ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಕಲ್ಯಾಣ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ, ಪ್ರಶಸ್ತಿ ಪ್ರದಾನ ನಾಳೆ
ಮಾಣಿಕ ಆರ್.ಭುರೆ
Published 18 ಮೇ 2024, 6:56 IST
Last Updated 18 ಮೇ 2024, 6:56 IST
ಅಕ್ಷರ ಗಾತ್ರ

ಬಸವಕಲ್ಯಾಣ: ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ ಮತ್ತೆ ತಲೆಯೆತ್ತಿ ನಿಂತಿದೆ. ಇಲ್ಲಿ ಮೇ19ರಂದು ಕಲ್ಯಾಣ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ ಜರುಗಲಿದೆ.

10-11ನೇ ಶತಮಾನದಲ್ಲಿ ಗೋರಟಾ ಸಾಹಿತ್ಯ, ಕಲೆ, ಸಂಗೀತದ ತವರೂರಾಗಿತ್ತು ಎಂಬುದಕ್ಕೆ ಅನೇಕ ದಾಖಲೆಗಳು ಹೇಳುತ್ತಿವೆ.

ಅಲ್ಲದೇ ಮಹಾದೇವ ದೇವಸ್ಥಾನ ಹಾಗೂ ಇತರೆಡೆ ಶಿಲ್ಪಗಳು ಸಹ ದೊರೆತಿವೆ. ಗ್ರಾಮದ ಉತ್ತರ ಭಾಗದಲ್ಲಿ ಶಿಲಾ ಶಾಸನಗಳನ್ನು ಬರೆಸಲಾಗುತ್ತಿತ್ತು. ಅದಕ್ಕಾಗಿ ಈಗಲೂ ಈ ಭಾಗಕ್ಕೆ ಶಾಸನಪಟ್ಟಿ ಎಂದು ಕರೆಯಲಾಗುತ್ತದೆ. ಇಲ್ಲಿ ಎರಡು ದೊಡ್ಡ ಶಿಲಾ ಶಾಸನಗಳು ಸಹ ದೊರೆತಿವೆ.

ರುದ್ರೇಶ್ವರರು ನಿತ್ಯವೂ ಇಲ್ಲಿ ಸಂಗೀತ ರುದ್ರಪೂಜೆ ನೆರವೆರಿಸುತ್ತಿದ್ದರು. ಆದ್ದರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಲಿಂ.ವಿರೂಪಾಕ್ಷಯ್ಯ ಸ್ವಾಮಿ ಅವರು ರುದ್ರೇಶ್ವರರ ದೇವಸ್ಥಾನ ನಿರ್ಮಿಸುವ ಸಂಕಲ್ಪ ಮಾಡಿದ್ದರು. ಇದಲ್ಲದೆ ಸಂಗೀತ ರುದ್ರ ಸಂಘ ಸ್ಥಾಪಕರಾಗಿದ್ದ ಅವರು ರುದ್ರಮಂತ್ರಗಳಿಗೆ ಸಂಗೀತ ಅಳವಡಿಸಿ ಹಾಡುತ್ತಿದ್ದರು. ಈ ಕಾರಣಕ್ಕಾಗಿ ಅವರ ಜನಪ್ರಿಯತೆ ಹೆಚ್ಚಿ ಸಾವಿರಾರು ಕಡೆ ಅವರು ಇಂಥ ಸಂಗೀತ ಪ್ರಸ್ತುತಪಡಿಸುವಂತಾಯಿತು.

‘ವಿರೂಪಾಕ್ಷಯ್ಯನವರ ಪ್ರಬಲ ಇಚ್ಛೆಯಂತೆ ಊರಿನ ಉತ್ತರದಲ್ಲಿನ ರಸ್ತೆ ಪಕ್ಕದಲ್ಲಿ ಜಮೀನನ್ನು ದಾನವಾಗಿ ಪಡೆದು ಸಂಗೀತ ರುದ್ರೇಶ್ವರರ ಆಕರ್ಷಕ ದೇವಸ್ಥಾನ ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಎತ್ತರದ ಗೋಪುರ, ಎದುರಲ್ಲಿ ಬೃಹತ್ ಸಭಾಮಂಟಪವಿದೆ' ಎಂದು ರಾಜಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.

`ದೇವಸ್ಥಾನದಲ್ಲಿ ಪ್ರತಿವರ್ಷ ಜಾತ್ರೆ ಹಮ್ಮಿಕೊಂಡು ವಿಭಾಗೀಯ ಸಂಗೀತ ಸಮ್ಮೇಳನ ನಡೆಸಲಾಗುತ್ತಿದೆ. ಇದಲ್ಲದೆ ಪ್ರಸಿದ್ಧ ಸಂಗೀತಗಾರರಿಗೆ `ಪಂ.ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರ' ಪ್ರಶಸ್ತಿ ನೀಡಿ ಸಂಗೀತ ಮತ್ತು ಸಂಗೀತಗಾರರ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿರೂಪಾಕ್ಷಯ್ಯನವರ ಪುಣ್ಯಸ್ಮರಣೆಯೂ ಆಚರಿಸಲಾಗುತ್ತದೆ' ಎಂದು ಸಂಗೀತಗಾರರಾದ ಸಿದ್ರಾಮಯ್ಯಸ್ವಾಮಿ ಮತ್ತು ರುದ್ರೇಶ್ವರ ಸ್ವಾಮಿ ತಿಳಿಸಿದ್ದಾರೆ.

ಕೇಶವರಾವ, ಹನ್ನುಮಿಯ್ಯಾಗೆ ಪ್ರಶಸ್ತಿ

ಗೋರಟಾದ ಸಂಗೀತ ರುದ್ರೇಶ್ವರ ದೇವಸ್ಥಾನದಲ್ಲಿ ಮೇ 19 ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯುವ 5ನೇ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಗೀತ ಸಮ್ಮೇಳನದಲ್ಲಿ ಈ ಭಾಗದ ಪ್ರಸಿದ್ಧ ಸಂಗೀತಗಾರರಾದ ಕೇಶವರಾವ್ ಸೂರ್ಯವಂಶಿ ಮತ್ತು ಉಸ್ತಾದ್ ಶೇಖ್ ಹನ್ನುಮಿಯ್ಯಾ ಅವರಿಗೆ `ಪಂ.ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರ' ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.'

ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ, ಬೇಮಳಖೇಡ, ಗೋರಟಾದ ರಾಜಶೇಖರ ಶಿವಾಚಾರ್ಯರು ನೇತೃತ್ವ ವಹಿಸುವರು, ಗೋರಟಾ ಲಿಂಗಾಯತ ಮಹಾಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮೇಳನದಲ್ಲಿ ಕೊಳಲುವಾದಕ ಹಣಮಂತಪ್ಪ ಚಿದ್ರಿ, ಹಿಂದೂಸ್ತಾನಿ ಗಾಯಕರಾದ ಶಿವಾಜಿರಾವ್ ಸಗರ, ಅರುಣ ವಠಾರ್, ರಾಜಕುಮಾರ ಹೂಗಾರ ಮದಕಟ್ಟಿ, ನೀಲಯ್ಯ ಹಿರೇಮಠ, ಹಣಮಂತರಾವ್ ಮಳ್ಳಿ, ಸಂಗಯ್ಯ ಹಿರೇಮಠ, ಅಶ್ವಿನಿ ರಾಜಕುಮಾರ, ಹಾಸ್ಯ ಕಲಾವಿದ ನವಲಿಂಗಕುಮಾರ ಪಾಟೀಲ, ತಬಲಾವಾದಕರಾದ ಜನಾರ್ದನ ವಾಘಮಾರೆ, ರಾಮಚಂದ್ರ ಕಲ್ಲಹಿಪ್ಪರ್ಗಿ, ಗಣೇಶ ಪರೀಟ್ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT