಶ

Published 12 ಜನವರಿ 2024, 14:03 IST
Last Updated 12 ಜನವರಿ 2024, 14:03 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನೆಲ್ಲಾ ನಿರ್ಮಿಸುತ್ತಾ ಹೋದರೆ ಶ್ರೀಸಾಮಾನ್ಯರು ಏನು ಮಾಡಬೇಕು? ಎಂದು ಹೈಕೋರ್ಟ್‌, ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿದೆ.

‘ನಗರದ ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆ‘ ಎಂದು ಆಕ್ಷೇಪಿಸಿ ಸುಂಕದಕಟ್ಟೆ ಗಜಾನನ ನಗರದ ಸಿ.ಹೊನ್ನಯ್ಯ ಸೇರಿದಂತೆ ಒಟ್ಟು ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಸಿ.ಷಣ್ಮುಖ ಅವರು, ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ ಸಂಖ್ಯೆ 71ರ ಹೆಗ್ಗನಹಳ್ಳಿ ಮುಖ್ಯ ರಸ್ತೆಯ ಸುಂಕದಕಟ್ಟೆ ಮಾರ್ಗದಲ್ಲಿ ರಸ್ತೆ ಒತ್ತುವರಿ ಮಾಡಿ ದೇವಸ್ಥಾನ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ರಸ್ತೆ ಸಂಚಾರಕ್ಕೆ  ನಿರ್ಬಂಧ ವಿಧಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವಿವರಣೆಗೆ ನ್ಯಾಯಮೂರ್ತಿ ದೀಕ್ಷಿತ್‌ ಅವರು ಬಿಬಿಎಂಪಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ನಾವು ಸಾರ್ವಜನಿಕ ಆಸ್ತಿಯ ರಕ್ಷಕರು. ಸಾರ್ವಜನಿಕ ರಸ್ತೆಗಳಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನೆಲ್ಲಾ ನಿರ್ಮಿಸುತ್ತಾ ಹೋದರೇ ಶ್ರೀಸಾಮಾನ್ಯರು ಏನು ಮಾಡಬೇಕು? ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದರೆ ನಾವು ಅದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಅಂತಿಮವಾಗಿ ನ್ಯಾಯಪೀಠವು, ‘ದೇವಸ್ಥಾನ ನಿರ್ಮಿಸಲು ರಸ್ತೆ ಒತ್ತುವರಿ ಮಾಡಲಾಗಿದೆಯೇ ಅಥವಾ ಟ್ರಸ್ಟ್‌ ಸದಸ್ಯರು ಹೇಳುವಂತೆ ಹಲವು ವರ್ಷಗಳಿಂದ ಅಲ್ಲಿ ದೇವಸ್ಥಾನ ಇತ್ತೇ ಎಂಬುದನ್ನು ಉಲ್ಲೇಖಿಸಲು ಬಿಬಿಎಂಪಿ ವಿಫಲವಾಗಿದೆ‘ ಎಂದು ಆದೇಶದಲ್ಲಿ ದಾಖಲಿಸಿತು.

‘ಈ ಹಿನ್ನೆಲೆಯಲ್ಲಿ ಸ್ವತಂತ್ರ ಪ್ರಾಧಿಕಾರದಿಂದ ಸ್ಪಷ್ಟ ವರದಿ ಪಡೆಯುವುದು ಸೂಕ್ತವಾಗಿದೆ. ಸಂಬಂಧಿಸಿದ ಎಲ್ಲರಿಗೂ ನೋಟಿಸ್‌ ಜಾರಿ ಮಾಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕರು (ಡಿಡಿಎಲ್‌ಆರ್‌) ತಾಂತ್ರಿಕ ಪರಿಣತರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಬೇಕು. ಮೂರು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು’ ಎಂದು ಆದೇಶಿಸಿ ವಿಚಾರಣೆಯನ್ನು ಫೆಬ್ರುವರಿ 9ಕ್ಕೆ ಮುಂದೂಡಿತು. ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್‌ ಸದಸ್ಯರ ಪರವಾಗಿ ಹಿರಿಯ ವಕೀಲ ಡಿ.ಆರ್‌.ರವಿಶಂಕರ್‌ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT