ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸರ್ಕಾರದಿಂದ ‘ಸಮಗ್ರ ಯೋಜನೆ’ ಕರಡು

Last Updated 7 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಂದಿ ಕೊಂಡಿರುವ ಆನೇಕಲ್‌, ಹೊಸಕೋಟೆ, ಕನಕಪುರ, ಮಾಗಡಿ ಮತ್ತು ನೆಲಮಂಗಲ ಪಟ್ಟಣಗಳಿಗೆ 2031 ರವರೆಗೆ ಅನ್ವಯವಾಗುವ ನೂತನ ‘ಸಮಗ್ರ ಯೋಜನೆ’ಗಳ (ಮಾಸ್ಟರ್‌ ಪ್ಲಾನ್‌) ಕರಡನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಪಾಲಿಕೆಯ ಸುತ್ತಲಿನ 2,600 ಚದರ ಕಿ.ಮೀ. ಪ್ರದೇಶದ ವಲಯ ನಿಯಂತ್ರಣ ನಿಯಮಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಸ್ಪಷ್ಟ ವಿವರವನ್ನು ಸರ್ಕಾರದ ಈ ಮಾಸ್ಟರ್‌ ಪ್ಲಾನ್‌ ಒಳಗೊಂಡಿದೆ.

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‌ ಡಿಎ) ಆನೇಕಲ್‌, ಹೊಸಕೋಟೆ, ಕನಕಪುರ, ಮಾಗಡಿ ಮತ್ತು ನೆಲ ಮಂಗಲ ಯೋಜನಾ ಪ್ರಾಧಿಕಾರಗಳ ಸಹಯೋಗದಲ್ಲಿ ಸಮಗ್ರ ಯೋಜನೆ ಯನ್ನು ಸಿದ್ಧಪಡಿಸಿದೆ.

2009ರ ಅವಧಿಯಲ್ಲಿ ಸೆರೆ ಹಿಡಿಯಲಾದ ಉಪಗ್ರಹ ಚಿತ್ರಗಳ ಆಧಾರದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.

‘ಸಮಗ್ರ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿ ಈ ವಾರಾಂತ್ಯದಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗು ವುದು. ಕರಡು ಅಧಿಸೂಚನೆಯ ಪ್ರತಿಗಳನ್ನು ಸ್ಥಳೀಯ ಯೋಜನಾ ಪ್ರಾಧಿಕಾರಗಳ ಕಚೇರಿಗಳು ಮತ್ತು ಬಿಎಂಆರ್‌ಡಿಎ ವೆಬ್‌ಸೈಟ್‌ www. bmrda.kar.nic.inನಲ್ಲಿ ನೋಡಬಹುದು’ ಎಂದು ಬಿಎಂಆರ್‌ ಡಿಎ ಅಧಿಕಾರಿಗಳು ತಿಳಿಸಿದ್ದಾರೆ.

2009ರಲ್ಲಿ ಜಾರಿಗೆ ತಂದಿರುವ ಮಧ್ಯಂತರ ಸಮಗ್ರ ಯೋಜನೆ ಈಗ ಚಾಲ್ತಿಯಲ್ಲಿದೆ.
ಹೊಸ ಸಮಗ್ರ ಯೋಜನೆಯನ್ನು ಸರ್ಕಾರ ಅನುಮೋ ದಿಸಿದ ಬಳಿಕ ಮಧ್ಯಂತರ ಸಮಗ್ರ ಯೋಜನೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಜಮೀನು ಬಳಕೆಗೆ ಸಂಬಂಧಿಸಿದಂತೆ ಮಧ್ಯಂತರ ಸಮಗ್ರ ಯೋಜನೆಯಲ್ಲಿ ಇದ್ದ ವಿಷಯಗಳ ಕುರಿತು ಹಲವು ವಲಯಗಳಿಂದ ನಿರಂತರವಾಗಿ ಟೀಕೆ ಕೇಳಿಬಂದಿತ್ತು.

ಈ ಬಾರಿ ನಗರ ಯೋಜನಾ ತಜ್ಞರ ನೆರವಿನೊಂದಿಗೆ ವೈಜ್ಞಾನಿಕವಾಗಿ ಸಮಗ್ರ ಯೋಜನೆಯನ್ನು ರೂಪಿಸಲಾ ಗಿದೆ. ಆಯಾ ಪ್ರದೇಶದಲ್ಲಿನ ಜಮೀನಿನ ಬಳಕೆ, ಬೀದಿಗಳ ವಿನ್ಯಾಸ, ಉದ್ಯಾನಗಳಿಗೆ ಜಮೀನು ಮೀಸಲು, ಆಟದ ಮೈದಾನಗಳು, ಸಾರ್ವಜನಿಕ ಬಳಕೆ ಉದ್ದೇಶಕ್ಕೆ ಜಮೀನು ಮೀಸಲು ಇಡುವ ಸಂಬಂಧ ಈ ಯೋಜನೆಯಲ್ಲಿ ಖಚಿತ ಅಭಿಪ್ರಾಯಗಳನ್ನು ನೀಡಲಾ ಗಿದೆ. ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಯಾವ ಜಮೀನನ್ನು ಬಳಸಬೇಕು ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

2031ರ ವೇಳೆಗೆ ಹೊಸಕೋಟೆಯ ಜನಸಂಖ್ಯೆ ಐದು ಲಕ್ಷ ತಲುಪಬಹುದು ಎಂಬ ಅಂದಾಜಿನ ಮೇಲೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ. ನಗರದ ವ್ಯಾಪ್ತಿಯನ್ನು 12,603 ಹೆಕ್ಟೇರ್‌ ವರೆಗೆ ವಿಸ್ತರಿಸಬಹುದು.

ಅದರಲ್ಲಿ 3,650 ಹೆಕ್ಟೇರ್‌ನಷ್ಟು (ಶೇಕಡ 34.47) ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಬೇಕು. 3,614 ಹೆಕ್ಟೇರ್‌ ಅಥವಾ ಶೇ 34.12ರಷ್ಟು ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ, ಶೇ 4.41ರಷ್ಟು ಜಮೀನನ್ನು ವಾಣಿಜ್ಯ ಚಟುವಟಿ ಕೆಗಳಿಗೆ, ಶೇ 1.34ರಷ್ಟು ಜಮೀನನ್ನು ಸಾರ್ವಜನಿಕ ಅಥವಾ ಅರೆ ಸಾರ್ವಜ ನಿಕ ಉದ್ದೇಶಗಳಿಗೆ ಬಳಸಬೇಕು ಎನ್ನುತ್ತದೆ ಮಾಸ್ಟರ್‌ ಪ್ಲಾನ್‌.

ಶೇ 10.26ರಷ್ಟು ಜಮೀನನ್ನು ಉದ್ಯಾನಗಳು ಮತ್ತು ತೆರೆದ ಸ್ಥಳಗಳಿಗೆ ಮೀಸಲಿಡುವುದು ಕಡ್ಡಾಯ. ಶೇ 1.64ರಷ್ಟು ಜಮೀನನ್ನು ಸರ್ಕಾರಿ ಶಾಲೆ, ಕಾಲೇಜು ಮತ್ತಿತರ ಸಾರ್ವಜ ನಿಕ ಬಳಕೆಗೆ ನೀಡಬೇಕು. ಶೇ 13.76 ರಷ್ಟು ಜಮೀನನ್ನು ಆಸ್ಪತ್ರೆಗಳ ನಿರ್ಮಾಣಕ್ಕೆ ಮೀಸಲಿಡಬೇಕು.

ಉಪನಗರ ವರ್ತುಲ ರಸ್ತೆ ಮತ್ತು ಬೆಂಗಳೂರು–ಚೆನ್ನೈ ತಡೆರಹಿತ ಹೆದ್ದಾರಿ ನಿರ್ಮಾಣದ ಬಳಿಕ ಹೊಸ ಕೋಟೆಯ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಆಗಲಿದೆ ಎಂಬ ಅಂದಾಜು ಸಮಗ್ರ ಯೋಜನೆಯಲ್ಲಿದೆ.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ 2007ರಲ್ಲಿ ಈ ಐದು ಪಟ್ಟಣಗಳಿಗೆ ಮಧ್ಯಂತರ ಸಮಗ್ರ ಯೋಜನೆಗಳನ್ನು ಸಿದ್ಧಪಡಿಸಿತ್ತು. 2009ರಲ್ಲಿ ಕೆಲ ಬದಲಾವಣೆ ಗಳೊಂದಿಗೆ ಬಿಜೆಪಿ ಸರ್ಕಾರ ಮಧ್ಯಂತರ ಸಮಗ್ರ ಯೋಜನೆಗೆ ಒಪ್ಪಿಗೆ ನೀಡಿತ್ತು. ಬಳಿಕ ಈ ವಿಷಯ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಹೊಸ ಸಮಗ್ರ ಯೋಜನೆಗಳನ್ನು ರೂಪಿಸುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಇದೇ ಮೊದಲ ಬಾರಿಗೆ ಐದು ಪಟ್ಟಣ ಗಳಿಗೂ ಸಮಗ್ರ ಯೋಜನೆಗಳನ್ನು ರೂಪಿಸಲಾಗಿದೆ.

ಪ್ರಾಧಿಕಾರ ವ್ಯಾಪ್ತಿ
(ಚದರ ಕಿ.ಮೀ.ಗಳಲ್ಲಿ)

ಆನೇಕಲ್‌ ಯೋಜನಾ
ಪ್ರಾಧಿಕಾರ 402.3
ನೆಲಮಂಗಲ ಯೋಜನಾ
ಪ್ರಾಧಿಕಾರ 735
ಮಾಗಡಿ ಯೋಜನಾ
ಪ್ರಾಧಿಕಾರ 501.52
ಹೊಸಕೋಟೆ ಯೋಜನಾ
ಪ್ರಾಧಿಕಾರ 535
ಕನಕಪುರ ಯೋಜನಾ
ಪ್ರಾಧಿಕಾರ 412.78

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT