ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಿಂಗಳಿಗೆ 2 ಲಕ್ಷ ಆಸ್ತಿಗಳಿಗೆ ಯುಪಿಒಆರ್‌ ಕಾರ್ಡ್‌

9 ತಿಂಗಳಲ್ಲಿ 2 ಲಕ್ಷ ಕಾರ್ಡ್‌ ವಿತರಣೆ: ಯೋಜನೆಗೆ ವೇಗ ನೀಡಲು ನಿರ್ಧಾರ
Last Updated 24 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ನಿಧಾನಗತಿಯಲ್ಲಿ ನಡೆಯುತ್ತಿದ್ದ ನಗರ ಆಸ್ತಿ ಮಾಲೀಕತ್ವ ಯೋಜನೆಗೆ (ಯುಪಿಒಆರ್‌) ಬೆಂಗಳೂರಿನಲ್ಲಿ ವೇಗ ನೀಡಲಾಗಿದ್ದು ಬಿಬಿಎಂಪಿ ವ್ಯಾಪ್ತಿಯ 23 ಲಕ್ಷ ಆಸ್ತಿಗಳಿಗೆ ಮುಂದಿನ 18 ತಿಂಗಳಲ್ಲಿ ಆಸ್ತಿ ಮಾಲೀಕತ್ವ ಕಾರ್ಡ್‌ ನೀಡುವ ಗುರಿ ಹೊಂದಲಾಗಿದೆ.

ಸರ್ಕಾರದಿಂದ ನೀಡಲಾಗುವ ಯುಪಿಒಆರ್‌ ಕಾರ್ಡ್‌ ನಾಗರಿಕರ ಆಸ್ತಿ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ, ಮಾಲೀಕತ್ವ ವಿವರ, ಹಕ್ಕುಗಳು ಸೇರಿದಂತೆ ಸಾಲ, ವ್ಯಾಜ್ಯ ಇತರೆ ಮಾಹಿತಿಗಳನ್ನೂ ಹೊಂದಿರುತ್ತದೆ.

ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ವತಿಯಿಂದನಗರದಲ್ಲಿರುವಪ್ರತಿ ಆಸ್ತಿಯ ನಕ್ಷೆಯನ್ನು ಡ್ರೋನ್‌
ತಂತ್ರಜ್ಞಾನದ ಮೂಲಕ ಡಿಜಿಟಲೀಕರಣ ಮಾಡಲಾಗುತ್ತದೆ. ನಗರದಲ್ಲಿರುವ ಆಸ್ತಿಗಳ ಮಾಹಿತಿ ಡ್ರೋನ್‌ ತಂತ್ರಜ್ಞಾನದಲ್ಲಿ ಡಿಜಿಟಲೀಕರಣ ಮಾಡಿದ ಮೇಲೆ ಸರ್ಕಾರಿ ಹಾಗೂಬಿಬಿಎಂಪಿ ದಾಖಲೆಗಳನ್ನು ಜೋಡಿಸಲಾಗುತ್ತಿದೆ. ಇಂತಹ ಆಸ್ತಿಗಳ ಮಾಲೀಕರಿಗೆ ಕಂದಾಯ ಇಲಾಖೆಯ ಭೂಮಾಪಕರು ನೋಟಿಸ್‌ಜಾರಿಗೊಳಿಸುತ್ತಿದ್ದಾರೆ.

ನಾಗರಿಕರು ತಮ್ಮ ಆಸ್ತಿಯ ಮಾಲೀಕತ್ವದ ಕ್ರಯಪತ್ರ, ಆಸ್ತಿ ತೆರಿಗೆ ಪಾವತಿ ರಸೀದಿ, ಆಸ್ತಿ ಋಣಭಾರ ಪತ್ರ, ಬಿಬಿಎಂಪಿ ಖಾತೆ, ನಿವೇಶನ ಹಂಚಿಕೆ ಪತ್ರ, ನಿವೇಶನ ಸ್ವಾಧೀನ ಪತ್ರ, ಭೂಪರಿವರ್ತನೆ ಆದೇಶ/ ಲೇಔಟ್‌ ನಕ್ಷೆ ಪ್ರತಿ, ಮಾಲೀಕರ ಫೋಟೊ, ಆಸ್ತಿಯ ಫೋಟೊವನ್ನು ಭೂಮಾಪಕರಿಗೆ ಪರಿಶೀಲನೆ ಸಂದರ್ಭದಲ್ಲಿ ನೀಡಬಹುದು. ಮನೆಯ ಅಳತೆ ಹಾಗೂ ಇತರೆ ಮಾಹಿತಿಗಳನ್ನು ಮಾಲೀಕರ ಎದುರು ಭೂಮಾಪಕರು ನಮೂದಿಸುತ್ತಾರೆ.

ಆನ್‌ಲೈನ್‌ ಸೌಲಭ್ಯ: ಭೂಮಾಪಕರು ಬಂದ ಸಮಯದಲ್ಲಿ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲದಿದ್ದರೆ ಆನ್‌ಲೈನ್‌
ನಲ್ಲೂ (https://rdservices.karnataka.gov.in/service5/) ಅಪ್‌ಲೋಡ್‌ ಮಾಡಬಹುದು. ನಾಗರಿಕರು ತಮ್ಮ ಮೊಬೈಲ್‌ ಸಂಖ್ಯೆಯಲ್ಲಿ ಲಾಗಿನ್‌ ಆಗಬಹುದು. ಭೂಮಾಪಕರು ನೋಟಿಸ್‌ ನೀಡಿದ ಮೇಲೆ ಇದು ಚಾಲನೆಗೊಳ್ಳುತ್ತದೆ.

‘ಯುಪಿಒಆರ್‌ ಕಾರ್ಡ್‌ ಲಭ್ಯವಾದ ಮೇಲೆ ಆಸ್ತಿ ಮಾರಾಟ ಅಥವಾ ವಿಭಜನೆ, ಬದಲಾವಣೆಗಳಾದರೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಮಾಹಿತಿಗಳು ಬದಲಾಗುತ್ತವೆ. ಕೆರೆ ಪ್ರದೇಶ, ಸರ್ಕಾರಿ ಆಸ್ತಿ, ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದರೆ ಅವುಗಳನ್ನು ಸ್ಪಷ್ಟ ಮಾಹಿತಿ ಪ್ರತಿ ಆಸ್ತಿಗೂ ಸಂಪರ್ಕಿಸಲಾಗಿರುತ್ತದೆ. ಹೀಗಾಗಿ ಹೊಸದಾಗಿ ಖರೀದಿ ಮಾಡುವವರಿಗೆ ಸ್ಪಷ್ಟ ದಾಖಲೆಯೂ ಸಿಗುವಂತಾಗುತ್ತದೆ’ ಎಂದು ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗೀಲ್‌ ತಿಳಿಸಿದರು.

‘ಡ್ರೋನ್‌ ತಂತ್ರಜ್ಞಾನವನ್ನು ಬಳಸಿಯುಪಿಒಆರ್‌ ಯೋಜನೆ ಜಾರಿಗೆ ಸರ್ಕಾರ 2018ರ ನ.7ರಂದು ಆದೇಶ ಹೊರಡಿಸಿದೆ. ಈ ಕಾರ್ಯ ಆರಂಭವಾಗಿ ಏಳೆಂಟು ತಿಂಗಳಾಗಿದ್ದು, ಎರಡು ಲಕ್ಷ ಕಾರ್ಡ್‌ ವಿತರಿಸಲಾಗಿದೆ. ನಿಧಾನಗತಿಯಲ್ಲಿರುವ ಈ ಕಾರ್ಯಕ್ಕೆ ವೇಗ ನೀಡಲಿದ್ದು, ಬೆಂಗಳೂರಿನಲ್ಲಿ ಪ್ರತಿ ತಿಂಗಳೂ ಎರಡು ಲಕ್ಷಕ್ಕೂ ಹೆಚ್ಚಿನ ಯುಪಿಒಆರ್‌ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ’ ಎಂದರು.

ಕಾರ್ಡ್‌ ಪಡೆಯುವುದು ಹೇಗೆ?

ನಗರದ ಪ್ರತಿ ಆಸ್ತಿಯ ಗಣಕೀಕೃತ ಭೌಗೋಳಿಕ ನಿರ್ದೇಶಿತ ನಕ್ಷೆಯನ್ನು ಡ್ರೋನ್‌ ತಂತ್ರಜ್ಞಾನದಲ್ಲಿ ಕಂದಾಯ ಇಲಾಖೆ ಸಿದ್ಧಗೊಳಿಸುತ್ತದೆ. ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಚಾರಣಾಧಿಕಾರಿಗಳು ಸರ್ಕಾರಿ ಹಾಗೂ ಬಿಬಿಎಂಪಿಯಲ್ಲಿ ಪರಿಶೀಲಿಸುತ್ತಾರೆ. ನಂತರ ಪ್ರತಿ ಆಸ್ತಿಯ ಮಾಲೀಕರಿಗೆ ಒಂದು ನೋಟಿಸ್‌ ನೀಡಿ, ಮಾಹಿತಿ ನೀಡುವ ದಿನವನ್ನು ನಿಗದಿಪಡಿಸಿರುತ್ತಾರೆ.

ನಾಗರಿಕರು ತಮ್ಮ ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ನೀಡಿದಾಗ ಅದನ್ನು ಹೋಲಿಸಿ ನೋಡುತ್ತಾರೆ.ಕರಡು ಆಸ್ತಿ ಪ್ರಮಾಣ ಪತ್ರವನ್ನು ಸಿದ್ಧಪಡಿಸಿ ನಾಗರಿಕರಿಗೆ ನೀಡಲಾಗುತ್ತದೆ. ಆಕ್ಷೇಪಣೆಗಳಿದ್ದರೆ 30 ದಿನದಲ್ಲಿ ಸಲ್ಲಿಸಬಹುದು.ಆಕ್ಷೇಪಣೆಗಳಿದ್ದರೆ ಅವುಗಳನ್ನು ಪರಿಶೀಲಿಸಿ ಅಂತಿಮ ಆಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT