ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗುಂಡಿ ದುರಸ್ತಿ: ಮೇಯರ್‌ ದಿಢೀರ್‌ ತಪಾಸಣೆ

Last Updated 6 ನವೆಂಬರ್ 2019, 21:55 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಗುಂಡಿ ದುರಸ್ತಿ ತಪಾಸಣೆ ನಡೆಸುವ ಸಲುವಾಗಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಅವರ ಜೊತೆ ನಗರದ ಕೆಲವು ಕಾಮಗಾರಿ ನಡೆಯುತ್ತಿದ್ದ ಕೆಲವು ರಸ್ತೆಗಳಿಗೆ ಬುಧವಾರ ರಾತ್ರಿ ದಿಢೀರ್ ಭೇಟಿ ನೀಡಿದರು.

ಮೇಯೋಹಾಲ್‌ನ ಪಾಲಿಕೆ ಕಚೇರಿ ಬಳಿಯಿಂದ ಮೇಯರ್‌ ತಪಾಸಣೆ ಆರಂಭಿಸಿದರು. ಹಲಸೂರು ವಾರ್ಡ್ 2ನೇ ಅಡ್ಡ ರಸ್ತೆಯಲ್ಲಿ ರಸ್ತೆ ಗುಂಡಿಗೆ ಜಲ್ಲಿಪುಡಿ ಮಾತ್ರ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು ಎಂದು ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದರು.

ವಲಯದಲ್ಲಿ ಆಗಾಗ ವೀಕ್ಷಣೆ ನಡೆಸಬೇಕು. ಪಾದಚಾರಿ ಮಾರ್ಗ ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳಬೇಕು. ರಸ್ತೆಯಲ್ಲಿ ಗುಂಡಿ ಕಾಣಿಕೊಂಡ ತಕ್ಷಣವೇ ಮುಚ್ಚಬೇಕು ಎಂದು ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರಿಗೆ ಸೂಚನೆ ನೀಡಿದರು.

ಹಲಸೂರು ವಾರ್ಡ್ ವ್ಯಾಪ್ತಿಯ ಗುರುದ್ವಾರ ಜಂಕ್ಷನ್ ಬಳಿ ರಾಜಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೇಯರ್‌ ಈ ಸಂಬಂಧ ರಾಜಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚನ್ನಕೇಶವ ಅವರಿಗೆ ಶೋಕಾಸ್ ನೋಟೀಸ್ ನೀಡುವಂತೆ ಆದೇಶ ಮಾಡಿದರು. ಕಾಮಗಾರಿಯ ಗುತ್ತಿಗೆದಾರರ ವಿರುದ್ಧವೂ ಶಿಸ್ತು ಕ್ರಮಕೈಗೊಳ್ಳಲು ಆಯುಕ್ತರಿಗೆ ಸೂಚಿಸಿದರು.

ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ಕಾಮಗಾರಿ ಸರಿಯಾಗಿ ಮಾಡದಿರುವುದನ್ನು ಕಂಡು ರಸ್ತೆ ಮೇಲೆ ಬಿದ್ದಿರುವ ತಂತಿಗಳನ್ನು ಕೂಡಲೆ ತೆರವು ಮಾಡುವಂತೆ ಸೂಚನೆ ನೀಡಿದರು.

ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಪಕ್ಕ ಚರಂಡಿ ಮುಚ್ಚಿದ್ದರಿಂದ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ. ಪಾದಚಾರಿ ಮಾರ್ಗವೂ ಹದಗೆಟ್ಟಿದೆ. ಇವುಗಳನ್ನು ದುರಸ್ತಿಪಡಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

ಯಶವಂತಪುರ ಮೇಲ್ಸೇತುವೆ ಬಳಿ ಬಿದ್ದಿರುವ ರಸ್ತೆಗುಂಡಿ ಡಾಂಬರೀಕರಣ ಕಾಮಗಾರಿಯನ್ನು ಮೇಯರ್‌ ಪರಿಶೀಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ‘ಹೆಚ್ಚಿನ ಕಡೆ ರಸ್ತೆಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುತ್ತಿದ್ದಾರೆ. ಪಶ್ಚಿಮ ವಾರ್ಡ್‌ನಲ್ಲಿ ನಾನು ಸೂಚನೆ ನೀಡಿದ ಬಳಿಕವೂ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಈ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದರು.

ಆಯುಕ್ತ ಅನಿಲ್‌ ಕುಮಾರ್‌, ‘ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಗೂ ನಂದಿದುರ್ಗ ರಸ್ತೆಯನ್ನು ಗುತ್ತಿಗೆದಾರ ಎಂ.ಎಸ್.ವೆಂಕಟೇಶ್ ಅವರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಈ ಪೈಕಿ ಈಗಾಗಲೆ ನೋಟೀಸ್ ನೀಡಲಾಗಿದೆ. ಆದರೂ ರಸ್ತೆ ದುರಸ್ತಿಪಡಿಸಿಲ್ಲ‌. ಈ ಸಂಬಂಧ ಮತ್ತೊಮ್ಮೆ ನೋಟೀಸ್ ಜಾರಿ‌ ಮಾಡಿ, ದಂಡ ವಿಧಿಸಲಾಗುವುದು’ ಎಂದರು.

‘ಗುಂಡಿ ಮುಚ್ಚದ ಪಶ್ಚಿಮ ವಲಯದ ಅಧಿಕಾರಿಗಳ ವಿರುದ್ಧ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಾಳೆಯೇ ಗುಂಡಿ ಮುಚ್ಚಿಸಲಾಗುವುದು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲು ಕ್ರಮ ವಹಿಸಲಾಗುವುದು’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT