ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಫ್ರೊ ಯುರಾಲಜಿ: ಕಾಯಂ ವೈದ್ಯರ ಹುದ್ದೆ ಖಾಲಿ

ಪ್ರಭಾರದಲ್ಲಿ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರ ಹುದ್ದೆಗಳು
ವರುಣ ಹೆಗಡೆ
Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ನೆಫ್ರೊ–ಯುರಾಲಾಜಿ ಸಂಸ್ಥೆಯಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಸೇರಿ ವಿವಿಧ ಕಾಯಂ ಹುದ್ದೆಗಳು ಖಾಲಿ ಉಳಿದಿವೆ.

ಇದರಿಂದಾಗಿ ಸಂಸ್ಥೆಯು ಕಾಯಂ ವೈದ್ಯರ ಕೊರತೆಯನ್ನು ಎದುರಿಸುತ್ತಿದ್ದು, ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ, ಸೇವೆಯನ್ನು ಒದಗಿಸಸುವುದು ಕಷ್ಟಸಾಧ್ಯವಾಗಿದೆ. ರಾಜ್ಯದ ವಿವಿಧೆಡೆಯಿಂದ ಡಯಾಲಿಸಿಸ್ ಸೇರಿ ವಿವಿಧ ಚಿಕಿತ್ಸೆಗಳಿಗೆ ರೋಗಿಗಳು ಇಲ್ಲಿಗೆ ಬರುತ್ತಾರೆ. 

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸಂಸ್ಥೆ, 2007ರಿಂದ ಕಾರ್ಯನಿರ್ವಹಿಸುತ್ತಿದೆ. ಇದು, ಸ್ವಾಯತ್ತ ಸಂಸ್ಥೆಯಾಗಿದ್ದು, 160 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. 

20 ಡಯಾಲಿಸಿಸ್ ಯಂತ್ರಗಳಿದ್ದು, ದಿನದ 24 ಗಂಟೆಗಳೂ ಡಯಾಲಿಸಿಸ್ ಸೇವೆಯನ್ನು ನೀಡಲಾಗುತ್ತಿದೆ. ನಿತ್ಯ ಸರಾಸರಿ 80–90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಸುಮಾರು 300 ರೋಗಿಗಳು ನಿತ್ಯ ಸಂಸ್ಥೆಗೆ ಭೇಟಿ ನೀಡುತ್ತಾರೆ. ಆದರೆ, ಮಂಜೂರಾದ ವೈದ್ಯರ ಹುದ್ದೆಗಳಿಗೆ ನೇಮಕಾತಿ ನಡೆಯದಿರುವುದು ಚಿಕಿತ್ಸೆಗೆ ತೊಡಕಾಗಿದೆ. 

2013ರಿಂದ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡಿಲ್ಲ. ಮುಖ್ಯಮಂತ್ರಿಯವರೇ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಆಡಳಿತ ಮಂಡಳಿಯ ಸಭೆಗಳಲ್ಲಿ ಸಂಸ್ಥೆಯ ನಿರ್ದೇಶಕ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಈವರೆಗೂ ನೇಮಕಾತಿ ಆಗಿಲ್ಲ. ಸಂಸ್ಥೆಗೆ 10 ವರ್ಷಗಳಿಂದ ಪೂರ್ಣಾವಧಿ ನಿರ್ದೇಶಕರಿಲ್ಲ. ವೈದ್ಯಕೀಯ ಅಧೀಕ್ಷಕರ ಹುದ್ದೆಯೂ ಪ್ರಭಾರದಲ್ಲಿ ಇದೆ. ಪರಿಣಾಮ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

30 ಹುದ್ದೆಗಳು ಖಾಲಿ: ಸಂಸ್ಥೆಯು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಜೀವರಸಾಯನ ವಿಜ್ಞಾನ, ನೆಫ್ರೊಲಜಿ, ಯುರಾಲಜಿ, ಅರಿವಳಿಕೆ ವಿಜ್ಞಾನ ಸೇರಿ ವಿವಿಧ ವಿಷಯಗಳನ್ನುಬೋಧಿಸಲಾಗುತ್ತಿದೆ. ಇದರಿಂದಾಗಿ ವೈದ್ಯರು ಚಿಕಿತ್ಸೆಯ ಜತೆಗೆ ಬೋಧನೆಯನ್ನೂ ಮಾಡುತ್ತಿದ್ದಾರೆ. ಸದ್ಯ ಮಂಜೂರಾಗಿದ್ದ ವೈದ್ಯರ ಹುದ್ದೆಗಳಲ್ಲಿ 30 ಹುದ್ದೆಗಳು ಖಾಲಿ ಉಳಿದಿವೆ. 46 ವೈದ್ಯರು ಪೂರ್ಣಾವಧಿ ಹುದ್ದೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. 

‘ವೈದ್ಯರ ಕೊರತೆಯಿಂದ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗಿದೆ. ಡಯಾಲಿಸಿಸ್ ಸೇರಿ ವಿವಿಧ ವೈದ್ಯಕೀಯ ಸೇವೆಗೆ ದೂರದ ಊರುಗಳಿಂದ ಬಂದವರು ಕಾಯಬೇಕಾದ ಪರಿಸ್ಥಿತಿಯಿದೆ. ಕೆಲವರು ಅನಿವಾರ್ಯವಾಗಿ ಬೇರೆಡೆಗೆ ತೆರಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮಹಿಸಿ, ವಿವಿಧ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು’ ಎಂದು ಹೆಸರು ಬಹಿರಂ‍ಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದರು. 

‘ಕಡ್ಡಾಯ ಸೇವೆಯಡಿ ನೇಮಕಾತಿ’ ‘ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಯಡಿ ಎಂಬಿಬಿಎಸ್ ಪದವೀಧರರನ್ನು ಬಳಸಿಕೊಳ್ಳಲಾಗುತ್ತದೆ. ನಾಲ್ಕು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೇ ರೀತಿ ಹಿರಿಯ ನಿವಾಸಿ ವೈದ್ಯಾಧಿಕಾರಿ ಹಾಗೂ ಕಿರಿಯ ನಿವಾಸಿ ವೈದ್ಯಾಧಿಕಾರಿ ಹುದ್ದೆಗಳಿಗೂ ಕಡ್ಡಾಯ ಸರ್ಕಾರಿ ಸೇವೆಯಡಿ ವೈದ್ಯರನ್ನು ಬಳಸಿಕೊಳ್ಳಲಾಗುವುದು’ ಎಂದು ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದರು. 

ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳು ಹುದ್ದೆ; ಖಾಲಿ ನಿರ್ದೇಶಕ;01 ವೈದ್ಯಕೀಯ ಅಧೀಕ್ಷಕ;01 ಸಹ ಪ್ರಾಧ್ಯಾಪಕ;03 ಸಹಾಯಕ ಪ್ರಾಧ್ಯಾಪಕ;12 ಹಿರಿಯ ನಿವಾಸಿ ವೈದ್ಯಾಧಿಕಾರಿ;04 ಕಿರಿಯ ನಿವಾಸಿ ವೈದ್ಯಾಧಿಕಾರಿ;07 ಸಮಾಲೋಚಕರು;02   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT