ಭಾನುವಾರ, ಮಾರ್ಚ್ 26, 2023
ಬಾಹ್ಯಾಕಾಶದಲ್ಲಿನ ತ್ಯಾಜ್ಯ ನಿರ್ವಹಣೆ ಕೇಂದ್ರ ಆರಂಭ

ಉಪಗ್ರಹಗಳ ರಕ್ಷಣೆಗೆ ಇಸ್ರೊ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಹ್ಯಾಕಾಶದಲ್ಲಿನ ತ್ಯಾಜ್ಯಗಳನ್ನು ಗುರುತಿಸಿ, ನಿರ್ವಹಿಸುವ ಮೂಲಕ ಉಪಗ್ರಹಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇಸ್ರೊ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಸುರಕ್ಷಿತ ಮತ್ತು ಸುಸ್ಥಿರ ಬಾಹ್ಯಾಕಾಶ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಕೇಂದ್ರವನ್ನು (ಐಎಸ್‌4ಒಎಂ)  ಇಸ್ರೊ ಆರಂಭಿಸಿದ್ದು, ಬಾಹ್ಯಾಕಾಶದಲ್ಲಿನ ಆಸ್ತಿಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಉಪಗ್ರಹಗಳ ಸುರಕ್ಷತೆ ಕಾಪಾ ಡುವುದು ಮತ್ತು ಹೊಸ ಉಡಾವಣೆಯ ಸಂದರ್ಭದಲ್ಲಿ ಯಾವುದೇ ರೀತಿ ಅಡಚಣೆಗಳಾಗದಂತೆ ಕ್ರಮ ಕೈಗೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.

ಪೀಣ್ಯದಲ್ಲಿರುವ ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ ಕೇಂದ್ರದ (ಐಸ್ಟ್ರ್ಯಾಕ್‌) ಆವರಣದಲ್ಲಿ ಆರಂಭಿಸಿ
ರುವ ಐಎಸ್‌4ಒಎಂ ಕೇಂದ್ರವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಸೋಮವಾರ ಉದ್ಘಾಟಿಸಿದರು. ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಮತ್ತು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥನ್‌ ಇದ್ದರು.

ಸದ್ಯ ಕ್ರಿಯಾಶೀಲವಾಗಿರುವ ಉಪಗ್ರಹಗಳು ಇತರ ಬಾಹ್ಯಾಕಾಶ ವಸ್ತುಗಳ ಜತೆ ಡಿಕ್ಕಿಯಾಗುವ ಸಾಧ್ಯತೆಗಳನ್ನು ಗುರುತಿಸಿ, ತಪ್ಪಿಸುವ ಯೋಜನೆ ಇದಾಗಿದೆ. ಈ ಮೂಲಕ ದೇಶದ ಬಾಹ್ಯಾಕಾಶ ಆಸ್ತಿಗಳನ್ನು ಕಾಪಾಡಿಕೊಳ್ಳುವುದಾಗಿದೆ.

ಸದ್ಯ ಬಾಹ್ಯಾಕಾಶದಲ್ಲಿ ಲಕ್ಷಾಂತರ ತ್ಯಾಜ್ಯಗಳಿವೆ. ಉಡಾವಣೆಗೆ ಬಳಸಿದ ವಸ್ತುಗಳು, ನಿಷ್ಕ್ರಿಯ ಬಾಹ್ಯಾಕಾಶ ನೌಕೆಗಳು, ಕೃತಕ ಉಪಗ್ರಹಗಳು, ರಾಕೆಟ್‌ಗಳ ಅವಶೇಷಗಳು ಸೇರಿ ಅಸಂಖ್ಯಾತ ತ್ಯಾಜ್ಯಗಳು ಕಕ್ಷೆಯಲ್ಲಿಯೇ ಉಳಿದಿವೆ. ಈ ಎಲ್ಲ ಅವಶೇಷಗಳು ಚೂರು ಚೂರಾಗಿವೆ. ಇವುಗಳ ಪ್ರಮಾಣ ವೇಗವಾಗಿ ವೃದ್ಧಿಯಾಗುತ್ತಿದೆ. ಈ ತ್ಯಾಜ್ಯಗಳು ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇದರಿಂದ, ಬಾಹ್ಯಾಕಾಶದ ಸುರಕ್ಷಿತ ಬಳಕೆಗೆ ಸಮಸ್ಯೆಯಾಗುತ್ತಿದೆ.

‘‌ತ್ಯಾಜ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳು ಪರಸ್ಪರ ನೆರವು ನೀಡುತ್ತಿವೆ. ಭಾರತವು ಈ ವಿಷಯದಲ್ಲಿ ಹಲವು ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟಿದೆ. 1947ರಲ್ಲಿ ಕೇವಲ ಎರಡು ತ್ಯಾಜ್ಯ ವಸ್ತುಗಳಿದ್ದವು. ಈಗ 25 ಸಾವಿರಕ್ಕೂ ಹೆಚ್ಚು ವಸ್ತುಗಳಿವೆ. ತ್ಯಾಜ್ಯಗಳ ಮೇಲೆ ನಿಗಾವಹಿಸುವ ಜತೆಗೆ ಅವುಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಗಮನಹರಿಸಲಾಗುತ್ತಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ತಿಳಿಸಿದರು.

‘ಐಎಸ್‌4ಒಎಂ ಭಾಗವಾಗಿ ವಿಶೇಷ ಪ್ರಯೋಗಾಲಯಗಳನ್ನು ಸಹ ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯದಲ್ಲಿ ನಿರಂತರವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ನಡೆಯಲಿವೆ’ ಎಂದು ವಿವರಿಸಿದರು.

‘ಐಎಸ್‌4ಒಎಂ’ ಹೀಗೆ ಕಾರ್ಯನಿರ್ವಹಿಸಲಿದೆ...

* ಕ್ಷುದ್ರ ಗ್ರಹಗಳು ಮತ್ತು ಧೂಮಕೇತುಗಳನ್ನು ಗುರುತಿಸಿ ನಿರಂತರವಾಗಿ ನಿಗಾವಹಿಸುವುದು ಮತ್ತು ಅವುಗಳ ಗುಣಲಕ್ಷಣಗಳ ಮೂಲಕ ಅಪಾಯಗಳ ಬಗ್ಗೆ
ಎಚ್ಚರವಹಿಸುವುದು. 

* 2022ರ ಮೇ 6ರಂದು ಗುರುತಿಸಿದಂತೆ ಉಪಗ್ರಹಗಳು ಸೇರಿದಂತೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ 25,505 ವಿವಿಧ ವಸ್ತುಗಳಿವೆ. ಇವುಗಳಲ್ಲಿ 5732 ಸಕ್ರಿಯ ಉಪಗ್ರಹಗಳಿವೆ.

ಕಾರ್ಯಾಚರಣೆ ಹೇಗೆ?

ಲೇಸರ್ ಸೇರಿದಂತೆ ವಿವಿಧ ತಂತ್ರಜ್ಞಾನಗಳ ಮೂಲಕ ಬಾಹ್ಯಾಕಾಶ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ನಿಷ್ಕ್ರಿಯಗೊಂಡ ಉಪಗ್ರಹಗಳ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ಇಸ್ರೊ ಅಧ್ಯಕ್ಷರು ತಿಳಿಸಿದ್ದಾರೆ.

ತ್ಯಾಜ್ಯಗಳನ್ನು ಗುರುತಿಸುವುದು, ನಿಗಾವಹಿಸುವುದು ಮತ್ತು ಅಪಾಯದ ವಿಶ್ಲೇಷಣೆ ನಡೆಸುವ  ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ವಿವಿಧೆಡೆ ಬಿದ್ದ ಬಾಹ್ಯಾಕಾಶ ತ್ಯಾಜ್ಯಗಳು

*ಗುಜರಾತ್‌ನಲ್ಲಿ 2022ರ ಮೇ 12ರಂದು ಐದು ಲೋಹದ ಚೆಂಡುಗಳು ಬಿದ್ದಿದ್ದವು.

* ಮಹಾರಾಷ್ಟ್ರದ ಚಂದಾಪುರ ಜಿಲ್ಲೆಯ ವಿವಿಧೆಡೆ ಲೋಹದ ಉಂಗುರ ಮತ್ತು ಸಿಲಿಂಡರ್‌ ರೀತಿಯ ವಸ್ತುಗಳು ಬಿದ್ದಿದ್ದವು.

*ತಮಿಳುನಾಡಿನ ದಿಂಡಿಗಲ್‌ನಲ್ಲಿ 2016ರ ನವೆಂಬರ್‌ನಲ್ಲಿ ತ್ಯಾಜ್ಯಗಳು ಬಿದ್ದಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು