ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ಹಳದಿ ಮಾರ್ಗದಲ್ಲಿ ಸಂಚಾರ ಪರೀಕ್ಷೆ ಆರಂಭ

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕಾಗಿ ವಿವಿಧ ಪರೀಕ್ಷೆಗಳು ಆರಂಭಗೊಂಡಿವೆ. ಈ ಮಾರ್ಗದಲ್ಲಿ ‘ಚಾಲಕ ರಹಿತ ತಂತ್ರಜ್ಞಾನ’ದ ರೈಲು ಸಂಚರಿಸುವುದರಿಂದ ಪರೀಕ್ಷೆಗಳೇ ಸುಮಾರು 6 ತಿಂಗಳು ನಡೆಯಲಿವೆ.

ಎಂಜಿನ್‌ ಹೊಂದಿರುವ ಎರಡು ಬೋಗಿಗಳು ಸೇರಿದಂತೆ 6 ಬೋಗಿಗಳ ಒಂದು ರೈಲು ಈಗಾಗಲೇ ಹೆಬ್ಬಗೋಡಿ ಡಿಪೊಗೆ ಬಂದಿದ್ದು, ತಂತ್ರಜ್ಞರು, ಎಂಜಿನಿಯರ್‌ಗಳು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಹೆಬ್ಬಗೋಡಿಯಿಂದ ಬೊಮ್ಮಸಂದ್ರವರೆಗೆ 25 ಕಿ.ಮೀ. ಕಾರ್ಯಾಚರಣೆ ನಡೆಸಿ ತಾಂತ್ರಿಕ ದೋಷಗಳೇನಿವೆ ಎಂದು ಪರಿಶೀಲಿಸಲಾಗುತ್ತಿದೆ.

‘ಆರು ಕೋಚ್‌ಗಳನ್ನು ಜೋಡಿಸಿ ಸ್ಟ್ಯಾಟಿಕ್‌ ಮತ್ತು ಎಲೆಕ್ಟ್ರಿಕಲ್‌ ಸರ್ಕಿಟ್‌ ಪರೀಕ್ಷೆ ನಡೆಸಲಾಗಿದೆ. ಈಗ ಹಳಿಗೆ ಇಳಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಚಾಲಕ ರಹಿತ ತಂತ್ರಜ್ಞಾನದ ರೈಲು ಇದಾದರೂ, ಪರೀಕ್ಷಾ ಅವಧಿಯಲ್ಲಿ ಚಾಲನಾ ಪರಿಣತರು ಜತೆಗಿರುತ್ತಾರೆ’ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. 

ಸದ್ಯಕ್ಕೆ ಒಂದೇ ರೈಲು ಬಂದಿರುವುದರಿಂದ ಪ್ರಾಥಮಿಕ ಹಂತದ ಕೆಲವು ಪರೀಕ್ಷೆಗಳನ್ನಷ್ಟೇ ಆರಂಭಿಸಲಾಗಿದೆ. ಏಪ್ರಿಲ್‌ನಲ್ಲಿ ಚೀನಾದಿಂದ ಇನ್ನೊಂದು ಸೆಟ್‌ (6 ಬೋಗಿ) ಬರಲಿದೆ. ಮೂರನೇ ಸೆಟ್‌ ಪಶ್ಚಿಮ ಬಂಗಾಳದ ಟಿಟಾಗಢ್‌ನಿಂದ ಬರಲಿದೆ. ಮೂರು ಸೆಟ್‌ಗಳಾದ ಮೇಲೆ ಮುಖ್ಯಪರೀಕ್ಷೆಗಳು ಆರಂಭವಾಗುತ್ತವೆ. ನಾಲ್ಕು ತಿಂಗಳು 37 ವಿವಿಧ ರೀತಿಯ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಏಕೀಕರಣಕ್ಕೆ ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ರೋಲಿಂಗ್‌ ಸ್ಟಾಕ್‌ ಮ್ಯಾನೇಜರ್‌ ವಿವರ ನೀಡಿದ್ದಾರೆ.

ಈ ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ಈ ವರದಿ ಸಕಾರಾತ್ಮಕವಾಗಿದ್ದರೆ ರೈಲ್ವೆ ಮಂಡಳಿಯು ಮೆಟ್ರೊ ರೈಲು ಆರಂಭಿಸಲು ಅನುಮತಿ ನೀಡುತ್ತದೆ. ಎಲ್ಲ ಪ್ರಕ್ರಿಯೆ ಮುಗಿದು ವರ್ಷಾಂತ್ಯಕ್ಕೆ ರೈಲು ಸಂಚಾರ ಆರಂಭಗೊಳ್ಳಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಬಲ್‌ ಡೆಕ್ಕರ್‌ ಬಹುತೇಕ ಪೂರ್ಣ: ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ಹಳದಿ ಮಾರ್ಗ) ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಮೆಟ್ರೊ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳೊಂದಿಗೆ ಸಂಪರ್ಕಿಸುವ ವಿಶೇಷ ಮಾರ್ಗವಾದ ಇದರಲ್ಲಿ ಡಬಲ್‌ ಡೆಕ್ಕರ್‌ ಕೂಡ ಇರುವುದು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. 

ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ 3.3 ಕಿ.ಮೀ. ಉದ್ದ ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌ (ಡಬಲ್ ಡೆಕ್ಕರ್) ಸೇತುವೆ ನಿರ್ಮಿಸಲಾಗಿದೆ. ಅದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೆಟ್ರೊ ರೈಲು ಆರಂಭಗೊಳ್ಳುವ ಹೊತ್ತಿಗೆ ಸೇತುವೆ ವಾಹನಗಳ ಸಂಚಾರಕ್ಕೂ ಮುಕ್ತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಡಬಲ್‌ ಡೆಕ್ಕರ್‌ ಕಾಮಗಾರಿ

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಡಬಲ್‌ ಡೆಕ್ಕರ್‌ ಕಾಮಗಾರಿ

ನಾಗಸಂದ್ರ–ಮಾದಾವರ ನಿಧಾನ?

ಬೆಂಗಳೂರು–ತುಮಕೂರು ರಸ್ತೆಯ ವಾಹನ ದಟ್ಟಣೆ ಕಡಿಮೆ ಮಾಡಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುವ ನಾಗಸಂದ್ರ–ಮಾದಾವರ ವಿಸ್ತರಿತ ಮಾರ್ಗದಲ್ಲಿ (ಹಸಿರು ಮಾರ್ಗ) ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದರೂ ತಾಂತ್ರಿಕ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. 

ಜುಲೈಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿತ್ತು. ಆದರೆ ಜುಲೈಯಲ್ಲಿ ಆರಂಭಗೊಳ್ಳುವುದು ಅನುಮಾನ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ‘ಹಸಿರು ಮಾರ್ಗದ ರೀಚ್‌–3 ಕಾಮಗಾರಿ ಇದಾಗಿದ್ದು ಮಂಜುನಾಥನಗರ ಚಿಕ್ಕಬಿದರಕಲ್ಲು (ಜಿಂದಾಲ್‌) ಮಾದವಾರ ಮೆಟ್ರೊ ನಿಲ್ದಾಣವರೆಗೆ 3.7 ಕಿ.ಮೀ. ದೂರ ಹೊಂದಿದೆ. ಸಿವಿಲ್‌ ಕಾಮಗಾರಿ ಮುಗಿದಿದೆ. ಹಳಿ ಅಳವಡಿಕೆ ಕಾಮಗಾರಿ ಶೇ 77 ಆಗಿದೆ. ನಿಗದಿತ ವೇಗದಲ್ಲಿಯೇ ಕಾಮಗಾರಿಗಳು ಸಾಗುತ್ತಿವೆ. ಆದರೆ ಈ ಮಾರ್ಗದ ಪರೀಕ್ಷೆಗಳು ಆರ್‌ವಿ ರಸ್ತೆ–ಬೊಮ್ಮಸಂದ್ರ ಮಾರ್ಗದ (ಹಳದಿ ಮಾರ್ಗ) ಪರೀಕ್ಷೆಯ ಸಂದರ್ಭದಲ್ಲಿಯೇ ನಡೆಯುವ ಸಾಧ್ಯತೆ ಇದೆ.

ಹಳದಿ ಮಾರ್ಗ ಸಂಚಾರಕ್ಕೆ ಮುಕ್ತಗೊಳ್ಳುವ ಸಮಯದಲ್ಲಿಯೇ ಹಸಿರು ಮಾರ್ಗದ ಈ ವಿಸ್ತರಿತ ಪ್ರದೇಶದಲ್ಲಿಯೂ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT