ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಸದಿಂದ ವಿದ್ಯುತ್‌: ಕೆಪಿಸಿಎಲ್‌ ಹೆಜ್ಜೆ

Last Updated 26 ಅಕ್ಟೋಬರ್ 2018, 17:32 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಗಮವು (ಕೆಪಿಸಿಎಲ್‌) ಕಸದಿಂದ ವಿದ್ಯುತ್‌ ಉತ್ಪಾದನೆಗೆ ಮುಂದಡಿ ಇಟ್ಟಿದೆ.

ಈ ಸಂಬಂಧ ಬಿಬಿಎಂಪಿಯು ಎರಡು ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಕಳೆದ ವರ್ಷ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿತ್ತು. ಕಳೆದ ತಿಂಗಳು ವಿಸ್ತೃತ ಯೋಜನಾ ವರದಿ ಸಿದ್ಧವಾಗಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಘಟಕ ಸ್ಥಾ‍ಪನೆಗೆ ಅನುಮೋದನೆ ನೀಡಲಾಯಿತು. ನಿಗಮವು ಬಿಡದಿಯಲ್ಲಿ 15 ಮೆಗಾವಾಟ್‌ನ ಘಟಕ ಸ್ಥಾಪಿಸಲಿದೆ.

ನಗರದಲ್ಲಿ ಪ್ರತಿದಿನ 4 ಸಾವಿರ ಟನ್‌ ಕಸ ಉತ್ಪಾದನೆಯಾಗುತ್ತದೆ. ಕಸ ವಿಲೇವಾರಿಗೆ ಪಾಲಿಕೆ ವರ್ಷಕ್ಕೆ ₹500 ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ. ಕಸ ಸಂಸ್ಕರಣಾ ಘಟಕಗಳಿಗೆ ಆಗಾಗ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ. ಇದರಿಂದಾಗಿ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಉತ್ಪಾದನೆಯಿಂದ ಈ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಗಬಹುದು.

ಬಿಡದಿ–ಹೇರೋಹಳ್ಳಿ ರಸ್ತೆಯ ಪಕ್ಕದಲ್ಲಿ ಕೆಪಿಸಿಎಲ್‌ 175 ಎಕರೆ ಜಾಗ ಹೊಂದಿದೆ. 15 ಎಕರೆ ಜಾಗದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ವಿದ್ಯುತ್‌ ಉತ್ಪಾದಿಸಲು ನಿತ್ಯ 500 ಟನ್‌ನಿಂದ 1000 ಟನ್‌ ಒಣ ತ್ಯಾಜ್ಯದ ಅಗತ್ಯ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಘಟಕ ನಿರ್ಮಾಣದಿಂದ ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗಲಿದೆ’ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ಕಸದಿಂದ ವಿದ್ಯುತ್‌ ತಯಾರಿಸಲು ಐದು ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದವು. ಈ ಸಂಬಂಧ ಕಂಪನಿಯ ಪ್ರಮುಖರು ಪಾಲಿಕೆಯ ಅಧಿಕಾರಿಗಳ ಜತೆಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದರು. ಸ್ಥಳೀಯ ಗ್ರಾಮಸ್ಥರ ವಿರೋಧ ಹಾಗೂ ಸರ್ಕಾರಿ ಸಂಸ್ಥೆಗಳ ಒಪ್ಪಿಗೆ ವಿಳಂಬದಿಂದ ಎರಡು ಕಂಪನಿಗಳು ಹಿಂದಕ್ಕೆ ಸರಿದಿವೆ.

‘ಸದ್ಯ ಎರಡು ಯೋಜನೆಗಳನ್ನು ಕೈಬಿಡಲಾಗಿದೆ. ಇಸ್ರೇಲ್‌ನ ಸತಾರೆಮ್‌, ಅಮೆರಿಕ ಇಂಡಿಯಂ ಹಾಗೂ ಫ್ರೆಂಚ್‌ನ 2 ವೇಜ್‌ ಕಂಪನಿಗಳು ಆಸಕ್ತಿ ತೋರಿವೆ. ಸತಾರೆಮ್‌ ಕಂಪನಿಯು ಕನ್ನಹಳ್ಳಿ ಹಾಗೂ ಸೀಗೆಹಳ್ಳಿ ಗ್ರಾಮಗಳಲ್ಲಿ (1,000 ಟನ್‌), ಇಂಡಿಯಂ ಕಂಪನಿಯು ದೊಡ್ಡಬಿದರಕಲ್ಲು ಹಾಗೂ 2 ವೇಜ್‌ ಕಂಪನಿಯು ಚಿಕ್ಕನಾಗಮಂಗಲದಲ್ಲಿ ಘಟಕ ಸ್ಥಾಪಿಸಲಿವೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ವಿಲೇವಾರಿ) ಸರ್ಫರಾಜ್‌ ಖಾನ್‌ ತಿಳಿಸಿದರು.

‘ಸತಾರೆಮ್‌ ಹಾಗೂ 2 ವೇಜ್‌ ಕಂಪನಿ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ. ಇದೇ 29ರಂದು ನಡೆಯಲಿರುವ ಪಾಲಿಕೆಯ ಕೌನ್ಸಿಲ್‌ ಸಭೆಗೆ ಇಂಡಿಯಂ ಯೋಜನೆ ಪ್ರಸ್ತಾವ ಬರಲಿದೆ. ಒಪ್ಪಿಗೆ ಸಿಕ್ಕ ಬಳಿಕವೂ ಘಟಕಗಳು ಕಾರ್ಯಾರಂಭ ಮಾಡಲು ಕನಿಷ್ಠ ಒಂದು ವರ್ಷ ಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT