ಶನಿವಾರ, ಅಕ್ಟೋಬರ್ 31, 2020
27 °C
ನಿಯಮಗಳ ಉಲ್ಲಂಘನೆ: ವಿಧಾನ ಮಂಡಲದಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವರದಿ ಮಂಡನೆ

ರೇಸ್‌ ಕೋರ್ಸ್‌ ಪರವಾನಗಿ ರದ್ದತಿಗೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೇಸ್‌ ಕೋರ್ಸ್‌ ಪರ ವಾನಗಿ ನೀಡುವ ಕಾಯ್ದೆ ಮತ್ತು ನಿಯಮ ಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಬೆಂಗಳೂರು ಟರ್ಫ್‌ ಕ್ಲಬ್‌ಗೆ ನೀಡಿರುವ ಪರವಾನಗಿಯನ್ನು ರದ್ದು ಮಾಡುವಂತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಶಿಫಾರಸು ಮಾಡಿದೆ.

ಎಚ್‌.ಕೆ. ಪಾಟೀಲ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯನ್ನು ಶುಕ್ರವಾರ ವಿಧಾನ ಮಂಡಲದಲ್ಲಿ ಮಂಡಿಸಲಾಯಿತು. ನಿಯಮ ಉಲ್ಲಂಘಿಸಿರುವ ಆರೋಪದಡಿ ಟರ್ಫ್‌ ಕ್ಲಬ್‌ನ ಪರವಾನಗಿ ರದ್ದುಗೊಳಿಸಲು ಅವಕಾಶ ಇದ್ದರೂ ಆರ್ಥಿಕ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.

‘ಮುಖ್ಯಮಂತ್ರಿಯವರ ಅನು ಮೋದನೆ ಪಡೆದು ಟರ್ಫ್‌ ಕ್ಲಬ್‌ ಪರ ವಾನಗಿ ನವೀಕರಿಸಲಾಗಿದೆ. ರದ್ದು ಮಾಡುವುದಕ್ಕೂ ಮುಖ್ಯಮಂತ್ರಿ ಯವರ ಒಪ್ಪಿಗೆ ಅಗತ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ. ಶೀಘ್ರದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಪರವಾನಗಿ ರದ್ದತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಶಿಫಾರಸು ಮಾಡಿದೆ.

ಬಾಕಿ ವಸೂಲಿಗೆ ಕ್ರಮ: ಬೆಂಗಳೂರು ಟರ್ಫ್‌ ಕ್ಲಬ್‌ ಜಮೀನು ಗುತ್ತಿಗೆ ಬಾಬ್ತು 2018–19ರ ಅಂತ್ಯಕ್ಕೆ ರಾಜ್ಯ ಸರ್ಕಾರಕ್ಕೆ ₹ 36.63 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಮೊತ್ತದ ಜತೆ 2019–20ನೇ ವರ್ಷದ ಅಂತ್ಯದವರೆಗಿನ ಗುತ್ತಿಗೆ ಶುಲ್ಕವನ್ನು ಬಡ್ಡಿಸಮೇತವಾಗಿ ವಸೂಲಿ ಮಾಡಲು ಆರ್ಥಿಕ ಇಲಾಖೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಪಿಎಸಿ ತನ್ನ ಶಿಫಾರಸಿನಲ್ಲಿ ಹೇಳಿದೆ.

2009ರ ಅಂತ್ಯದಲ್ಲೇ ಟರ್ಫ್‌ ಕ್ಲಬ್‌ ಜಮೀನಿನ ಗುತ್ತಿಗೆ ಅವಧಿ ಪೂರ್ಣಗೊಂಡಿತ್ತು. ಜಮೀನನ್ನು ವಾಪಸು ಪಡೆಯುವ ಸಂಬಂಧ ಆದೇಶವನ್ನೂ ಹೊರಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ 2020ರ ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿ ಈವರೆಗೂ ವಿಚಾರಣೆಗೆ ಬಂದಿಲ್ಲ. ಅಡ್ವೊಕೇಟ್‌ ಜನರಲ್‌ ಮತ್ತು ಕಾನೂನು ತಜ್ಞರ ಜತೆ ಸಮಾಲೋಚಿಸಿ ತ್ವರಿತ ವಿಚಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆ.

ಕುದುರೆ ಓಡಿಸುವ ಸ್ಪರ್ಧೆಗಾಗಿ ಮೈಸೂರಿನ ಅಂದಿನ ಮಹಾರಾಜರು ಟರ್ಫ್‌ ಕ್ಲಬ್‌ಗೆ 1923ರಲ್ಲಿ 83 ಎಕರೆ 14 ಗುಂಟೆ ಜಮೀನನ್ನು ಬಾಡಿಗೆ ಆಧಾರದ ಮೇಲೆ ನೀಡಿದ್ದರು. ಆದರೆ, ಕ್ಲಬ್‌ ಬಳಿ ವಾಸ್ತವಿಕವಾಗಿ 67.63 ಎಕರೆ ಜಮೀನು ಮಾತ್ರ ಇದೆ. 15.51 ಎಕರೆಯಷ್ಟು ವಿಸ್ತೀರ್ಣ ವ್ಯತ್ಯಾಸ ಇರುವ ಕುರಿತು ಪಿಎಸಿ, 2005ರಲ್ಲೇ ಸ್ಥಳ ಪರಿಶೀಲಿಸಿ ಮಧ್ಯಂತರ ವರದಿ ನೀಡಿತ್ತು. ಈ ಕುರಿತು ಆರ್ಥಿಕ ಇಲಾಖೆಯು ಈವರೆಗೂ ಸ್ಪಷ್ಟೀಕರಣ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊರ ವಲಯಕ್ಕೆ ಸ್ಥಳಾಂತರಿಸಿ
ಬೆಂಗಳೂರು ಟರ್ಫ್‌ ಕ್ಲಬ್‌ ಅನ್ನು ಬೆಂಗಳೂರು ನಗರದ ಹೊರಕ್ಕೆ ಸ್ಥಳಾಂತರಿಸುವ ಕುರಿತು 1968ರಿಂದಲೂ ಚರ್ಚೆ ನಡೆಯುತ್ತಿದೆ. ಆದರೆ, ಈವರೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಕ್ಲಬ್‌ ಬಳಿ ಇರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಲಾಲ್‌ಬಾಗ್‌ ಅಥವಾ ಕಬ್ಬನ್‌ ಉದ್ಯಾನದ ಮಾದರಿಯಲ್ಲಿ ಹಸಿರು ಉದ್ಯಾನವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಎಸಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು