ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಈಸ್ಟ್ ಇಂಡಿಯಾ ಕಂಪನಿಯಲ್ಲ: ಹೈಕೋರ್ಟ್‌

Published 14 ಮಾರ್ಚ್ 2024, 14:35 IST
Last Updated 14 ಮಾರ್ಚ್ 2024, 14:35 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರ್ವಜನಿಕರು ತಮ್ಮ ಕುಂದು ಕೊರತೆ ಬಗೆಹರಿಸುವಂತೆ ಕೋರಿ ಮನವಿ ಸಲ್ಲಿಸಿದರೆ ಸಕ್ಷಮ ಪ್ರಾಧಿಕಾರಗಳು ಅವುಗಳನ್ನು ಕಡ್ಡಾಯವಾಗಿ ಪರಿಗಣಿಸಿ ತಮ್ಮ ನಿರ್ಧಾರಗಳನ್ನು ತಡಮಾಡದೆ ಅರ್ಜಿದಾರರಿಗೆ ತಿಳಿಸಬೇಕು. ಅದು ಬಿಟ್ಟು ಸರ್ಕಾರ ನಮ್ಮ ಮನವಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಸಾರ್ವಜನಿಕರು ಎಲ್ಲದಕ್ಕೂ ಕೋರ್ಟ್‌ ಮೆಟ್ಟಿಲೇರುವಂತಾದರೆ ಗತಿಯೇನು’ ಎಂದು ಹೈಕೋರ್ಟ್‌ ಖಾರವಾಗಿ ಪ್ರಶ್ನಿಸಿದೆ.

‘ಬಳ್ಳಾರಿ ನಗರಸಭೆ ವಾರ್ಡ್‌ ನಂಬರ್ 34ರ ವ್ಯಾಪ್ತಿಯಲ್ಲಿ ಉದ್ದೇಶಿತ ರೈಲ್ವೆ ಮೇಲ್ಸೇತುವೆ ಯೋಜನೆಯ ಬದಲಿಗೆ ಪರ್ಯಾಯ ಯೋಜನೆಯನ್ನು ಅನುಸರಿಸಲು ನಿರ್ದೇಶಿಸಬೇಕು’ ಎಂದು ಕೋರಿ ಬಳ್ಳಾರಿಯ ಕಂಟೊನ್ಮೆಂಟ್‌ ಪ್ರದೇಶದ ಹಳೆ ಮಸೀದಿ ಹಿಂಭಾಗದ ತಿಲಕ್‌ ನಗರ ರಸ್ತೆಯ ‘ರಹೀಮ್‌ಬಾದ್‌ ಕಾಲೊನಿ ನಿವಾಸಿಗಳ ಸಂಘ‘ದ ಕಾರ್ಯದರ್ಶಿ ಸಿ.ಕೆ.ಮೊಯಿನುದ್ದೀನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ ವಕೀಲ ಎಸ್.ಸುನಿಲ್ ಕುಮಾರ್, ‘ಉದ್ದೇಶಿತ ರೈಲ್ವೆ ಮೇಲ್ಸೆತುವೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಲಿದ್ದಾರೆ. ಆದ್ದರಿಂದ, ಈಗಾಗಲೇ ರೂಪಿಸಲಾಗಿರುವ ಪರ್ಯಾಯ ಮಾರ್ಗಗಳಲ್ಲಿ ಯಾವುದಾದರೂ ಒಂದನ್ನು ಅಳವಡಿಸಿಕೊಳ್ಳುವಂತೆ ಕೋರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋರಲಾಗಿತ್ತು. ಆದರೆ, ನಮ್ಮ ಮನವಿಯನ್ನು ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿವಾದಿಗಳನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಾವು ಈಸ್ಟ್ ಇಂಡಿಯಾ ಕಂಪನಿಯಡಿ ಜೀವನ ಮಾಡುತ್ತಿಲ್ಲ. ನಮ್ಮದು ಕಲ್ಯಾಣ ರಾಜ್ಯ. ಸಾರ್ವಜನಿಕರ ಅರ್ಜಿಗಳನ್ನು ಸಕ್ಷಮ ಪ್ರಾಧಿಕಾರಿಗಳು ಅಲ್ಲಲ್ಲೇ ಬಗೆಹರಿಸಬೇಕು. ಅವರೆಲ್ಲಾ ಕೋರ್ಟ್‌ ಮೆಟ್ಟಿಲು ತುಳಿಯುವಂತೆ ಅಸಹಾಯಕರನ್ನಾಗಿ ಮಾಡಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಪ್ರತಿಯೊಬ್ಬ ವ್ಯಕ್ತಿ ತನ್ನ ಯಾವುದಾದರೂ ಕುಂದುಕೊರತೆಯ ಪರಿಹಾರಕ್ಕಾಗಿ ಕೇಂದ್ರ ಅಥವಾ ರಾಜ್ಯದ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ಕೋರಿದರೆ ಅದನ್ನು ಪರಿಗಣಿಸಬೇಕು’ ಎಂದು ಉಲ್ಲೇಖಿಸಿದ ನ್ಯಾಯಪೀಠ, ‘ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಿಸಿದ ಪ್ರಾಧಿಕಾರಗಳು ಆರು ವಾರಗಳಲ್ಲಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ಅರ್ಜಿದಾರರಿಗೆ ನೋಂದಾಯಿತ ಅಂಚೆ ಮೂಲಕ ತಿಳಿಸಬೇಕು’ ಎಂದು‌ ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT