ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾಪಿಡ್‌ ರಸ್ತೆ’ ಸಾಮರ್ಥ್ಯ ಸಾಬೀತಾಗಲಿ: ಸಿ.ಎಂ ಬಸವರಾಜ ಬೊಮ್ಮಾಯಿ

ಮಿತವ್ಯಯಿ, ಗುಣಮಟ್ಟ ವರದಿ ನಂತರ ನಗರದ ಇತರೆಡೆ ವಿಸ್ತರಣೆ
Last Updated 8 ಡಿಸೆಂಬರ್ 2022, 15:59 IST
ಅಕ್ಷರ ಗಾತ್ರ

ಬೆಂಗಳೂರು: ವೆಚ್ಚ ಕಡಿಮೆ ಹಾಗೂ ಸಾಮರ್ಥ್ಯ ಸಾಬೀತುಪಡಿಸಿದರೆ ‘ರ‍್ಯಾ‍ಪಿಡ್‌ ರಸ್ತೆ’ ತಂತ್ರಜ್ಞಾನವನ್ನು ನಗರದ ಇತರೆ ಭಾಗದಲ್ಲೂ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೇಶದಲ್ಲೇ ಪ್ರಥಮ ಬಾರಿಗೆ ಹಳೆ ಮದ್ರಾಸ್‌ ರಸ್ತೆಯ ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್‌ನಲ್ಲಿ ಅನುಷ್ಠಾನಗೊಳಿಸಿರುವ ಪ್ರಾಯೋಗಿಕ ‍‘ರ‍್ಯಾಪಿಡ್‌ ರಸ್ತೆ’ಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರೀಕಾಸ್ಟ್‌ ಪೋಸ್ಟ್‌ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್‌’ ತಂತ್ರಜ್ಞಾನದಿಂದ ಪ್ಯಾನಲ್‌ಗಳನ್ನು ಅಳವಡಿಸಿ‘ರ‍್ಯಾಪಿಡ್‌ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ.ಉತ್ತಮ ರಸ್ತೆಗಳ ಜೊತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.

‘ಈ ರಸ್ತೆಗಳ ಮೇಲೆ 20 ಟನ್‌ಗೂ ಹೆಚ್ಚಿನ ಭಾರದ ವಾಹನಗಳು ಸಂಚರಿಸಿದಾಗ ಆಗುವ ಪರಿಣಾಮವನ್ನು ಪರಿಶೀಲಿಸಬೇಕಿದೆ. ಜೊತೆ, ನಮ್ಮ ನಿಗದಿತ ದರಕ್ಕೆ (ಎಸ್‌ಆರ್‌) ಹೋಲಿಕೆಯಾಗಬೇಕು’ ಎಂದರು.

‘ನಗರದಲ್ಲಿ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ.ವೈಟ್‌ಟಾಪಿಂಗ್ ಮಾಡುವಾಗ ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಸಂಚಾರ ವ್ಯವಸ್ಥೆಯನ್ನು ಸುಧಾರಿಸಬೇಕು, ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಸೌಲಭ್ಯಗಳನ್ನು ಅಳವಡಿಸುವಾಗ ವೈಟ್‌ ಟಾಪಿಂಗ್‌ ರಸ್ತೆಯನ್ನು ಅಗೆಯುವುದು ಕಷ್ಟ. ಹೀಗಾಗಿ, ಪ್ರೀಕಾಸ್ಟ್‌ ಸ್ಲ್ಯಾಬ್‌ ರಸ್ತೆಗಳು ಉಪಯೋಗಕರ’ ಎಂದರು.

‘ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನದಿಂದ ಪ್ರೀಕಾಸ್ಟ್‌ ಸ್ಲ್ಯಾಬ್ ಗಳನ್ನು ತಯಾರಿಸಿ, ಆಂತರಿಕ ಜಾಯಿಂಟ್ ಹಾಕಿ, ಬಲಗೊಳಿಸಿ, ರಸ್ತೆಯನ್ನು ಪ್ರಾಯೋಗಿಕವಾಗಿ 500 ಮೀ. ಪೈಕಿ 375 ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಿದೆ. ಅದನ್ನು ಪರಿಶೀಲಿಸಿದ್ದು, ಹಲವು ಸೂಚನೆಗಳನ್ನು ನೀಡಿದ್ದೇನೆ. 20 ಟನ್ ಮೇಲಿರುವ ವಾಹನಗಳನ್ನು ಸತತವಾಗಿ ಸಂಚಾರ ಮಾಡಿಸಿ, ವಿಶ್ಲೇಷಣೆ ಮಾಡಬೇಕಿದೆ. ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು, ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು’ ಎಂದರು.

‘ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್, ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು’ ಎಂದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಸಿ.ವಿ. ರಾಮನ್‌ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್. ರಘು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್‌, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT