ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೂ ಲಂಚ: ಲೋಕಾಯುಕ್ತ ಪರಿಶೀಲನೆ

ರಾಜಧಾನಿಯ ಹತ್ತು ಆಸ್ಪತ್ರೆಗಳಲ್ಲಿ ಅಧಿಕಾರಿಗಳ ಪರಿಶೀಲನೆ
Published 22 ಡಿಸೆಂಬರ್ 2023, 16:15 IST
Last Updated 22 ಡಿಸೆಂಬರ್ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಹಾಗೂ ನಗರ ಜಿಲ್ಲೆಯ ವ್ಯಾಪ್ತಿಯ ಹತ್ತು ಸರ್ಕಾರಿ ಆಸ್ಪತ್ರೆಗಳಿಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತದ ಅಧಿಕಾರಿಗಳು ಭ್ರಷ್ಟಾಚಾರ, ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಲೋಪ ಸೇರಿದಂತೆ ವಿವಿಧ ದೂರುಗಳ ಕುರಿತು ಪರಿಶೀಲನೆ ನಡೆಸಿದರು.

ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆ, ಸಿದ್ದಾಪುರದಲ್ಲಿರುವ ಸಂಜಯ ಗಾಂಧಿ ತುರ್ತು ಚಿಕಿತ್ಸೆ ಮತ್ತು ಮೂಳೆ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ತಿಲಕ್ ನಗರದಲ್ಲಿರುವ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಶಿವಾಜಿನಗರದ ಗೌಸಿಯಾ ಆಸ್ಪತ್ರೆ, ಚಾಮರಾಜಪೇಟೆಯಲ್ಲಿರುವ ವಾಣಿ ವಿಲಾಸ ಆಸ್ಪತ್ರೆ, ಜಯನಗರ, ಕೆ.ಆರ್‌,ಪುರ, ಯಲಹಂಕ ಮತ್ತು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಹಾಗೂ ಸಮರ್ಪಕವಾಗಿ ಚಿಕಿತ್ಸೆ ಒದಗಿಸದೇ ಕರ್ತವ್ಯಲೋಪ ಎಸಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿಯ ದೂರುಗಳನ್ನು ಆಧರಿಸಿ ದಿಢೀರ್‌ ತಪಾಸಣೆ ನಡೆಸಲಾಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ, ದುರಾಡಳಿತದ ಕುರಿತು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಅದರ ಭಾಗವಾಗಿ ದಿಢೀರ್‌ ತಪಾಸಣೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ನಿರ್ದೇಶನ ನೀಡಿದ್ದರು. ಸಂಸ್ಥೆಯ ಪೊಲೀಸ್‌, ನ್ಯಾಯಾಂಗ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಹತ್ತು ತಂಡಗಳು ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದವು.

ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಮತ್ತು ಡಿಐಜಿ ಸುಬ್ರಮಣ್ಯೇಶ್ವರ ರಾವ್‌ ಕೂಡ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗಳ ಒಳ ಮತ್ತು ಹೊರ ರೋಗಿಗಳ ದಾಖಲಾತಿ ವಿಭಾಗಗಳು, ಔಷಧಾಲಯಗಳು, ಸ್ಕ್ಯಾನಿಂಗ್‌ ಕೇಂದ್ರಗಳು, ಪ್ರಯೋಗಾಲಯಗಳು, ದಾಸ್ತಾನು ಕೊಠಡಿಗಳಲ್ಲಿ ತಪಾಸಣೆ ನಡೆಸಲಾಗಿದೆ.

ಲೋಕಾಯುಕ್ತದ ಎಲ್ಲ ತಂಡಗಳು ತಪಾಸಣೆ ಬಳಿಕ ಸಲ್ಲಿಸುವ ವಿಸ್ತೃತ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
–ಬಿ.ಎಸ್‌. ಪಾಟೀಲ ಲೋಕಾಯುಕ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT