ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ದಾಟುವಾಗ ರೈಲು ಡಿಕ್ಕಿ: ಮೂವರು ಸ್ನೇಹಿತರು ಸಾವು

ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಚಿನ್ನಪ್ಪನಹಳ್ಳಿ ಗೇಟ್‌ ಬಳಿ ಘಟನೆ
Published 26 ಏಪ್ರಿಲ್ 2024, 0:31 IST
Last Updated 26 ಏಪ್ರಿಲ್ 2024, 0:31 IST
ಅಕ್ಷರ ಗಾತ್ರ

ಬೆಂಗಳೂರು: ಮಾರತ್ತಹಳ್ಳಿ ಸಮೀಪದ ಚಿನ್ನಪ್ಪನಹಳ್ಳಿ ಗೇಟ್‌ ಬಳಿ ರೈಲು ಡಿಕ್ಕಿಯಾಗಿ ಮೂವರು ಸ್ನೇಹಿತರು ಮೃತಪಟ್ಟಿದ್ದು, ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಂಧ್ರಪ್ರದೇಶದ ಚಿತ್ತೂರಿನ ಲೋಕೇಶ್ (23), ಬಾಲಸುಬ್ರಹ್ಮಣ್ಯಂ (22) ಹಾಗೂ ಸಿ. ಶಶಿಕುಮಾರ್ (20) ಮೃತರು. ಮೂವರು ಒಂದೇ ಊರಿನವರು. ಬುಧವಾರ ರಾತ್ರಿ ಮೂವರು ಒಟ್ಟಿಗೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ರೈಲ್ವೆ ಎಸ್ಪಿ ಎಸ್‌.ಕೆ. ಸೌಮ್ಯಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೃತ ಲೋಕೇಶ್, ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಶಿಕುಮಾರ್, ಕೆಲಸ ಹುಡುಕಿಕೊಂಡು ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಪದವೀಧರಾಗಿದ್ದ ಬಾಲಸುಬ್ರಹ್ಮಣ್ಯಂ, ಉನ್ನತ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದರು. ಮೂವರು ಮಾರತ್ತಹಳ್ಳಿ ಬಳಿಯ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡವೊಂದರಲ್ಲಿ ನೆಲೆಸಿದ್ದರು’ ಎಂದು ಹೇಳಿದರು.

ಎಕ್ಸ್‌ಪ್ರೆಸ್ ರೈಲು ಗಮನಿಸದ ಸ್ನೇಹಿತರು: ‘ಲೋಕೇಶ್, ಶಶಿಕುಮಾರ್ ಹಾಗೂ ಬಾಲಸುಬ್ರಹ್ಮಣ್ಯಂ ಅವರು ಕೆಲಸ ನಿಮಿತ್ತ ಪೇಯಿಂಗ್ ಗೆಸ್ಟ್ ಕಟ್ಟಡದಿಂದ ಹೊರಗಡೆ ಹೋಗಿದ್ದರು. ಚಿನ್ನಪ್ಪನಹಳ್ಳಿ ಗೇಟ್‌ನಿಂದ 1 ಕಿ.ಮೀ ದೂರದಲ್ಲಿರುವ ಹಳಿ ಮೇಲೆ ಸಾರ್ವಜನಿಕರು ಅಕ್ರಮವಾಗಿ ಓಡಾಡುತ್ತಾರೆ. ಇದೇ ಸ್ಥಳದಲ್ಲಿಯೇ ಮೂವರು ಹಲವರು ಬಾರಿ ಓಡಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬುಧವಾರ ರಾತ್ರಿ 10.20 ಗಂಟೆ ಸುಮಾರಿಗೆ ಮೂವರು ಒಟ್ಟಿಗೆ ಹಳಿ ದಾಟುತ್ತಿದ್ದರು. ಯಶವಂತಪುರದಿಂದ ಕಣ್ಣೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು, ಇದೇ ಮಾರ್ಗದಲ್ಲಿ ಅತೀ ವೇಗದಲ್ಲಿ ಹೊರಟಿತ್ತು. ಅದನ್ನು ಮೂವರು ಸ್ನೇಹಿತರು ಗಮನಿಸಿರಲಿಲ್ಲ.’

‘ಹಳಿ ದಾಟುತ್ತಿದ್ದ ಮೂವರು ಸ್ನೇಹಿತರಿಗೆ ರೈಲು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಮೂವರು, ಹಳಿ ಅಕ್ಕ–ಪಕ್ಕದಲ್ಲಿ ಹಾರಿ ಬಿದ್ದಿದ್ದರು. ಇದರಿಂದಾಗಿ ಮೂವರ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿತ್ತು. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಮಾಹಿತಿ ನೀಡಿದ್ದ ಲೋಕೊ ಪೈಲೆಟ್: ‘ರೈಲಿನಲ್ಲಿದ್ದ ಲೋಕೊ ಪೈಲೆಟ್, ಹಳಿ ಮೇಲೆ ಮೂವರು ಸ್ನೇಹಿತರು ಇರುವುದನ್ನು ನೋಡಿದ್ದರು. ಆದರೆ, ರೈಲು ಅತೀ ವೇಗದಲ್ಲಿ ಇದ್ದುದರಿಂದ ಅವರಿಂದ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಮೂವರಿಗೆ ರೈಲು ಡಿಕ್ಕಿಯಾಗಿದ್ದನ್ನು ನೋಡಿದ್ದ ಅವರು, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸ್ಥಳಕ್ಕೆ ಹೋಗಿದ್ದ ಭದ್ರತಾ ಸಿಬ್ಬಂದಿ, ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದರು. ನಸುಕಿನಲ್ಲಿ ಮೃತದೇಹಗಳು ಪತ್ತೆಯಾದವು. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಹೇಳಿದರು.

‘ಹಳಿ ಮೇಲೆ ಅಕ್ರಮವಾಗಿ ಸಂಚರಿಸಿದ್ದರಿಂದ ಈ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೂವರ ಸಾವಿನ ಬಗ್ಗೆ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT