ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಾರ್ಶ್ವವಾಯು ಪೀಡಿತರಿಗೆ ‘ವಿಶೇಷ ಗಾಲಿ ಕುರ್ಚಿ‘

ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಕೊಳ್ಳಲು ಐಐಐಟಿಬಿ ಸಾಧನ ಅಭಿವೃದ್ಧಿ
Published 27 ಮೇ 2024, 1:23 IST
Last Updated 27 ಮೇ 2024, 1:23 IST
ಅಕ್ಷರ ಗಾತ್ರ

ಬೆಂಗಳೂರು: ಪಾರ್ಶ್ವವಾಯು ಪೀಡಿತರ ಪುನರ್ವಸತಿಗೆ ಸಂಬಂಧಿಸಿದಂತೆ ಇಲ್ಲಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿಬಿ) ವಿಶೇಷ ಗಾಲಿ ಕುರ್ಚಿ ಅಭಿವೃದ್ಧಿಪಡಿಸಿದೆ. ಈ ಗಾಲಿ ಕುರ್ಚಿಯ ನೆರವಿನಿಂದ ರೋಗಿಗಳು ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಕೊಳ್ಳಲು ಸಾಧ್ಯವಾಗಲಿದೆ. 

‘ಇಂಟರ್‌ನೆಟ್ ಆಫ್‌ ಥಿಂಗ್ಸ್’ ತಂತ್ರಜ್ಞಾನ ಆಧಾರಿತ ‘ಕ್ಸೊರಿಹ್ಯಾಬ್’ ಎಂಬ ಸಾಧನವನ್ನು ಐಐಐಟಿಬಿಯ ಸೆಂಟರ್ ಫಾರ್ ಇಂಟರ್‌ನೆಟ್ ಆಫ್ ಎಥಿಕಲ್ ಥಿಂಗ್ಸ್‌ನಲ್ಲಿ (ಸಿಐಇಟಿ) ಅಭಿವೃದ್ಧಿಪಡಿಸಲಾಗಿದೆ. ರೊಬೊಟಿಕ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗಿದ್ದು, ಇದಕ್ಕೆ ಐಟಿ ಬಿಟಿ ಇಲಾಖೆಯೂ ಬೆಂಬಲ ನೀಡಿದೆ.

ಎರಡು ವರ್ಷಗಳ ಅವಧಿಯಲ್ಲಿ ಈ ಸಾಧನ ಆವಿಷ್ಕರಿಸಿ, ಗಾಲಿ ಕುರ್ಚಿಗೆ ಅಳವಡಿಸಲಾಗಿದೆ. 4.8 ಅಡಿಯಿಂದ 5.8 ಅಡಿ ಎತ್ತರ ಹಾಗೂ 75 ಕೆ.ಜಿ.ವರೆಗಿನ ತೂಕದ ವಿವಿಧ ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಸಾಧನವನ್ನು ಒಳಗೊಂಡ ಗಾಲಿ ಕುರ್ಚಿಯು ಉತ್ತಮ ಫಲಿತಾಂಶ ನೀಡಿದ್ದರಿಂದ ಈ ಆವಿಷ್ಕಾರವನ್ನು ಸಂಶೋಧನೆಗೆ ಸಂಬಂಧಿಸಿದ ವರದಿಯನ್ನು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿಯೂ ಸಂಸ್ಥೆ ಪ್ರಕಟಿಸಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ 70 ಸಾವಿರದಿಂದ 80 ಸಾವಿರ ಜನರು ಪಾರ್ಶ್ವವಾಯು ಪೀಡಿತರಾಗುತ್ತಿದ್ದಾರೆ. ಸದ್ಯ 6 ಲಕ್ಷ ಮಂದಿ ಪಾರ್ಶ್ವವಾಯು ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕ ಒಂದು ಲಕ್ಷ ಪಾರ್ಶ್ವವಾಯು ರೋಗಿಗಳ ಪೈಕಿ 73 ಜನರು ಮರಣ ಹೊಂದುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ತುರ್ತು ಚಿಕಿತ್ಸೆಗೆ ದಾಖಲಾಗುವ ರೋಗಿಗಳಲ್ಲಿ ಶೇ 25 ರಷ್ಟು ರೋಗಿಗಳು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ತಿಂಗಳಿಗೆ 200 ರಿಂದ 250 ರೋಗಿಗಳು ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಂಸ್ಥೆಗೆ ಬರುತ್ತಿದ್ದಾರೆ. ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಪಾರ್ಶ್ವವಾಯು ಪೀಡಿತರ ಆಸ್ಪ‍ತ್ರೆ ಅವಧಿ ಕಡಿತಕ್ಕೆ ಈ ಸಾಧನ ಸಹಕಾರಿಯಾಗಲಿದೆ. 

ಫಿಸಿಯೋಥೆರಪಿ ಸುಲಭ:

‘ಕ್ಸೊರಿಹ್ಯಾಬ್’ ಸಾಧನವನ್ನು ಒಳಗೊಂಡ ವಿಶೇಷ ಗಾಲಿ ಕುರ್ಚಿಯು ಶಸ್ತ್ರಚಿಕಿತ್ಸೆಗೆ ಒಳಗಾದ ಪಾರ್ಶ್ವವಾಯು ರೋಗಿಗಳಿಗೆ ಫಿಸಿಯೋಥೆರಪಿಗೆ ಸಹಕಾರಿಯಾಗಲಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳು ಫಿಸಿಯೋಥೆರಪಿಗೆ ಒಳಗಾಗಬೇಕಾಗುತ್ತದೆ. ಆದರೆ, ರಾಜ್ಯದ ಆಸ್ಪತ್ರೆಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಫಿಸಿಯೋಥೆರಪಿಸ್ಟ್ ಇದ್ದಾರೆ. ಇದರಿಂದಾಗಿ ನಿಯಮಿತವಾಗಿ ಆಸ್ಪತ್ರೆಗಳಿಗೆ ತೆರಳಿ, ಫಿಸಿಯೋಥೆರಪಿ ಪಡೆಯುವುದು ಸವಾಲಾಗಿದೆ. ಆದ್ದರಿಂದ ಐಐಐಟಿಬಿಯ ಸಿಐಇಟಿ ಕೇಂದ್ರದ ಸಂಶೋಧಕರು ಮನೆಯಲ್ಲಿಯೇ ಫಿಸಿಯೋಥೆರಪಿ ಪಡೆಯಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಿ, ಗಾಲಿ ಕುರ್ಚಿಗೆ ಅಳವಡಿಸಿದ್ದಾರೆ. ಇದರಿಂದ ಸ್ವಯಂಚಾಲಿತ ಫಿಸಿಯೋಥೆರಪಿ ಸಾಧ್ಯವಾಗಲಿದೆ.

‘ನಿಮ್ಹಾನ್ಸ್‌ನ ನರರೋಗ ಚಿಕಿತ್ಸಕರೊಬ್ಬರು ಮನೆಯಲ್ಲಿಯೇ ರೋಗಿಗಳು ಸುಲಭವಾಗಿ ಫಿಸಿಯೋಥೆರಪಿ ಮಾಡಿಕೊಳ್ಳುವಂತಹ, ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯಬಹುದಾದ ಸಾಧನವನ್ನು ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದರು. ಇದನ್ನು ಗಂಭೀರವಾಗಿ ‍ಪರಿಗಣಿಸಿ ಈ ಆವಿಷ್ಕಾರ ಮಾಡಿದೆವು’ ಎಂದು ಸಿಐಇಟಿ ಸಂಚಾಲಕ ಮಾಧವ್ ರಾವ್ ತಿಳಿಸಿದರು. 

ರೋಗಿಯ ಚೇತರಿಕೆ ವಿಶ್ಲೇಷಣೆ

‘ಈ ಸಾಧನವು ರೋಗಿಯ ಸ್ನಾಯುಗಳ ನಡವಳಿಕೆ ಮತ್ತು ಚೇತರಿಕೆಯ ವಿಶ್ಲೇಷಣೆಗೂ ಸಹಾಯ ಮಾಡುತ್ತದೆ. ಇದರಿಂದಾಗಿ ವೈದ್ಯರ ನಿರಂತರ ಮೇಲ್ವಿಚಾರಣೆ ತಪ್ಪಲಿದೆ. ಸಾಧನ ಅಳವಡಿಸಿದ ಗಾಲಿ ಕುರ್ಚಿಯನ್ನು ಸ್ಟ್ರೆಚರ್ ರೂಪದಲ್ಲಿಯೂ ಬಳಸುವ ಅವಕಾಶ ನೀಡಲಾಗಿದೆ. ಐಒಟಿ ತಂತ್ರಜ್ಞಾನ ಬಳಕೆಯಿಂದಾಗಿ ವ್ಯಕ್ತಿಯ ಸ್ಥಿತಿಗತಿಯ ಮಾಹಿತಿಯನ್ನು ಸೆರೆಹಿಡಿದು ವೈದ್ಯರಿಗೆ ರವಾನಿಸುವ ವ್ಯವಸ್ಥೆಯೂ ಇದೆ. ಇದರಿಂದ ವೈದ್ಯರು ಅಗತ್ಯ ಔಷಧ ಮತ್ತು ಚಿಕಿತ್ಸಾ ವಿವರಗಳನ್ನು ವ್ಯಕ್ತಿ ಇರುವಲ್ಲಿಯೇ ಒದಗಿಸಲು ಸಾಧ್ಯ’ ಎಂದು ಸಿಐಇಟಿ ಪ್ರಾಜೆಕ್ಟ್ ಸದಸ್ಯ ಜಗನ್ ಪಿ. ತಿಳಿಸಿದರು.  ಸದ್ಯ ಈ ಸಾಧನವನ್ನು ಆಸ್ಪತ್ರೆಗಳಿಗೆ ₹ 85 ಸಾವಿರದಿಂದ ₹ 90 ಸಾವಿರಕ್ಕೆ ಪೂರೈಸಲು ಸಂಸ್ಥೆ ನಿರ್ಧರಿಸಿದೆ. ಆಸ್ಪತ್ರೆಗಳು ಬಾಡಿಗೆ ಆಧಾರದಲ್ಲಿ ರೋಗಿಗಳಿಗೆ ಒದಗಿಸಬಹುದಾಗಿದೆ. 

ಯುವಜನರಿಗೂ ಪಾರ್ಶ್ವವಾಯು

‘ಧೂಮಪಾನ ಮದ್ಯಪಾನ ಡ್ರಗ್ ವ್ಯಸನದಿಂದ ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ. ಪಾರ್ಶ್ವವಾಯು ಆದಾಗ ಸಮಯಪ್ರಜ್ಞೆ ಬಹಳ ಮುಖ್ಯ. ಆರೈಕೆ ಹಾಗೂ ಸರಿಯಾದ ಸಮಯಕ್ಕೆ ಸಮರ್ಪಕವಾದ ಚಿಕಿತ್ಸೆ ಸಿಕ್ಕರೆ ವ್ಯಕ್ತಿ ಬೇಗ ಗುಣಮುಖವಾಗಲು ಸಾಧ್ಯ’ ಎಂದು ನಿಮ್ಹಾನ್ಸ್ ವೈದ್ಯರೊಬ್ಬರು ತಿಳಿಸಿದರು.  ‘ಮಧುಮೇಹ ಧೂಮಪಾನ ಮದ್ಯಪಾನ ಕಳಪೆ ಆಹಾರ ಪದ್ಧತಿ ಕಡಿಮೆ ದೈಹಿಕ ಚಟುವಟಿಕೆ ಒತ್ತಡ ಖಿನ್ನತೆ ವಿವಿಧ ಕಾರಣಗಳಿಂದ ಪಾರ್ಶ್ವವಾಯು ಸಂಭವಿಸುತ್ತದೆ. ತೋಳಿನ ದೌರ್ಬಲ್ಯ ಮಾತು ತೊದಲುವಿಕೆ ಸೇರಿ ವಿವಿಧ ಲಕ್ಷಣಗಳು ಕಾಣಿಸಿಕೊಂಡಾಗ ತುರ್ತುಚಿಕಿತ್ಸೆ ಒದಗಿಸಬೇಕು. ಸಂಸ್ಥೆಯಲ್ಲಿ ಪಾರ್ಶ್ವವಾಯು ಪೀಡಿತರ ಆರೈಕೆಗೆ 24 ಹಾಸಿಗೆಗಳನ್ನು ಮೀಸಲಿಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT