ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸುರಂಗದಲ್ಲಿ ಕಂಪನ ತಡೆಗೆ ತಂತ್ರಜ್ಞಾನ!

ಡೈರಿ ಸರ್ಕಲ್–ನಾಗಾವರ ಮಧ್ಯೆ ನಿರ್ಮಾಣಗೊಳ್ಳುತ್ತಿರುವ 13.8 ಕಿ. ಸುರಂಗ ಮಾರ್ಗದಲ್ಲಿ ಅಳವಡಿಕೆ
Published 10 ಜನವರಿ 2024, 20:25 IST
Last Updated 10 ಜನವರಿ 2024, 20:25 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಸುರಂಗ ಮಾರ್ಗದಲ್ಲಿ ರೈಲು ಸಂಚರಿಸುವಾಗ ಉಂಟಾಗುವ ಕಂಪನವನ್ನು ತಗ್ಗಿಸಲು ಮಾಸ್‌ ಸ್ಪ್ರಿಂಗ್‌ ಸಿಸ್ಟಂ (ಎಂಎಸ್‌ಎಸ್‌) ತಂತ್ರಜ್ಞಾನವನ್ನು ಬಿಎಂಆರ್‌ಸಿಎಲ್‌ ಅಳವಡಿಸಲಿದೆ.

ನಗರದ ಅತಿ ಉದ್ದದ ಭೂಗತ ಹಳಿಯನ್ನು ಹೊಂದಿರುವ ಮೆಟ್ರೊ ಗುಲಾಬಿ ಮಾರ್ಗದಲ್ಲಿನ ಕೊಟ್ಟಿಗೆರೆ–ನಾಗವಾರದ ನಡುವಿನ ಸುರಂಗ ಮಾರ್ಗದಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ.

ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿಲೋಮೀಟರ್‌ ಇದೆ. ಡೈರಿ ಸರ್ಕಲ್–ನಾಗಾವರದವರೆಗೆ 13.8 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದೂ ಸೇರಿದಂತೆ ಮುಂದೆ ನಿರ್ಮಾಣವಾಗುವ ಎಲ್ಲ ಸುರಂಗ ಮಾರ್ಗಗಳಲ್ಲಿ ಎಂಎಸ್‌ಎಸ್‌ ಕಂಪನ ನಿರೋಧಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈಗ ಚಾಲ್ತಿಯಲ್ಲಿರುವ ಸುರಂಗಗಳ ನಿರ್ಮಾಣ ಕಾಮಗಾರಿ 2025ರ ಮಾರ್ಚ್‌ ಒಳಗೆ ಪೂರ್ಣಗೊಳ್ಳಲಿವೆ.

ಅಳವಡಿಕೆ ಹೀಗೆ :

ಸುರಂಗ ನಿರ್ಮಿಸುವಾಗ ಕಂಪನ ಉಂಟಾಗುತ್ತದೆ. ಇದು ತಾತ್ಕಾಲಿಕವಾದುದು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಾತ್ರ ಇರುತ್ತದೆ. ಆದರೆ, ಸುರಂಗದಲ್ಲಿ ರೈಲು ಸಂಚರಿಸುವಾಗ ಉಂಟಾಗುವ ಕಂಪನ ನಿರಂತರವಾಗಿರುತ್ತದೆ. ಮಾಸ್‌ ಸ್ಪ್ರಿಂಗ್‌ ಸಿಸ್ಟಂ ತಂತ್ರಜ್ಞಾನ ಅಳವಡಿಕೆಯಿಂದ ಕಂಪನವನ್ನು ತಡೆಗಟ್ಟಬಹುದಾಗಿದೆ.

ಸುರಂಗ ಮಾರ್ಗ ಕೊರೆದ ಬಳಿಕ ನೆಲಕ್ಕೆ ಕಾಂಕ್ರೀಟ್‌ ಹಾಕಲಾಗುತ್ತದೆ. ಅದರ ಮೇಲೆ ಮಾಸ್‌ ಸ್ಪ್ರಿಂಗ್‌ ಸಿಸ್ಟಂ ಪ್ಯಾಡ್‌ಗಳನ್ನು ಅಳವಡಿಸಲಾಗುತ್ತದೆ. ಅದರ ಮೇಲೆ ಮತ್ತೆ ಕಾಂಕ್ರೀಟ್‌ ಹಾಕಿ ಹಳಿ ಅಳವಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

ಮಣ್ಣಿನ ಪದರ ಅಧ್ಯಯನ:

‘ಆಸ್ಪತ್ರೆಗಳು, ಸೂಕ್ಷ್ಮ ಕಟ್ಟಡಗಳು, ಸ್ಮಾರಕಗಳು, ವಸ್ತುಸಂಗ್ರಹಾಲಯಗಳು, ಆಳವಿಲ್ಲದ ಕಟ್ಟಡ ಅಡಿಪಾಯಗಳಂತಹವು ಇರುವಲ್ಲಿ ಕಂಪನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇಂಥ ಸ್ಥಳಗಳಲ್ಲಿರುವ ಮಣ್ಣಿನ ಪದರಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಕಂಪನ ಹೆಚ್ಚು ಉಂಟಾಗುವ ಪ್ರದೇಶಗಳಲ್ಲಿ ನಿರ್ಮಿಸುವ ಸುರಂಗ ಮಾರ್ಗದಲ್ಲಿ ಎಂಎಸ್‌ಎಸ್‌ ಪ್ಯಾಡ್‌ ಅಳವಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಬಿಎಂಆರ್‌ಸಿಎಲ್‌ ವತಿಯಿಂದ ಎಂಎಸ್‌ಎಸ್‌ ಪ್ಯಾಡ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಂಪನ ತಡೆಯುವಲ್ಲಿ ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ ಚವಾಣ್ ಪ್ರತಿಕ್ರಿಯಿಸಿದರು.

ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಇರುವ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ವ್ಯವಸ್ಥೆ
ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಇರುವ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ವ್ಯವಸ್ಥೆ

ಹೊಸ ಮಾರ್ಗದಲ್ಲಿ ಮಾತ್ರ ಪಿಎಸ್‌ಡಿ

ಒಂದು ವಾರದಲ್ಲಿ ಇಬ್ಬರು ಮೆಟ್ರೊ ಹಳಿಗೆ ಹಾರಿದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ವ್ಯವಸ್ಥೆ ಅಳವಡಿಸುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ’ಈ ಪಿಎಸ್‌ಡಿ ವ್ಯವಸ್ಥೆಯನ್ನು ಈಗ ನಿರ್ಮಾಣಗೊಳ್ಳುತ್ತಿರುವ ಹೊಸ ಸುರಂಗ ಮಾರ್ಗಗಳ ನಿಲ್ದಾಣಗಳಲ್ಲಿ ಮಾತ್ರ ಅಳವಡಿಸಲಾಗುವುದು. ಈಗಿರುವ ಮಾರ್ಗಗಳಲ್ಲಿ ಅಳವಡಿಸುವ ಕುರಿತು ಮುಂದೆ ಚರ್ಚಿಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಹಳದಿ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಾಣಗೊಳ್ಳುತ್ತಿರುವ ನಿಲ್ದಾಣದಲ್ಲಿ ಮೊದಲ ಪಿಎಸ್‌ಡಿ ಅಳವಡಿಕೆಯಾಗಲಿದೆ. ಮುಂದೆ ಹಳದಿ ಮತ್ತು ನೀಲಿ ಮಾರ್ಗದ ವಿವಿಧ ನಿಲ್ದಾಣಗಳಲ್ಲಿಯೂ ಅಳವಡಿಸಲಾ ಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಳಿಗಳತ್ತ ನುಗ್ಗುವುದನ್ನು ತಪ್ಪಿಸಲು ಚೆನ್ನೈ ದೆಹಲಿ ಮತ್ತು ಮುಂಬಯಿಯಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT