ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL | ಚೆನ್ನೈ ಎದುರು ಗೆದ್ದ ಗುಜರಾತ್; ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ

Published 11 ಮೇ 2024, 3:06 IST
Last Updated 11 ಮೇ 2024, 3:06 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್ ಟೈಟನ್ಸ್‌ (ಜಿಟಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ನಡುವಣ ಪಂದ್ಯದ ಫಲಿತಾಂಶವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ 'ಪ್ಲೇ ಆಫ್‌' ಆಸೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಅಹಮದಾಬಾದ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೈಟನ್ಸ್‌, ನಾಯಕ ಶುಭಮನ್‌ ಗಿಲ್‌ (104) ಹಾಗೂ ಸಾಯಿ ಸುದರ್ಶನ್‌ (103) ಸಿಡಿಸಿದ ಶತಕಗಳ ಬಲದಿಂದ 20 ಓವರ್‌ಗಳಲ್ಲಿ 231 ರನ್‌ ಕಲೆಹಾಕಿತು. ಈ ಬೃಹತ್‌ ಗುರಿ ಬೆನ್ನತ್ತಿದ ಸಿಎಸ್‌ಕೆ, ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 196 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ ಪೈಪೋಟಿ
ಟೂರ್ನಿಯಲ್ಲಿ ಆಡಿದ ಮೊದಲ ಎಂಟು ಪಂದ್ಯಗಳಲ್ಲಿ ಏಳು ಸೋಲು ಕಂಡಿದ್ದ ಬೆಂಗಳೂರು ತಂಡ ಬಳಿಕ ಚೇತರಿಕೆಯ ಪ್ರದರ್ಶನ ನೀಡಿದೆ. ಸತತ ನಾಲ್ಕು ಜಯ ಸಾಧಿಸುವ ಮೂಲಕ, ಪ್ಲೇ ಆಫ್‌ ಹಂತಕ್ಕೇರಲು ಪೈಪೋಟಿ ನಡೆಸುತ್ತಿದೆ.

ಈವರೆಗೆ 12 ಪಂದ್ಯ ಆಡಿರುವ ಆರ್‌ಸಿಬಿ ಒಟ್ಟು 5 ಜಯ ಗಳಿಸಿ, 10 ಪಾಯಿಂಟ್‌ಗಳೊಂದಿಗೆ 7ನೇ ಸ್ಥಾನದಲ್ಲಿದೆ. ಉಳಿದಿರುವ ಎರಡು ಪಂದ್ಯಗಳ ಗೆಲುವು ಹಾಗೂ ಇತರೆ ಪಂದ್ಯಗಳ ಫಲಿತಾಂಶ ಆರ್‌ಸಿಬಿಯ ಮುಂದಿನ ಹಾದಿಯನ್ನು ನಿರ್ಧರಿಸಲಿವೆ.

ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿರುವ ತಂಡಗಳನ್ನು ಬಿಟ್ಟು ಉಳಿದವುಗಳಿಗಿಂತ ಆರ್‌ಸಿಬಿಯ ರನ್‌ರೇಟ್‌ ಉತ್ತಮವಾಗಿದೆ. ಹೀಗಾಗಿ, 4ನೇ ಸ್ಥಾನದಲ್ಲಿರುವ ಚೆನ್ನೈ ಮುಂದಿನ ಎರಡೂ ಪಂದ್ಯಗಳಲ್ಲಿ, ಡೆಲ್ಲಿ ಹಾಗೂ ಲಖನೌ ತಲಾ ಒಂದೊಂದರಲ್ಲಿ ಸೋಲು ಅನುಭವಿಸಿದರೆ, ಆರ್‌ಸಿಬಿಗೆ ಹಾದಿ ಸುಗಮವಾಗಲಿದೆ.

ಆರ್‌ಸಿಬಿಯ ಮುಂದಿನ ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕ್ರಮವಾಗಿ ಮೇ 12, 18ರಂದು ನಡೆಯಲಿವೆ.

ಅಗ್ರ ಸ್ಥಾನಗಳ ಮೇಲೆ ಕೆಕೆಆರ್‌, ಆರ್‌ಆರ್‌ ಕಣ್ಣು
ಆಡಿರುವ 11 ಪಂದ್ಯಗಳಲ್ಲಿ ತಲಾ 8 ಜಯ ಸಾಧಿಸಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಮತ್ತು ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಮೊದಲೆರಡು ಸ್ಥಾನಗಳಲ್ಲಿವೆ. ಇನ್ನೂ ತಲಾ ಮೂರು ಪಂದ್ಯಗಳು ಬಾಕಿ ಇರುವುದರಿಂದ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶವಿದೆ.

3ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌, 12 ಪಂದ್ಯಗಳಿಂದ 14 ಪಾಯಿಂಟ್‌ ಕಲೆಹಾಕಿದೆ. ಉಳಿದಿರುವ ಎರಡು ಪಂದ್ಯದಲ್ಲಿ ಒಂದನ್ನು ಗೆದ್ದರೂ, 16 ಪಾಯಿಂಟ್‌ಗಳೊಂದಿಗೆ ಅಗ್ರ ನಾಲ್ಕರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಬಹುದು.

ನಾಲ್ಕನೇ ಸ್ಥಾನದಲ್ಲಿರುವ ಸಿಎಸ್‌ಕೆಗೂ ಪ್ಲೇ ಆಫ್‌ ಹಾದಿ ಕಠಿಣವಾಗಿದೆ. 12 ಪಂದ್ಯಗಳನ್ನು ಆಡಿ 12 ಪಾಯಿಂಟ್‌ ಹೊಂದಿರುವ ಈ ತಂಡ, ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಆರ್‌ಆರ್‌ ಹಾಗೂ ಆರ್‌ಸಿಬಿ ವಿರುದ್ಧ ಆಡಲಿದೆ.

ಡೆಲ್ಲಿ, ಲಖನೌ, ಗುಜರಾತ್‌ಗೂ ಇದೆ ಅವಕಾಶ
ಡೆಲ್ಲಿ ಕ್ಯಾಪಿಟಲ್ಸ್‌, ಲಖನೌ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳಿಗೂ ಪ್ಲೇ ಆಫ್‌ ತಲುಪುವ ಅವಕಾಶವಿದೆ. ಈ ಮೂರು ತಂಡಗಳು ತಲಾ 12 ಪಂದ್ಯಗಳನ್ನು ಆಡಿವೆ. ಡೆಲ್ಲಿ ಮತ್ತು ಲಖನೌ 6 ಪಂದ್ಯಗಳನ್ನು ಗೆಲುವು ಸಾಧಿಸಿದ್ದರೆ, ಗುಜರಾತ್‌ 5ರಲ್ಲಿ ಜಯ ಕಂಡಿದೆ.

ಡೆಲ್ಲಿ ಮತ್ತು ಲಖನೌ ತಂಡಗಳ ಖಾತೆಯಲ್ಲೂ 12 ಪಾಯಿಂಟ್‌ ಇವೆಯಾದರೂ, ರನ್‌ರೇಟ್‌ ಉತ್ತಮವಾಗಿಲ್ಲದ ಕಾರಣ ಪಟ್ಟಿಯಲ್ಲಿ ಸಿಎಸ್‌ಕೆಯ ನಂತರದ ಸ್ಥಾನಗಳಲ್ಲಿವೆ. ಹೀಗಾಗಿ, ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲುವುದಷ್ಟೇ ಮುಂದಿನ ಹಂತಕ್ಕೇರಲು ಇರುವ ದಾರಿ. ಆದರೆ, ಈ ತಂಡಗಳೇ ಮೇ 14ರಂದು ಮುಖಾಮುಖಿಯಾಗಲಿದ್ದು, ಗೆದ್ದ ತಂಡಕ್ಕೆ ಹೆಚ್ಚಿನ ಅವಕಾಶವಿದೆ.

ಪ್ಲೇ ಆಫ್‌ ತಲುಪಬೇಕಾದರೆ, ಉಳಿದಿರುವ ಎರಡೂ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಾದ ಸ್ಥಿತಿ ಗುಜರಾತ್‌ನದ್ದು. ಅಷ್ಟಲ್ಲದೆ, ಉಳಿದ ತಂಡಗಳ ಫಲಿತಾಂಶವೂ ಈ ತಂಡಕ್ಕೆ ಪೂರಕವಾಗಿರಬೇಕು. ಹಾಗಾದರಷ್ಟೇ ಒಂದು ಅವಕಾಶ ಸಿಗಲಿದೆ. ಸದ್ಯದ ಸ್ಥಿತಿಯಲ್ಲಿ ಗುಜರಾತ್‌, ಪ್ಲೇ ಆಫ್‌ ತಲುಪುವುದು ತೀರಾ ಕಠಿಣ.

ಈ ತಂಡ ತನ್ನ ಮುಂದಿನ ಪಂದ್ಯದಲ್ಲಿ ಕೆಕೆಆರ್‌ (ಮೇ 13) ಹಾಗೂ ಎಸ್‌ಆರ್‌ಎಚ್‌ (ಮೇ 16) ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT