ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 2ನೇ ವಾರದಲ್ಲಿ ಚಿತ್ರಸಂತೆ ಆಯೋಜಿಸಲು ಚಿಂತನೆ: ಆನ್‌ಲೈನ್–ಆಫ್‌ಲೈನ್ ಜಿಜ್ಞಾಸೆ

Last Updated 16 ಡಿಸೆಂಬರ್ 2021, 22:16 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ ಚಿತ್ರಸಂತೆ ಮುಂಬರುವ ಜನವರಿಯಲ್ಲಿ ನಡೆಯಲಿದೆ.

ಆದರೆ, ನಗರದಲ್ಲಿ ಕೋವಿಡ್ ರೂಪಾಂತರಿ ಸೋಂಕು ಓಮೈಕ್ರಾನ್ ಪತ್ತೆಯಿಂದಾಗಿ ಈ ಕಾರ್ಯಕ್ರಮವನ್ನು ಭೌತಿಕವಾಗಿ ಆಯೋಜಿಸಬೇಕೋ ಅಥವಾ ಕಳೆದ ವರ್ಷದಂತೆ ಆನ್‌ಲೈನ್‌ಗೆ ಸೀಮಿತಗೊಳಿಸಬೇಕೋ ಎಂಬ ಜಿಜ್ಞಾಸೆಯು ಈಗ ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಾಡುತ್ತಿದೆ.

ಕೋವಿಡ್‌ ಕಾರಣ ಕಳೆದ ವರ್ಷ ನಡೆದ 18ನೇ ಚಿತ್ರಸಂತೆ ಆನ್‌ಲೈನ್‌ಗೆ ಸೀಮಿತವಾಗಿತ್ತು.ಪರಿಷತ್ತಿನ ವೆಬ್‌ ಪೋರ್ಟಲ್‌ ಜತೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ಗಳಲ್ಲೂ ಕಲಾಕೃತಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಕಲಾವಿದರನ್ನು ಸಂಪರ್ಕಿಸಿ, ಕಲಾಕೃತಿಗಳನ್ನು ಖರೀದಿಸುವ ವ್ಯವಸ್ಥೆ ರೂಪಿಸಲಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಪ್ರದರ್ಶನ ಎರಡು ತಿಂಗಳವರೆಗೆ ಮುಂದುವರಿದಿತ್ತು.

ಈ ಬಾರಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ಕುಮಾರಕೃಪಾ ರಸ್ತೆಯಲ್ಲಿ ಭೌತಿಕ ಪ್ರದರ್ಶನ ಆಯೋಜಿಸಲು ಪರಿಷತ್ತು ಚಿಂತನೆ ನಡೆಸಿತ್ತು. ಆದರೆ, ಓಮೈಕ್ರಾನ್ ಪತ್ತೆಯಾದ ಬಳಿಕ ಸರ್ಕಾರವು ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಪರಿಷತ್ತು ಗೊಂದಲಕ್ಕೊಳಗಾಗಿದೆ. ಭೌತಿಕ ಆಯೋಜನೆಗೆ ಸಂಬಂಧಿಸಿದಂತೆ ಪರಿಷತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಪತ್ರ ಬರೆದಿದೆ. ಅಲ್ಲಿಂದ ಬರುವ ಪ್ರತಿಕ್ರಯೆ ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಅಮೃತ ಮಹೋತ್ಸವ ಪರಿಕಲ್ಪನೆ:ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಗುಜರಾತ್, ರಾಜಸ್ಥಾನ... ಹೀಗೆ ವಿವಿಧ ಪ್ರದೇಶಗಳಿಂದ ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವು ಚಿತ್ರಸಂತೆಯ ಪರಿಕಲ್ಪನೆಯಾಗಿದ್ದು, ದೇಶದ ಇತಿಹಾಸ ಹಾಗೂ ಸಾಂಸ್ಕೃತಿಕ ವೈವಿಧ್ಯಗಳು ಕುಂಚದಲ್ಲಿ ಅರಳಲಿವೆ.

‘ಕಳೆದ ವರ್ಷದ ಚಿತ್ರಸಂತೆ ಆನ್‌ಲೈನ್ ವೇದಿಕೆಗೆ ಸೀಮಿತವಾಗಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋವಿಡ್ ಸಂಕಷ್ಟಕ್ಕೆ ಒಳಗಾಗಿದ್ದ ಕಲಾವಿದರಿಗೆ ಈ ಪ್ರದರ್ಶನ ವೇದಿಕೆ ಒದಗಿಸಿತ್ತು. ಭೌತಿಕ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದಲ್ಲಿ ಈ ಬಾರಿಯೂ ಆನ್‌ಲೈನ್ ಮೂಲಕವೇ ನಡೆಸಬೇಕಾಗುತ್ತದೆ. ಪರಿಷತ್ತಿನ 15 ಕೊಠಡಿಗಳನ್ನು ಗ್ಯಾಲರಿ ರೂಪದಲ್ಲಿ ಬಳಿಸಿಕೊಳ್ಳಬಹುದಾಗಿದೆ. ಅಲ್ಲಿ ಸಾವಿರಕ್ಕೂ ಅಧಿಕ ಕಲಾಕೃತಿಗಳ ಪ್ರದರ್ಶನ ಸಾಧ್ಯ’ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್‌. ಅಪ್ಪಾಜಯ್ಯ ತಿಳಿಸಿದರು.

ಪ್ರದರ್ಶನಕ್ಕೆ 700 ಅರ್ಜಿಗಳು
ಚಿತ್ರಸಂತೆಯಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳಲ್ಲಿಯೇ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈವರೆಗೆ 700 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ 1,100 ಕಲಾವಿದರು ಭಾಗವಹಿಸಿದ್ದರು. ಪ್ರತಿಯೊಬ್ಬರಿಗೂ ‍ಪ್ರತ್ಯೇಕ ಆನ್‌ಲೈನ್ ಪುಟಗಳನ್ನು ಒದಗಿಸಲಾಗಿತ್ತು.

***

ಚಿತ್ರಸಂತೆಯ ಭೌತಿಕ ಆಯೋಜನೆ ಬಗ್ಗೆ ಸರ್ಕಾರದ ಅನುಮತಿ ಕೇಳಲಾಗಿದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
–ಪ್ರೊ.ಕೆ.ಎಸ್‌. ಅಪ್ಪಾಜಯ್ಯ, ಗೌರವ ಕಾರ್ಯದರ್ಶಿ, ಕರ್ನಾಟಕ ಚಿತ್ರಕಲಾ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT