ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಿನಾಪುರ ನಿವಾಸಿಗಳದ್ದು ಒಂದೇ ಪ್ರಶ್ನೆ: ಬೆಂಗಳೂರು ಒನ್‌; ಯಾವಾಗ ಓಪನ್‌?

ಖಾಲಿ ಬಿದ್ದ ಕಟ್ಟಡ: ಓಡಾಡುವ ಇಲಿ, ಜೇಡ!
Last Updated 10 ಆಗಸ್ಟ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ವಿಜಿನಾಪುರ ವಾರ್ಡ್‌ನಲ್ಲಿನ ಬೆಂಗಳೂರು ಒನ್‌ ಸೇವಾ ಕೇಂದ್ರಕ್ಕೆ ಕಳೆದೊಂದು ವರ್ಷದಿಂದ ಬೀಗ ಜಡಿಯಲಾಗಿದೆ. ಹಾಗಾಗಿ ಈ ಪ್ರದೇಶದ ಜನ ಸರ್ಕಾರಿ ಸೇವೆಗಳಿಗಾಗಿ ಪಕ್ಕದ ವಾರ್ಡ್‌ಗಳಿಗೆ ಅಲೆಯಬೇಕಾಗಿದೆ.

ಜನರಿಗೆ ಅನುಕೂಲ ಆಗಲೆಂದು₹ 3 ಲಕ್ಷ ಖರ್ಚು ಮಾಡಿ ಬಿಬಿಎಂಪಿಯ ಸಹಾಯಕ ಕೇಂದ್ರವನ್ನು ವಾರ್ಡ್‌ನಲ್ಲಿ 2009ರಲ್ಲಿ ಆರಂಭಿಸಲಾಯಿತು. ಇಲ್ಲಿ ಜನರು 2013ರವರೆಗೆ ಪಾಲಿಕೆಯ ಸೇವೆಗಳನ್ನು ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಆ ಕೇಂದ್ರವನ್ನು ಮುಚ್ಚಿ, ವಾರ್ಡ್‌ನ ಕಸ ವಿಂಗಡಿಸುವ ಘಟಕವನ್ನು ಇಲ್ಲಿ ತೆರೆಯಲಾಯಿತು.

ಅದು ಒಂದಷ್ಟು ತಿಂಗಳು ಕಾರ್ಯನಿರ್ವಹಿಸಿದ ಬಳಿಕ ಅದೇ ಕಟ್ಟಡವನ್ನು ಬೆಂಗಳೂರು ಒನ್‌(ಬಿ–ಒನ್‌) ಕೇಂದ್ರವಾಗಿಸಲು ಸ್ಥಳೀಯ ಜನಪ್ರತಿನಿಧಿಗಳು ನಿರ್ಧರಿಸಿದರು. ಸಹಾಯಕ ಕೇಂದ್ರದಿಂದ ಬಾಕಿ ಉಳಿದಿದ್ದ ₹ 53 ಸಾವಿರ ವಿದ್ಯುತ್‌ ಬಿಲ್‌ ಸಹ ಬೆಸ್ಕಾಂಗೆ ಕಟ್ಟಿದರು. ಆದರೆ ಈ ಕೇಂದ್ರದಲ್ಲಿ ಬಿ–ಒನ್‌ ಆರಂಭ ಆಗಲೇ ಇಲ್ಲ.

ಇದರಿಂದಾಗಿ ಬಿ–ಒನ್‌ ಕೇಂದ್ರದ ಸೇವೆಗಳನ್ನು ಪಡೆಯಲು ವಿಜಿನಾಪುರ ವಾರ್ಡ್‌ನ ನಿವಾಸಿಗಳು, ಪಕ್ಕದ ಕಸ್ತೂರಿನಗರ, ಕಾಚರಕನಹಳ್ಳಿ, ಹೊರಮಾವು, ಪೈಲೇಔಟ್‌ನಲ್ಲಿನ ಕೇಂದ್ರಗಳಿಗೆ ಅಲೆಯಬೇಕಿದೆ.

‘ಕರೆಂಟ್‌ ಬಿಲ್‌, ವಾಟರ್‌ ಬಿಲ್‌ ಕಟ್ಟೋಕೆ ಬೇರೆ ಏರಿಯಾಕ್ಕೆ ಹೋಗಬೇಕು. ಅಲ್ಲಿ ಯಾವಾಗಲೂ ಸರ್ವರ್‌ ಡೌನ್‌ ಆಗಿರುತ್ತೆ. ಬಿಲ್‌ ಕಟ್ಟೊದರಲ್ಲಿ ಒಂದು ದಿನವೇ ಕಳೆದುಹೋಗುತ್ತೆ. ನಮ್ಮ ಏರಿಯಾದಲ್ಲೇ ಕೇಂದ್ರ ಇದ್ದಿದ್ದರೆ, ಟೈಮ್‌ ಉಳಿಯುತ್ತಿತ್ತು’ ಎಂದು ಸ್ಥಳೀಯ ನಿವಾಸಿ ತೌಸೀಫ್‌ ತಿಳಿಸಿದರು.

ಇಲಿಗಳು ಆಡುತ್ತಿವೆ:ಬಿ–ಒನ್‌ ಕಟ್ಟಡವೀಗ ಜೇಡಗಳ ಆವಾಸ ಸ್ಥಾನ. ಕೇಂದ್ರದಲ್ಲಿ ಅಳವಡಿಸಿರುವ ಹೊಸ ಫ್ಯಾನ್‌ಗಳು, ಲೈಟ್‌ಗಳು, ಹಾಕಿರುವ ಕುರ್ಚಿ, ಟೇಬಲ್‌ಗಳಿಗೆ ದೂಳು ಮೆತ್ತಿಕೊಂಡಿದೆ. ಕಪಾಟುಗಳ ಸುತ್ತ ಇಲಿಗಳು ಆಡುತ್ತಿವೆ. ಈ ಪ್ರದೇಶದಲ್ಲಿ ನಡೆದ 2011ರ ಜನಗಣತಿಯ ವರದಿ, ಕಟ್ಟಡ ಶಂಕುಸ್ಥಾಪನಾ ಫಲಕ, ಕಡತವಿಡುವ ‌ರ‍್ಯಾಕ್‌ಗಳು ಕಟ್ಟಡದ ಹಿಂಬದಿಯಲ್ಲಿ ಬಿದ್ದಿವೆ.

‘ಕಿಟಕಿ ಗಾಜನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಕಬ್ಬಿಣದ ಸರಳು ಹಾಕಿದ್ದರಿಂದ ಒಳಗಿರುವ ಕಂಪ್ಯೂಟರ್‌ ಉಪಕರಣಗಳು ಅವರ ಕೈಗೆ ಸಿಕ್ಕಿಲ್ಲ. ಮುಂದೊಂದು ದಿನ ಉಪಕರಣಗಳನ್ನು ಕದ್ದು ಒಯ್ಯಲೂಬಹುದು’ ಎಂದು ಮತ್ತೊಬ್ಬ ಸ್ಥಳೀಯ ಅಶೋಕ್‌ ಆತಂಕ ವ್ಯಕ್ತಪಡಿಸಿದರು.

‘ಕೇಂದ್ರವನ್ನು ಆರಂಭಿಸಲು ಹೊರಟರೆ ಜನಪ್ರತಿನಿಧಿಗಳು ಚುನಾವಣೆಯ ಕಾರಣ ಹೇಳಿದರು. ನಂತರ ಆಷಾಢ ಮಾಸದ ನೆಪ ಮುಂದೆ ಮಾಡಲಾಯಿತು. ಕೇಂದ್ರದ ಆರಂಭಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆನ್‌ಲೈನ್‌ ನಾಗರಿಕಾ ಸೇವಾ ನಿರ್ದೇಶನಾಲಯದ (ಇಡಿಸಿಎಸ್‌) ಅಧಿಕಾರಿಯೊಬ್ಬರು ತಿಳಿಸಿದರು.

ಬಿ–ಒನ್‌ ಕೇಂದ್ರ ತೆರೆಯಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸೇವೆಗಳಿಗಾಗಿ ಜನರು ಬೇರೆ ವಾರ್ಡ್‌ಗಳಿಗೆ ಅಲೆಯುವುದು ಇನ್ನೂ ತಪ್ಪಿಲ್ಲ.

ವಾರ್ಡ್‌ ಉದ್ಯಾನ, ಅಧ್ವಾನ:ವಾರ್ಡ್‌ನಲ್ಲಿನ ಕಸ್ತೂರಿನಗರ ಬಡಾವಣೆಯ ಉದ್ಯಾನದ ಸ್ಥಿತಿ ಅಧ್ವಾನಗೊಂಡಿದೆ. ಪ್ರವೇಶದ್ವಾರ ಮುರಿದಿದೆ. ಅದಕ್ಕೆ ತಂತಿ ಸುತ್ತಿದ್ದಾರೆ. ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಕಲ್ಲು ಬೆಂಚುಗಳು ಮುರಿದಿವೆ. ವಿದ್ಯುತ್‌ ಕಂಬಗಳಿವೆ. ಅದರಲ್ಲಿನ ಬಲ್ಬ್‌ಗಳು ಕಾಣೆಯಾಗಿವೆ. ವೈರ್‌ಗಳು ಹೊರಬಿದ್ದಿವೆ. ಕಸದ ಬುಟ್ಟಿಗಳು ತಲೆಕೆಳಗಾಗಿ ಬಿದ್ದಿವೆ.

‘ಮೂರು ವರ್ಷದ ಹಿಂದೆಯೇ ಉದ್ಯಾನ ನಿರ್ಮಿಸಿದ್ದಾರೆ. ಆದರೆ, ತಿರುಗಿ ನೋಡಿಲ್ಲ. ಮಕ್ಕಳಿಗೆ ಆಡಲು ಹತ್ತಿರದಲ್ಲಿ ಬೇರೆ ಜಾಗನೇ ಇಲ್ಲ’ ಎಂದು ಮಾತಿಗೆ ಸಿಕ್ಕ ಮಹಿಳೆಯರು ಸಮಸ್ಯೆ ಹೇಳಿಕೊಂಡರು.

ವಿಜಿನಾಪುರ ವಾರ್ಡ್‌ ಕಚೇರಿ ತೀರಾ ಚಿಕ್ಕದು. ಅಂದಾಜು 10X6 ಅಡಿ ಅಳತೆಯ ಕಚೇರಿಯ ಸ್ಥಳ ಸಾಲದೆ, ಕಡತಗಳನ್ನು ಶೌಚಾಲಯದಲ್ಲಿ ಇಡಲಾಗಿದೆ. ಜಲಮಂಡಳಿ ಕಾವೇರಿ ನೀರು ಸರಬರಾಜಿಗಾಗಿ ಕೊಳವೆ ಜೋಡಿಸಲು ರಸ್ತೆ ಅಗೆದು ಬೇಕಾಬಿಟ್ಟಿಯಾಗಿ ಮುಚ್ಚಿದೆ. ಮಳೆಬಂದಾಗ ವಾರ್ಡ್‌ ಕಚೇರಿಯ ರಸ್ತೆ ಕೆಸರಿನ ಗದ್ದೆಯಾಗುತ್ತಿದೆ.

ಈ ಕುರಿತು ವಾರ್ಡ್‌ನ ಪಾಲಿಕೆ ಸದಸ್ಯ ಬಂಡೆ ಎಸ್‌. ರಾಜ ಅವರನ್ನು ಕೇಳಿದರೆ, ‘ವಾರ್ಡ್‌ ಅಭಿವೃದ್ಧಿಗೆಂದು ವರ್ಷಕ್ಕೆ ಕೇವಲ ₹ 3 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಎಷ್ಟು ಅಭಿವೃದ್ಧಿ ಮಾಡುವುದಕ್ಕಾಗುತ್ತೆ, ನೀವೇ ಹೇಳಿ’ ಎಂದು ಮರುಪ್ರಶ್ನೆ ಹಾಕಿದರು.
**
ನಮ್ಮ ವಾರ್ಡ್‌ನಲ್ಲಿ ಬೆಂಗಳೂರು ಒನ್‌ ಸೇವಾ ಕೇಂದ್ರ ತೆರೆಯಲು ಇಡಿಸಿಎಸ್‌ ಅಧಿಕಾರಿಗಳನ್ನು ಕಳೆದೊಂದು ವರ್ಷದಿಂದ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಫೋನಿಗೂ ಸಿಗುತ್ತಿಲ್ಲ.
– ಬಂಡೆ ಎಸ್‌. ರಾಜ, ಪಾಲಿಕೆ ಸದಸ್ಯ, ವಿಜಿನಾಪುರ ವಾರ್ಡ್‌
**

ಬೆಂಗಳೂರು ಒನ್‌ ಕೇಂದ್ರದಲ್ಲಿನ ಪ್ರಮುಖ ಸೇವೆಗಳು
* ಬೆಸ್ಕಾಂ, ಜಲಮಂಡಳಿ, ಟೆಲಿಫೋನ್‌ ಬಿಲ್‌ಗಳ ಪಾವತಿ
* ಆಸ್ತಿ ತೆರಿಗೆ ಪಾವತಿ
* ಜಾತಿ, ಆದಾಯ, ಜನನ, ಮರಣ ಪ್ರಮಾಣ ಪತ್ರ ವಿತರಣೆ
* ಸಾರಿಗೆ ನಿಯಮ ಉಲ್ಲಂಘನೆ ದಂಡ ಪಾವತಿ
* ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ

ಬೆಂಗಳೂರು ಒನ್‌ ಕೇಂದ್ರದ ಒಳಾಂಗಣ
ಬೆಂಗಳೂರು ಒನ್‌ ಕೇಂದ್ರದ ಒಳಾಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT