ಆಯುಷ್ಮಾನ್ ಭಾರತ್: ಪೂರಕ ದಾಖಲೆ ಕೇಳಿದರೆ ಶಿಸ್ತು ಕ್ರಮ
ಬೆಂಗಳೂರು: ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಆರೋಗ್ಯ ಕಾರ್ಡ್ ಹೊಂದಿದ್ದಲ್ಲಿ ಚಿಕಿತ್ಸೆಗೆ ಬೇರೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ. ಈ ಕಾರ್ಡ್ ಹೊಂದಿರುವವ
ರಿಗೆ ಪೂರಕ ದಾಖಲಾತಿ ಒದಗಿಸುವಂತೆ ಸೂಚಿಸಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಈ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕಿ ಎನ್.ಟಿ. ಆಬ್ರು ಅವರು ಜಂಟಿ ಸುತ್ತೋಲೆ ಹೊರಡಿಸಿದ್ದಾರೆ. ‘ರಾಜ್ಯದಲ್ಲಿನ ಆದ್ಯತೆ ಮತ್ತು ಸಾಮಾನ್ಯ ವರ್ಗದ ಕುಟುಂಬದ ಸದಸ್ಯರಿಗೆ ಶೀಘ್ರ ಹಾಗೂ ಶುಲ್ಕ ರಹಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ಸರ್ಕಾರಿ ಅಥವಾ ನೋಂದಾಯಿತ ಖಾಸಗಿ
ಆಸ್ಪತ್ರೆಗಳಲ್ಲಿ ಅವಶ್ಯಕತೆಆಧರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಯೋಜನೆಯ 1.5 ಕೋಟಿ ಗುರುತಿನಚೀಟಿ ವಿತರಿಸಲಾಗಿದೆ’ ಎಂದು ತಿಳಿಸಲಾಗಿದೆ.
‘ಯೋಜನೆಯ ಫಲಾನುಭವಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬಂದಾಗ ಹಾಗೂ ಒಳರೋಗಿಯಾಗಿ ದಾಖಲಾದಾಗ ಗುರುತಿನ ಚೀಟಿ ತೋರಿಸಿದರೂ ಪಡಿತರ ಚೀಟಿ ಸೇರಿದಂತೆ ಕೆಲವೊಂದು ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರ ಸಹಾಯಕರು ಚಿಕಿತ್ಸೆಗೆ ಅವಕಾಶ ನೀಡದಿರುವ ಬಗ್ಗೆ ದೂರುಗಳು ಬಂದಿವೆ. ಪೂರಕ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ. ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ನೀಡದಿದ್ದಲ್ಲಿ ನಿಯಮಾನುಸಾರ ದುರ್ನಡತೆಯೆಂದು ಪರಿಗಣಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.