ಬುಧವಾರ, ಡಿಸೆಂಬರ್ 7, 2022
22 °C

ದಕ್ಷಿಣ ಭಾರತದ ಮೊದಲ ವಂದೇ ಭಾರತ್, ಕಾಶಿ ಯಾತ್ರೆ ರೈಲಿಗೆ ಮೋದಿ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.

ಈ ರೈಲು ಮೈಸೂರಿನಿಂದ ಆರಂಭವಾಗಿ ಬೆಂಗಳೂರು ಮೂಲಕ ಚೆನ್ನೈ ನಗರವನ್ನು ತಲುಪಲಿದೆ. ಇದು ದೇಶದ 5ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಈ ರೈಲು ಟೆಕ್ ಮತ್ತು ಸ್ಟಾರ್ಟಪ್ ಹಬ್ ಬೆಂಗಳೂರು, ಕೈಗಾರಿಕಾ ಹಬ್ ಚೆನ್ನೈ ಮತ್ತು ಪ್ರಸಿದ್ಧ ಪ್ರವಾಸಿತಾಣ ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆನ್ನೈ–ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕದ ಜೊತೆಗೆ ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಸ್ವದೇಶಿ ನಿರ್ಮಿತ ಅಪಘಾತ ತಡೆ ತಂತ್ರಜ್ಞಾನ ‘ಕವಚ’ದಂತಹ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. 52 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀಗೆ ವೇಗ ಹೆಚ್ಚಿಸಿಕೊಳ್ಳಲಿದೆ. ಪ್ರತಿ ಗಂಟೆಗೆ ಗರಿಷ್ಠ ವೇಗದ ಮಿತಿ 180 ಕಿ.ಮೀ ಆಗಿದೆ. 2019ರಲ್ಲಿ ದೆಹಲಿ–ಕಾನ್ಪುರ–ಅಲಹಾಬಾದ್–ವಾರಾಣಸಿ ನಡುವಣ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಲಾಗಿತ್ತು.

ಇದರ ಜೊತೆಗೆ ಭಾರತ ಗೌರವ ಕಾಶಿ ದರ್ಶನ ರೈಲಿಗೂ ಮೋದಿ ಚಾಲನೆ ನೀಡಿದರು. ರೈಲ್ವೆ ಇಲಾಖೆಯ ಭಾರತ ಗೌರವ ರೈಲ್ವೆ ನೀತಿ ಅಡಿಯ ಈ ರೈಲನ್ನು ಕರ್ನಾಟಕದ ಮುಜರಾಯಿ ಇಲಾಖೆ ನಿರ್ವಹಿಸಲಿದೆ. ಈ ರೈಲು ಅಪಾರ ಜನರ ಕಾಶಿಯಾತ್ರೆಯ ಇಚ್ಛೆಯನ್ನು ಈಡೇರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಈ ರೈಲಿನಲ್ಲಿ 8 ದಿನಗಳ ಪ್ರವಾಸ ಪ್ಯಾಕೇಜ್ ಅನ್ನು ಯಾತ್ರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಕಾಶಿ ವಿಶ್ವನಾಥ ಯಾತ್ರಿಗಳಿಗೆ ಸರ್ಕಾರ ₹5,000 ಸಹಾಯಧನ ಸಹ ನೀಡಲಿದೆ.

ಈ ರೈಲು ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್ ಸೇರಿದಂತೆ ಪವಿತ್ರ ಧಾರ್ಮಿಕ ಸ್ಥಳಗಳಿಗೆ ತೆರಳಲಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ವಾರಾಣಸಿಗೆ (ಕಾಶಿ) ಯಾತ್ರಾರ್ಥಿಗಳನ್ನು ಕಳುಹಿಸಲು ರಾಜ್ಯ ಸರ್ಕಾರಗಳು ಮತ್ತು ರೈಲ್ವೆ ಸಚಿವಾಲಯವು ಒಟ್ಟಾಗಿ ಕೆಲಸ ಮಾಡುವ 'ಭಾರತ್ ಗೌರವ' ಯೋಜನೆಯಡಿಯಲ್ಲಿ ಈ ರೈಲು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಯಾತ್ರಾರ್ಥಿಗಳಿಗೆ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಭೇಟಿ ಸಂದರ್ಭ ಆರಾಮದಾಯಕ ವಾಸ್ತವ್ಯ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ಗೌರವ ಕಾಶಿ ದರ್ಶನ ರೈಲಿಗೆ ಚಾಲನೆ ನೀಡಿದ ನಂತರ ಟ್ವೀಟ್ ಮಾಡಿರುವ ಮೋದಿ, ಭಾರತ ಗೌರವ ಕಾಶಿ ಯಾತ್ರಾ ರೈಲನ್ನು ಆರಂಭಿಸಿದ ಮೊದಲ ರಾಜ್ಯವಾಗಿರುವ ಕರ್ನಾಟಕವನ್ನು ನಾನು ಅಭಿನಂದಿಸುತ್ತೇನೆ. ಈ ರೈಲು ಕಾಶಿ ಮತ್ತು ಕರ್ನಾಟಕವನ್ನು ಹತ್ತಿರ ತರುತ್ತದೆ. ಯಾತ್ರಿಕರು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಸುಲಭವಾಗಿ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು