ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಟಕಚಿಂಚೋಳಿ: ಬಳಕೆಯಾಗದೆ ಪಾಳು ಬಿದ್ದ ಅಂಗನವಾಡಿ ಕಟ್ಟಡ

ಗಿರಿರಾಜ ವಾಲೆ
Published 22 ಫೆಬ್ರುವರಿ 2024, 4:30 IST
Last Updated 22 ಫೆಬ್ರುವರಿ 2024, 4:30 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟನೆಯಾಗದೇ ಪಾಳು ಬಿದ್ದಿದೆ. ಭಾಲ್ಕಿ ತಾಲ್ಲೂಕು ಕೇಂದ್ರದಿಂದ 34 ಕಿ.ಮೀ ದೂರದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ 120 ಮನೆಗಳಿವೆ. ಕಳೆದ ಮೂರು ವರ್ಷದ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಕಿಟಕಿ, ಬಾಗಿಲು ಕೂಡಿಸದಿರುವುದರಿಂದ ಇದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಗ್ರಾಮದಲ್ಲಿ ಇರುವುದು ಒಂದೇ ಅಂಗನವಾಡಿ ಕೇಂದ್ರ. ಅದಕ್ಕೆ ಕಾಯಂ ಮೇಲ್ವಿಚಾರಕಿ ನೇಮಕವಾಗಿಲ್ಲ. ಅಡುಗೆ ಸಹಾಯಕಿ ನೋಡಿಕೊಳ್ಳುತ್ತಿದ್ದಾರೆ. ಚಳಕಾಪುರ ಗ್ರಾಮದ ಅಂಗನವಾಡಿ ಮೇಲ್ವಿಚಾರಕಿ ವಾರಕ್ಕೆ ಒಂದು ಸಾರಿ ಬಂದು ಹೋಗುತ್ತಾರೆ. ಹೀಗಾಗಿ ಮಕ್ಕಳ ಪಾಲಿಗೆ ಅಕ್ಷರ ಕಲಿಸುವ ಶಿಕ್ಷಕಿ ಇಲ್ಲದಂತಾಗಿದೆ.

ಗ್ರಾಮದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಕಟ್ಟಡ ಬಳಕೆಯಾಗುತ್ತಿಲ್ಲ. ಅಲ್ಲದೇ ಕಾಯಂ ಅಂಗನವಾಡಿ ಮೇಲ್ವಿಚಾರಕಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಸದ್ಯ ಅಂಗನವಾಡಿ ಕೇಂದ್ರ ಸರ್ಕಾರಿ ಶಾಲೆಯ ಆವರಣದ ಕೊಠಡಿಯೊಳಗೆ ನಡೆಯುತ್ತಿದೆ. ಅಂಗನವಾಡಿಗೆ ಪ್ರತಿದಿನ ಕೇವಲ ಐದಾರು ಮಕ್ಕಳು ಮಾತ್ರ ಬರುತ್ತಿದ್ದಾರೆ. ಒಬ್ಬ ಕಾಯಂ ಮೇಲ್ವಿಚಾರಕಿ ನೇಮಕವಾದರೆ ಮಕ್ಕಳ ದಾಖಲಾತಿ ಹೆಚ್ಚಳವಾಗುತ್ತದೆ' ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕೇವಲ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಈ ಕಟ್ಟಡದ ಕಾಮಗಾರಿಯನ್ನು ಸಂಬಂಧ ಪಟ್ಟ ಇಲಾಖೆಯವರು ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕು' ಎಂದು ಗ್ರಾಮದ ಅನಿಲ ಜಾಧವ್ ಒತ್ತಾಯಿಸಿದ್ದಾರೆ.

‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಈ ಗ್ರಾಮದಲ್ಲಿ ಸ್ವಂತ ಕಟ್ಟಡವಿದ್ದರೂ ಬಳಕೆಯಾಗದಿರುವುದು ದುರಂತದ ಸಂಗತಿಯಾಗಿದೆ ' ಎಂದು ಎಬಿವಿಪಿಯ ರೇವಣಸಿದ್ಧ ಜಾಡರ್ ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿ ಕಟ್ಟಡದ ಬಾಕಿ ಉಳಿದಿರುವ ಕಾರ್ಯ ಪೂರ್ಣಗೊಳಿಸಿ ನಮ್ಮ ಸುಪರ್ದಿಗೆ ಒಪ್ಪಿಸಲು ಸಂಬಂಧಪಟ್ಟವರಿಗೆ ಪತ್ರ ಬರೆಯುತ್ತೇನೆ

- ಶ್ರೀನಿವಾಸ ಬಾಳುವಾಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT