‘ಸ್ವಚ್ಛ ಭಾರತ’ದ ಅಡಿ ಸಮಗ್ರ ಕಾರ್ಯಕ್ರಮ: ಸುಪ್ರೀಂಗೆ ರಾಜ್ಯ ಸರ್ಕಾರದ ಹೇಳಿಕೆ

7

‘ಸ್ವಚ್ಛ ಭಾರತ’ದ ಅಡಿ ಸಮಗ್ರ ಕಾರ್ಯಕ್ರಮ: ಸುಪ್ರೀಂಗೆ ರಾಜ್ಯ ಸರ್ಕಾರದ ಹೇಳಿಕೆ

Published:
Updated:

ನವದೆಹಲಿ: ಘನ ತ್ಯಾಜ್ಯ ನಿರ್ವಹಣೆಗಾಗಿ ‘ಸ್ವಚ್ಛ ಭಾರತ’ ಯೋಜನೆ ಅಡಿ ಸಮಗ್ರ ಕಾರ್ಯಕ್ರಮ ರೂಪಿಸಲಾಗಿದ್ದು, ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮನೆ ಬಾಗಿಲಿಗೆ ತೆರಳಿ ವ್ಯವಸ್ಥಿತ ವಾಗಿ ತ್ಯಾಜ್ಯ ಸಂಗ್ರಹಿಸುವುದಲ್ಲದೆ, ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಸಂಸ್ಕರಣಾ ಘಟಕಗಳ ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಅಭಿವೃದ್ಧಿ, ತ್ಯಾಜ್ಯ ಸಂಗ್ರಹ ಕೇಂದ್ರಗಳ ಸ್ಥಾಪನೆ ಮತ್ತು ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸಲ್ಲಿಸಿರುವ ಹೇಳಿಕೆಯಲ್ಲಿ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿರುವ 279 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 278 ಸಂಸ್ಥೆಗಳು ಘನ ತ್ಯಾಜ್ಯ ನಿರ್ವಹಣೆ ಕುರಿತ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿವೆ. ಕರ್ನಾಟಕ ಮುನಿಸಿಪಲ್‌ ಮಾದರಿ ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಯನ್ನು ಕಳೆದ ಜುಲೈ 10ರಂದು ಪ್ರಕಟಿಸಲಾಗಿದೆ. ಈ ಕರಡು ನಿಯಮಗಳ ಕಾರ್ಯತಂತ್ರದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಲಾಗಿದೆ.

ಕೊಳೆಯುವ ಜೈವಿಕ ತ್ಯಾಜ್ಯ, ಕೊಳೆಯಲಾರದ ಅಪಾಯಕಾರಿ ತ್ಯಾಜ್ಯ, ಕಟ್ಟಡ ನಿರ್ಮಾಣ ಮತ್ತು ಕೆಡವಿದಂತಹ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಇ– ತ್ಯಾಜ್ಯ ಒಳಗೊಂಡಂತೆ ಎಲ್ಲ ವಿಧದ ತ್ಯಾಜ್ಯವನ್ನು ಮೂಲದಲ್ಲಿ ಬೇರ್ಪಡಿಸುವ ವ್ಯವಸ್ಥೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಘನ ತ್ಯಾಜ್ಯ ನಿರ್ವಹಣೆ ಯೋಜನೆ ರೂಪಿಸಿರುವ ಸರ್ಕಾರ ತಿಳಿಸಿದೆ.ಶುಚಿತ್ವಕ್ಕೆ ಸಂಬಂಧಿಸಿದ ನಾಪ್ಕಿನ್‌ಗಳು, ಡೈಪರ್‌ಗಳಂತಹ ತ್ಯಾಜ್ಯ ಮತ್ತು ಅದೇ ಮಾದರಿಯ ಎಲ್ಲ ತ್ಯಾಜ್ಯವನ್ನು ಅಪಾಯಕಾರಿ ತ್ಯಾಜ್ಯದೊಂದಿಗೆ ಸಂಗ್ರಹಿಸಲಾಗುತ್ತದೆ ಎಂದು ವಿವರ ನೀಡಲಾಗಿದೆ.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದು, ಪುರಸಭೆ ವ್ಯಾಪ್ತಿಯಲ್ಲಿ ಎರಡು, ನಗರ ಸಭೆ ವ್ಯಾಪ್ತಿಯಲ್ಲಿ ಮೂರು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಐದು ಒಣ ಕಸ ಸಂಗ್ರಹ ಕೇಂದ್ರ ಸ್ಥಾಪಿಸಲು ಆದೇಶಿಸಲಾಗಿದೆ. ತ್ಯಾಜ್ಯವನ್ನು ಸಂಸ್ಕರಿಸುವುದು ಅಸಾಧ್ಯ ಎಂದಾದಲ್ಲಿ ನೆಲದೊಳಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಆದಷ್ಟು ಸ್ಥಳೀಯ ಸಂಸ್ಥೆಗಳು ತ್ಯಾಜ್ಯದ ಸಂಸ್ಕರಣೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾಗಿ ಹೇಳಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ಸಂಗ್ರಹವಾಗುವ ಜೈವಿಕ ವಿಘಟನೀಯ ತ್ಯಾಜ್ಯವನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ ವಿಧಾನದಡಿ ಸಂಸ್ಕರಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಸಂಸ್ಕರಣೆ ಸಾಧ್ಯವಾಗದ ತ್ಯಾಜ್ಯವನ್ನು ಆಯಾ ಸ್ಥಳೀಯ ಸಂಸ್ಥೆ ಸಹಾಯದಿಂದ ವಿಲೇವಾರಿ ಮಾಡುವಂತೆಯೂ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೂಪು–ರೇಷೆಯ ವಿವರ ನೀಡಲಾಗಿದೆ.

ರಾಜ್ಯದ 214 ಸ್ಥಳೀಯ ಸಂಸ್ಥೆಗಳು ಜೈವಿಕ ತ್ಯಾಜ್ಯ ವಿಲೇವಾರಿಗಾಗಿ ಅಗತ್ಯ ಜಮೀನು ಹೊಂದಿದ್ದು, ಮೇಲ್ದರ್ಜೆಗೆ ಏರಿರುವ 59 ಸಂಸ್ಥೆಗಳು ತ್ಯಾಜ್ಯ ವಿಲೇವಾರಿ ಜಮೀನು ಹೊಂದಬೇಕಿದೆ.

ರಾಜ್ಯದಲ್ಲಿನ 98 ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆ, ಎರೆಹುಳು ಗೊಬ್ಬರ ತಯಾರಿ ಘಟಕಗಳನ್ನು ಹೊಂದಿವೆ. ಮಂಗಳೂರು, ಕಾರ್ಕಳ, ಉಡುಪಿ, ರಾಮನಗರ, ಗದಗ– ಬೆಟಗೇರಿಗಳಲ್ಲಿನ ಸ್ಥಳೀಯ ಸಂಸ್ಥೆಗಳು ಜೈವಿಕ ಅನಿಲ ಉತ್ಪಾದನಾ ಘಟಕ ಒಳಗೊಂಡಿವೆ. 52 ಸ್ಥಳೀಯ ಸಂಸ್ಥೆಗಳು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಜಮೀನು ಒಳಗೊಂಡಿದ್ದು, 241 ಸ್ಥಳೀಯ ಸಂಸ್ಥೆಗಳು ಮನೆಮನೆ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಕಲ್ಪಿಸಿವೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !