ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಜಮೀನಿನಿಂದ ಲಕ್ಷ ಲಕ್ಷ ಸಂಪಾದಿಸಿದ ಪೇಶ್ವೆ!

Last Updated 14 ಜುಲೈ 2015, 20:28 IST
ಅಕ್ಷರ ಗಾತ್ರ

ಬೆಂಗಳೂರು: ನೀರಾವರಿ ಸೌಲಭ್ಯ ಇರುವ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ತಮ್ಮ ಬರಡು ಜಮೀನಿನಿಂದ ₹ 47 ಲಕ್ಷ ಲಾಭ ಬಂದಿದೆ ಎಂದು ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಆಗಿದ್ದ ಎನ್‌. ಲಕ್ಷ್ಮಣರಾವ್ ಪೇಶ್ವೆ ಹೇಳಿಕೊಂಡಿದ್ದಾರೆ!

ಘೋಷಿತ ಆದಾಯಕ್ಕಿಂತ ₹ 9.34 ಕೋಟಿ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಅಡಿ ಪೇಶ್ವೆ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು 2012ರಲ್ಲಿ ದಾಳಿ ನಡೆಸಿದ್ದರು.

ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸಕ್ರಮ ಮಾಡಲು ಸಹಕರಿಸಿದ ಆರೋಪದ ಅಡಿ ಪೇಶ್ವೆ ಪತ್ನಿ ಕಾಂಚನಾ ಎಲ್.ರಾವ್ ಅವರ ವಿರುದ್ಧವೂ ಲೋಕಾಯುಕ್ತ ಪೊಲೀಸರು ದೋಷಾ ರೋಪ ಪಟ್ಟಿ ಸಲ್ಲಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸರ್ಕಾರಿ ನೌಕರರ ಪತ್ನಿಯ ವಿರುದ್ಧ ದೋಷಾ ರೋಪ ಪಟ್ಟಿ ದಾಖಲಾಗಿರುವುದು ಇದೇ ಮೊದಲು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಆಗಿ ಪೇಶ್ವೆ ಈಗ ಕೆಲಸ ಮಾಡುತ್ತಿದ್ದಾರೆ. ಆದಾಯ ಮೂಲಕ್ಕೆ ಸಂಬಂಧಿಸಿದಂತೆ ಪೇಶ್ವೆ ಅವರು ಲೋಕಾಯುಕ್ತ ಪೊಲೀಸರಿಗೆ ಕೆಲವು ದಾಖಲೆಗಳನ್ನು ತನಿಖೆಯ ವೇಳೆ ಸಲ್ಲಿಸಿದ್ದರು. ಬಹುಪಾಲು ದಾಖಲೆಗಳು ತಿರುಚಿದ್ದು ಅಥವಾ ನಕಲಿ ಎಂಬುದು ಡಿವೈಎಸ್‌ಪಿ ಫಾಲಾಕ್ಷಯ್ಯ ನೇತೃತ್ವದ ತನಿಖಾ ತಂಡಕ್ಕೆ ಗೊತ್ತಾಯಿತು.

ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದ ವಿವರಗಳಲ್ಲಿ ಪೇಶ್ವೆ ಅವರು ಕೃಷಿ ಆದಾಯವನ್ನೂ ಉಲ್ಲೇಖಿಸಿದ್ದರು. ಪೇಶ್ವೆ ನೀಡಿದ ಕೆಲವು ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅವು ನಕಲಿ ಎಂಬುದು ಅಲ್ಲಿ ಖಚಿತವಾಯಿತು.

‘ತುಮಕೂರು ಜಿಲ್ಲೆಯ ಮೂತಿಗುಂಡಿ ಮತ್ತು ಗೂಳೂರು ಹಳ್ಳಿಗಳಲ್ಲಿ ಇರುವ ಒಟ್ಟು 5 ಎಕರೆ ಜಮೀನಿನಿಂದ ಒಟ್ಟು ₹ 47.34 ಲಕ್ಷ ಆದಾಯ ಬಂದಿರುವುದಾಗಿ ಪೇಶ್ವೆ ಹೇಳಿದ್ದರು. ಇದಕ್ಕೆ ಪೂರಕವಾಗಿ 210 ಬಿಲ್‌ಗಳನ್ನು ಸಲ್ಲಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು ಆ ಜಮೀನಿಗೆ ಭೇಟಿ ನೀಡಿದರು. ಅವು ಕನಿಷ್ಠ 10–15 ವರ್ಷಗಳಿಂದ ಬರಡು ಬಿದ್ದಿವೆ ಎಂಬುದು ಗೊತ್ತಾಯಿತು. ಮಧುಗಿರಿಯ ಚಿಲ್ಲರೆ ವ್ಯಾಪಾರಿಗಳಿಂದ ಪೇಶ್ವೆ ಅವರು ಬಿಲ್‌ ಪಡೆದಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಲವು ವರ್ಷ ವಾಸ
ಬಾಡಿಗೆಗೆ ನೀಡಿರುವ ಮನೆಯೊಂದರಿಂದ ವಾರ್ಷಿಕ ₹ 1.80 ಲಕ್ಷ ಆದಾಯ ಇದೆ ಎಂದು ಪೇಶ್ವೆ ದಂಪತಿ ಹೇಳಿಕೊಂಡಿದ್ದರು. ಆದರೆ ಆ ಮನೆಯಲ್ಲಿ ಹಲವು ವರ್ಷಗಳಿಂದ ಪೇಶ್ವೆ ಕುಟುಂಬವೇ ವಾಸ ಮಾಡುತ್ತಿದೆ ಎಂಬುದು ತನಿಖೆಯ ವೇಳೆ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT