ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣಗಳ ಮುಕ್ತಾಯ: ಸಿಬಿಐ

Last Updated 24 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಮೌಲ್ಯದ ಕಬ್ಬಿಣ ಅದಿರು ಅಕ್ರಮ ಗಣಿಗಾರಿಕೆ ಮತ್ತು ರಫ್ತು ಪ್ರಕರಣಗಳನ್ನು ಸಿಬಿಐ, ತನಿಖಾ ಹಂತದಲ್ಲೇ ಮುಕ್ತಾಯಗೊಳಿಸಿದೆ.

ಗೋವಾ, ನವ ಮಂಗಳೂರು ಮತ್ತು ಆಂಧ್ರ ಪ್ರದೇಶದ ಕೃಷ್ಣಪಟ್ನಂ ಬಂದರುಗಳ ಮೂಲಕ ಕಬ್ಬಿಣದ ಅದಿರು ಅಕ್ರಮ ಸಾಗಣೆ ಮಾಡಲಾಗಿದೆ ಎನ್ನಲಾದ ಬಹುತೇಕ ಪ್ರಕರಣಗಳನ್ನು ಸಾಕ್ಷ್ಯ ಇಲ್ಲದ ಕಾರಣಕ್ಕೆ ಮುಕ್ತಾಯಗೊಳಿಸಿರುವುದಾಗಿ ಸಿಬಿಐ ಹೇಳಿದೆ.

ರಾಜ್ಯದ ಕಾರವಾರ, ಬೇಲೆಕೇರಿ, ನವ ಮಂಗಳೂರು ಬಂದರು, ಆಂಧ್ರ ಪ್ರದೇಶದ ಕೃಷ್ಣ ಪಟ್ನಂ, ವಿಶಾಖ ಪಟ್ಟಣಂ, ಕಾಕಿನಾಡ, ತಮಿಳುನಾಡಿನ ಚೆನ್ನೈ ಮತ್ತು ಇನ್ನೋರ್ ಬಂದರುಗಳ ಮೂಲಕ 2006 ರಿಂದ 2010ರವರೆಗೆ (ಏಪ್ರಿಲ್) ರಾಜ್ಯದ ಗಣಿಗಳಿಂದ ಸುಮಾರು 12.57 ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ಸಾಗಿಸಿದ್ದನ್ನು ಕರ್ನಾಟಕ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆ ಸಲ್ಲಿಸಿದ್ದ ವರದಿ ಉಲ್ಲೇಖಿಸಿತ್ತು.

ಜನಾರ್ದನ ರೆಡ್ಡಿ ಮತ್ತು ಇತರ ಕೆಲವು ಗಣಿ ಉದ್ಯಮಿಗಳಿಗೆ ಸಂಬಂಧಿಸಿದ ಕಂಪೆನಿಗಳು ಅಕ್ರಮವಾಗಿ ಸಾಗಿಸಿದ್ದವು ಎನ್ನಲಾದ ಅದಿರಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣಗಳಲ್ಲದೇ ಗೋವಾದ ಮರ್ಮಗೋವಾ ಬಂದರಿನಿಂದ ಸಾಗಣೆಯಾದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಅದನ್ನು ಆಂಧ್ರ ಪ್ರದೇಶ, ಗೋವಾ ಮತ್ತು ಕರ್ನಾಟಕದ ಸಿಬಿಐ ಕಚೇರಿಗಳು ಮುಕ್ತಾಯಗೊಳಿಸಿವೆ ಎಂದು ಸಿಬಿಐ ಮೂಲಗಳು ಹೇಳಿವೆ.

ರಾಜ್ಯದಲ್ಲಿ 50 ಸಾವಿರ ಮೆಟ್ರಿಕ್‌ ಟನ್‌ಗಳಿಂತ ಕಡಿಮೆ ಪ್ರಮಾಣದ ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ನವ ಮಂಗಳೂರು ಮತ್ತು ಬೇಲೆಕೇರಿ ಬಂದರು ಮೂಲಕ  ಅಕ್ರಮವಾಗಿ ಸಾಗಿಸಿದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. 50 ಸಾವಿರ ಮೆಟ್ರಿಕ್‌ ಟನ್‌ಗಿಂತ ಹೆಚ್ಚಿನ ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ರಫ್ತು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ.

ಆಶ್ಚರ್ಯದ ವಿಷಯ: ಸಂತೋಷ ಹೆಗ್ಡೆ

‘ಬಂದರುಗಳಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ಡಾ. ಯು.ವಿ ಸಿಂಗ್‌ ಅವರ ವರದಿಯನ್ನು ಆಧರಿಸಿ ಅಕ್ರಮ ಗಣಿಗಾರಿಕೆ ಕುರಿತು ವರದಿ ಸಿದ್ಧಪಡಿಸಿದ್ದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಪ್ರತಿಕ್ರಿಯಿಸಿದರು.

‘ಬಂದರುಗಳಿಂದ ಲಭ್ಯವಾದ ಅಧಿಕೃತ ಮಾಹಿತಿಗಳು ಮತ್ತು ದಾಖಲೆಗಳನ್ನು ಆಧರಿಸಿ ಲೋಕಾಯುಕ್ತ ತನಿಖೆ ನಡೆಸಿತ್ತು. ಅದಿರು ಸಾಗಣೆಗೆ ಸಂಬಂಧಿಸಿದ ಬಿಲ್ ಮತ್ತು ಬಂದರು ಅಧಿಕಾರಿಗಳ ನೀಡಿದ ದಾಖಲೆಗಳನ್ನು ವರದಿ ಜೊತೆ ನೀಡಲಾಗಿತ್ತು. ಆದರೆ, ಈ ಪ್ರಕರಣಗಳನ್ನು ಸಿಬಿಐ ಪ್ರಾಥಮಿಕ ತನಿಖಾ ಹಂತದಲ್ಲೇ ಮುಕ್ತಾಯಗೊಳಿಸಿರುವುದು ಆಶ್ಚರ್ಯ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT