ಬೆಂಗಳೂರು: ‘ಹಡಗು (ಕ್ರೂಸ್) ಪ್ರಯಾಣದ ಮೂಲಕ ಬರುವ ಭಾರತೀಯ ಪ್ರವಾಸಿಗರಿಗಾಗಿ ದುಬೈ ಪ್ರವಾಸೋದ್ಯಮ ಇಲಾಖೆಯು ನೂತನ ಬಹು ಪ್ರವೇಶ (ಮಲ್ಟಿ ಎಂಟ್ರಿ) ವೀಸಾ ಪರಿಚಯಿಸಿದೆ’ ಎಂದು ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಹಮ್ಮದ್ ಬಿನ್ ಮೆಜ್ರಿನ್ ಹೇಳಿದರು.
ಇಲಾಖೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ದುಬೈ ಕ್ರೂಸ್ ಟೂರಿಸಂ ರೋಡ್ ಶೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದುಬೈಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತೀಯರು ಕೂಡ ಪ್ರಮುಖರಾಗಿದ್ದಾರೆ. 2013ರಲ್ಲಿ ಭಾರತದ 8.88 ಲಕ್ಷಕ್ಕೂ ಅಧಿಕ ಪ್ರವಾಸಿಗರು ದುಬೈಗೆ ಭೇಟಿ ನೀಡಿದ್ದಾರೆ. ಇದು 2012ನೇ ಸಾಲಿಗೆ ಹೋಲಿಸಿದರೆ ಶೇ 16 ರಷ್ಟು ಏರಿಕೆಯಾಗಿದೆ. ಇದೀಗ ಕ್ರೂಸ್ ಪ್ರವಾಸವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ. ಈ ನೂತನ ವೀಸಾ ಅವಧಿ 30 ದಿನ ಇರುತ್ತದೆ’ ಎಂದರು.
‘ಪ್ರಪಂಚದಲ್ಲಿರುವ ಮೂರು ಅತ್ಯುತ್ತಮ ಕ್ರೂಸ್ ಪ್ರವಾಸಿ ತಾಣಗಳ ಪೈಕಿ ದುಬೈ ಕೂಡ ಒಂದಾಗಿದೆ. ಒಮಾನ್, ಅಬುಧಾಬಿ ಪ್ರವಾಸೋದ್ಯಮ ಸಚಿವಾಲಯಗಳ ಸಹಭಾಗಿತ್ವದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇಲಾಖೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಜತೆಗೆ, ಐದು ಕ್ರೂಸ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿ ಮಿನಾ ರಷೀದ್ನಲ್ಲಿ ನೂತನವಾಗಿ ನಿರ್ಮಿಸಿದ ಪ್ರಮುಖ ಕ್ರೂಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು’ ಎಂದು ಹೇಳಿದರು.
‘ದುಬೈ ಕ್ರೂಸ್ ಪ್ರವಾಸದ ಋತು ಅಕ್ಟೋಬರ್ನಿಂದ ಆರಂಭಗೊಂಡು ಜೂನ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ 110 ಕ್ರೂಸ್ಗಳ ಮೂಲಕ 3.80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬರುತ್ತಾರೆ. 2013–14ನೇ ಸಾಲಿನಲ್ಲಿ ಈ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಈ ಸಂಖ್ಯೆ 2016ರ ಹೊತ್ತಿಗೆ 4.50 ಲಕ್ಷಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.