ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ಪ್ರಕರಣ | ‘ಹಾಸನ ಚಲೋ’ಗೆ ‘ನಾವೆದ್ದು ನಿಲ್ಲದಿದ್ದರೆ’ ವೇದಿಕೆ ಬೆಂಬಲ

Published 27 ಮೇ 2024, 23:21 IST
Last Updated 27 ಮೇ 2024, 23:21 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಮರ್ಪಕ ತನಿಖೆಗೆ ಒತ್ತಾಯಿಸಿ ಮೇ 30 ರಂದು ಹಾಸನದಲ್ಲಿ ನಡೆಯಲಿರುವ ‘ಹಾಸನದೆಡೆಗೆ ನಮ್ಮ ನಡಿಗೆ’ – ಹಾಸನ ಚಲೋ ಹೋರಾಟಕ್ಕೆ ‘ನಾವೆದ್ದು ನಿಲ್ಲದಿದ್ದರೆ‘ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘಟನೆಯ ಸದಸ್ಯೆ ಅಕ್ಕೈ ಪದ್ಮಶಾಲಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ರಾಜ್ಯದಾದ್ಯಂತ ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ರಾಜ್ಯ ಮತ್ತು ದೇಶದ ಬೇರೆ ಭಾಗಗಳಿಂದಲೂ ಚಿಂತಕರು, ಬರಹಗಾರರು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಭಾಗ ವಹಿಸಲಿದ್ದಾರೆ‘ ಎಂದು ವಿವರಿಸಿದರು.

‘ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಿಂಸಾಚಾರಕ್ಕೆ ಬಲಿಯಾದ ಸಂತ್ರಸ್ತೆಯರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಹಾಗೂ ಒಗ್ಗಟ್ಟಾಗಿ ಅವರ ಘನತೆಯನ್ನು ಎತ್ತಿಹಿಡಿಯುವುದು ಈ ಪ್ರತಿಭಟನೆ ಉದ್ದೇಶವಾಗಿದೆ‘ ಎಂದು ಹೇಳಿದರು.

‘ದೇಶ ಬಿಟ್ಟು ಓಡಿ ಹೋಗಿರುವ ಆರೋಪಿಯ ರಾಜತಾಂತ್ರಿಕ ಪಾಸ್‌ಪೋರ್ಟ್, ವೀಸಾ ರದ್ದುಪಡಿಸಬೇಕು. ಆತನ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಬೇಕು. ಆರೋಪಿಯನ್ನು ಬಂಧಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನೆರವಾಗಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈತ್ರಿ ಕೃಷ್ಣನ್, ಕೆ.ಎಸ್.ವಿಮಲಾ, ಮಮತಾ ಯಜಮಾನ್, ಅಖಿಲಾ ವಿದ್ಯಾಸಂದ್ರ, ಮಲ್ಲಿಗೆ ಸಿರಿಮನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT