ಎಲ್ಲ ಹೋರ್ಡಿಂಗ್‌ಗಳೂ ಅನಧಿಕೃತ: ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌

7

ಎಲ್ಲ ಹೋರ್ಡಿಂಗ್‌ಗಳೂ ಅನಧಿಕೃತ: ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌

Published:
Updated:

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಹೋರ್ಡಿಂಗ್‌ಗಳೂ ಅಕ್ರಮ. ಅವುಗಳೆಲ್ಲವನ್ನೂ ತೆಗೆಸಲು ಕ್ರಮ ಕೈಗೊಳ್ಳುತ್ತೇವೆ’ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರ ಸ್ಪಷ್ಟೋಕ್ತಿ ಇದು.

ವರ್ಷದಿಂದ ಪರವಾನಗಿ ನೀಡಿಲ್ಲ: ‘ಜಾಹೀರಾತು ಏಜೆನ್ಸಿಗಳು ಮೂರು ವರ್ಷಕ್ಕೊಮ್ಮೆ ಹಾಗೂ ಅವರು ಅಳವಡಿಸುವ ಜಾಹೀರಾತಿಗೆ ಪ್ರತಿವರ್ಷ ಪರವಾನಗಿ ನವೀಕರಿಸಬೇಕು. ಆದರೆ, ಹೊಸ ಜಾಹೀರಾತು ನೀತಿ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿ ಇರುವುದರಿಂದ ಒಂದು ವರ್ಷದಿಂದ ಯಾವುದೇ ಹೋರ್ಡಿಂಗ್‌ ಪರವಾನಗಿ ನವೀಕರಿಸಿಲ್ಲ. ಹೊಸ ಪರವಾನಗಿಯನ್ನೂ ನೀಡಿಲ್ಲ. ಹಾಗಾಗಿ ನಗರದಲ್ಲಿ ಅಧಿಕೃತ ಹೋರ್ಡಿಂಗ್‌ಗಳಿರಲು ಸಾಧ್ಯವೇ ಇಲ್ಲ. ಅವುಗಳೆಲ್ಲವನ್ನು ತೆರವುಗೊಳಿಸಲು ಯಾವುದೇ ಸಮಸ್ಯೆಯೂ ಇಲ್ಲ’ ಎಂದು ಅವರು ತಿಳಿಸಿದರು.

‘ನಗರದಲ್ಲಿ ಮೂರು ರೀತಿಯ ಅನಧಿಕೃತ ಹೋರ್ಡಿಂಗ್‌ಗಳಿವೆ. ಒಂದು ಪಾಲಿಕೆಗೆ ಸೇರಿದ ಪಾದಚಾರಿ ಮಾರ್ಗ, ರಾಜಕಾಲುವೆ ಬಳಿ ಅನಧಿಕೃತವಾಗಿ ಅಳವಡಿಸಿರುವಂಥವು. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಪಾಲಿಕೆಯ ಜಾಹೀರಾತು ಬೈಲಾಗಳನ್ನು ಪಾಲಿಸದೆಯೇ ಅಳವಡಿಸಿರುವಂಥವು. ಉಳಿದವು ಖಾಸಗಿ ಜಾಗಗಳಲ್ಲಿ ಹಾಕಿರುವಂಥವು’ ಎಂದರು.

‘ಖಾಸಗಿ ಜಾಗದಲ್ಲಿ ಹೋರ್ಡಿಂಗ್‌ ಅಳವಡಿಸಲು ಅವಕಾಶ ಕಲ್ಪಿಸುವ ಮುನ್ನ ಜಾಗದ ಮಾಲೀಕರು ಸ್ಟ್ರಕ್ಚರಲ್‌ ಎಂಜಿನಿಯರ್‌ ಅವರಿಂದ ಪಡೆದ ಪ್ರಮಾಣಪತ್ರವನ್ನು ಪಾಲಿಕೆಗೆ ಒದಗಿಸಬೇಕು. ಸೆಟ್‌ಬ್ಯಾಕ್‌ ಬಿಟ್ಟ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸುವುದಕ್ಕೆ ಅವಕಾಶ ಇಲ್ಲ. ಯಾರೂ ಈ ನಿಯಮ ಪಾಲಿಸಿಲ್ಲ. ಹಾಗಾಗಿ ಖಾಸಗಿ ಜಾಹೀರಾತುಗಳೆಲ್ಲವೂ ಅಕ್ರಮ’ ಎಂದು ಅವರು ವಿವರಿಸಿದರು.

‘ಪಾಲಿಕೆ ಜಾಗದಲ್ಲಿರುವ ಹೋರ್ಡಿಂಗ್‌ಗಳನ್ನು ತೆಗೆಸುವ ಹೊಣೆ ನಮ್ಮದು. ಖಾಸಗಿ ಜಾಗದಲ್ಲಿರುವ ಹೋರ್ಡಿಂಗ್‌ಗಳನ್ನು ಆಯಾ ಜಾಗದ ಮಾಲೀಕರೇ ತೆಗೆಸಬೇಕು. ಇದೇ 8ರಂದು ಪಾಲಿಕೆ ವತಿಯಿಂದ ಕೆಂಪೇಗೌಡ ದಿನಾಚರಣೆ ಹಮ್ಮಿಕೊಳ್ಳಲಿದ್ದು, ಅಧಿಕಾರಿಗಳು ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆ ಕಾರ್ಯಕ್ರಮ ಮುಗಿದ ಬಳಿಕ ಖಾಸಗಿಯವರಿಗೆ 15 ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಅವರು ಹೋರ್ಡಿಂಗ್‌ ತೆರವುಗೊಳಿಸದಿದ್ದರೆ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ, ನಾವೇ ತೆರವುಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಸುಮಾರು 150 ಹೋರ್ಡಿಂಗ್‌ಗಳಿಗೆ ಸಂಬಂಧಿಸಿ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದೆ. ಅವುಗಳನ್ನು ತೆರವುಗೊಳಿಸಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ. ಪಾಲಿಕೆ ಇಂದು ತೆಗೆದುಕೊಂಡ ನಿರ್ಣಯವನ್ನು ನ್ಯಾಯಾಲಯಕ್ಕೆ ವಿವರಿಸಿ, ಅವುಗಳ ತೆರವಿಗೂ ಪ್ರಯತ್ನಿಸಬಹುದು’ ಎಂದರು.

ಹೆಬ್ಬಾಳ ಮೇಲ್ಸೇತುವೆ ಬಳಿ ಹೋರ್ಡಿಂಗ್‌ ಅಳವಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟೆಂಡರ್‌ ಕರೆದ ವಿಚಾರ ಗಮನಕ್ಕೆ ಬಂದಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಮೆಟ್ರೊ ಮಾರ್ಗಗಳ ಕಂಬಗಳಲ್ಲಿ ಜಾಹೀರಾತು ಅಳವಡಿಸುತ್ತಿರುವ ಸಂಬಂಧ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಜೊತೆ ಚರ್ಚೆ ನಡೆಸುತ್ತಿದ್ದೇವೆ. ಅವರು ಪಾಲಿಕೆ ಜೊತೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಏನು ಷರತ್ತು ವಿಧಿಸಲಾಗಿದೆ ಎಂಬುದ್ನು ನೋಡಿಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

‘ಪಾಲಿಕೆಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದ ರಶ್ಮಿ ಅವರು ಒಟ್ಟು ₹ 365 ಕೋಟಿ ಬಾಕಿ ತೆರಿಗೆ ವಸೂಲಿ ಮಾಡಲು ಜಾಹೀರಾತು ಸಂಸ್ಥೆಗಳಿಗೆ ನೋಟಿಸ್‌ ನೀಡಿದ್ದರು. ಅದರಲ್ಲಿ ಇನ್ನೂ ವಸೂಲಿ ಬಾಕಿ ಇದೆ. ಇದನ್ನು ಮಾಡುತ್ತೀರೋ ಇಲ್ಲವೋ ಎಂದು ಸ್ಪಷ್ಟಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

 ‘ಅನಧಿಕೃತ ಫ್ಲೆಕ್ಸ್‌ ಹಾವಳಿಗೆ ಹಾಗೂ ಜಾಹೀರಾತು ತೆರಿಗೆ ಸರಿಯಾಗಿ ಸಂಗ್ರಹಿಸದಿರುವುದಕ್ಕೆ ಅಧಿಕಾರಿಗಳೂ ಹೊಣೆ. ಎರಡು ವರ್ಷಗಳಲ್ಲಿ ₹ 65 ಕೋಟಿಯಷ್ಟು ಜಾಹೀರಾತು ತೆರಿಗೆ ವಸೂಲಿ ಬಾಕಿ ಇದೆ. ಇದನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರ ತಂಗುದಾಣ ಹಾಗೂ ಸ್ಕೈವಾಕ್‌ಗಳಲ್ಲಿ ಜಾಹೀರಾತು ಅಳವಡಿಸಲು ಪಾಲಿಕೆಯೇ ಒಪ್ಪಂದ ಮಾಡಿಕೊಂಡಿದೆ. ಇವುಗಳನ್ನು ತೆಗೆಸಬೇಕಾದರೆ ಕಾನೂನು ತಜ್ಞರ ಸಲಹೆ ಪಡೆಯಬೇಕಾಗುತ್ತದೆ’ ಎಂದು ಆಯುಕ್ತರು ತಿಳಿಸಿದರು. 
**
‘ಡೀಮ್ಡ್‌ ಪರವಾನಗಿ ಪ್ರಶ್ನೆ ಉದ್ಭವಿಸದು’

ಜಾಹೀರಾತು ಅಳವಡಿಕೆಗೆ ಸಂಬಂಧ ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ಪಾಲಿಕೆ 45 ದಿನಗಳ ಒಳಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ಅದಕ್ಕೆ ಡೀಮ್ಡ್‌ ಪರವಾನಗಿ ಲಭಿಸುತ್ತದೆ. ಆದರೆ, ನಾವು ಒಂದು ವರ್ಷದಿಂದ ಪರವಾನಗಿಯನ್ನೇ ನವೀಕರಿಸಿಲ್ಲ. ಹಾಗಾಗಿ ಡೀಮ್ಡ್‌ ಪರವಾನಗಿಗಳೂ ಊರ್ಜಿತವಾಗುವುದಿಲ್ಲ’ ಎಂದು ಆಯುಕ್ತರು ತಿಳಿಸಿದರು.
*
ಅಂಕಿ ಅಂಶ

5,522
ಹೋರ್ಡಿಂಗ್‌ಗಳು ನಗರದಲ್ಲಿವೆ

₹ 331.92 ಕೋಟಿ
ಜಾಹೀರಾತು ಕಂಪನಿಗಳು ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ಹಣ

₹ 149 ಕೋಟಿ
ಜಾಹೀರಾತು ಕಂಪನಿಗಳು ಬಾಕಿ ಉಳಿಸಿಕೊಂಡಿರುವ ತೆರಿಗೆ

₹ 155.17 ಕೋಟಿ
ಜಾಹೀರಾತು ಕಂಪನಿಗಳು ಪಾವತಿಸಬೇಕಾದ ದಂಡ

₹ 26.75 ಕೋಟಿ
ಕಂಪನಿಗಳು ಪಾವತಿಸಬೇಕಾದ ಬಡ್ಡಿಯ ಒಟ್ಟು ಮೊತ್ತ
**

ಪಾಲಿಕೆ ಸದಸ್ಯರು ಏನಂದರು?

* ದುಬೈನಲ್ಲಿ ವಾಹನ ನಿಲುಗಡೆ ಶುಲ್ಕ ಹಾಗೂ ಜಾಹೀರಾತು ಹೋರ್ಡಿಂಗ್‌ಗಳಿಂದ ಬರುವ ಆದಾಯದಿಂದಲೇ ಸ್ಥಳೀಯ ಸಂಸ್ಥೆಗಳನ್ನು ನಡೆಸಲಾಗುತ್ತದೆ. ನಮ್ಮಲ್ಲೂ ಈ ಸಾಧ್ಯತೆ ಬಗ್ಗೆ ಪ್ರಯತ್ನಿಸಬಹುದು–ಸಂಪತ್‌ರಾಜ್‌, ಮೇಯರ್‌

* ಜಾಹೀರಾತಿನ ಹೊಸ ನೀತಿ ರೂಪಿಸುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೋರ್ಡಿಂಗ್‌ ಅಳವಡಿಸಲು ಮೀಸಲಾತಿ ಕಲ್ಪಿಸಬೇಕು– ಶಿವರಾಜ್‌, ಆಡಳಿತ ಪಕ್ಷದ ನಾಯಕ

* ಹೋರ್ಡಿಂಗ್‌ ಹಾಗೂ ಫ್ಲೆಕ್ಸ್‌ಗಳನ್ನು ಸಂಪೂರ್ಣ ನಿಷೇಧಿಸುವ ಮುನ್ನ ಇದರಿಂದ ಸೃಷ್ಟಿಯಾಗುವ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಗಮನ ಹರಿಸಬೇಕು –ರಿಜ್ವಾನ್‌ ಮೊಹಮ್ಮದ್‌ ನವಾಬ್‌

* ನಮ್ಮ ಭಾವಚಿತ್ರವಿರುವ ಫ್ಲೆಕ್ಸ್‌ ಹಾಕಿಸಿಕೊಳ್ಳಲು ನಾವೇನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವಾ? ಅಥವಾ ಉಪಗ್ರಹ ಉಡ್ಡಯನದಂತಹ ಸಾಧನೆ ಮಾಡಿದ್ದೇವಾ? ಮೊದಲು ನಾವು ಮಾದರಿ ಆಗಬೇಕು– ಪ್ರತಿಭಾ ಧನರಾಜ್

* ವರಮಾನ ಗಳಿಸುವುದಕ್ಕಿಂತ ನಗರದ ಅಂದ ಉಳಿಸಿಕೊಳ್ಳುವುದಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ಸಿಗಬೇಕು – ಲಾವಣ್ಯ ಗಣೇಶ್‌ ರೆಡ್ಡಿ

* ಶಾಲಾ ವಠಾರದಲ್ಲಿ ಹೋರ್ಡಿಂಗ್‌ ಹಾಕಲು ಅವಕಾಶವಿಲ್ಲ. ಆದರೆ, ಪಾಲಿಕೆ ಕಚೇರಿಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಶಾಲಾ ವಠಾರದಲ್ಲಿ 42 ಹೋರ್ಡಿಂಗ್‌ಗಳಿವೆ – ಉಮೇಶ್‌ ಶೆಟ್ಟಿ

* ಬೇಲಿಯೇ ಇಲ್ಲದ ಸ್ಥಿತಿ ಬಿಬಿಎಂಪಿಯದ್ದು. ಜಾಹೀರಾತು ಕಂಪನಿಗಳು ನಮಗೆ ಕಡ್ಲೆಕಾಯಿ ನೀಡಿ ಆನೆಯನ್ನು ಪಡೆದುಕೊಂಡು ಹೋಗುತ್ತಿವೆ– ಲಕ್ಷ್ಮೀನಾರಾಯಣ

* ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ ನಿಷೇಧದಿಂದ ಕಳೆದುಕೊಳ್ಳುವ ಆದಾಯವನ್ನು ಬೇರೆ ಮೂಲಗಳಿಂದ ಸಂಗ್ರಹಿಸಬಹುದು – ಮಂಜುನಾಥ ರಾಜು

* ಹೈಕೋರ್ಟ್‌ ಮುಂದೆ ಪಾಲಿಕೆ ಆಯುಕ್ತರು ಹಾಜರಾಗುವುದೆಂದರೆ, ಪಾಲಿಕೆ ಸದಸ್ಯರೆಲ್ಲರನ್ನೂ ನ್ಯಾಯಾಲಯದ ಮುಂದೆ ನಿಲ್ಲಿಸಿದಂತೆ – ಸತೀಶ ರೆಡ್ಡಿ, ಶಾಸಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !