ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಮಾವಿನ ದರ್ಬಾರ್‌

ವೀರೇಶ್‌ ಎನ್.ಮಠಪತಿ
Published 27 ಏಪ್ರಿಲ್ 2024, 5:50 IST
Last Updated 27 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ಚಿಟಗುಪ್ಪ: ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು ನೋಡಿದವರ ಬಾಯಲ್ಲಿ ನೀರೂರಿಸುವಂತಿವೆ.

ಪಟ್ಟಣ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಾವಿನ ಹಣ್ಣಿನ ಭರ್ಜರಿ ಮಾರಾಟ ನಡೆಯುತ್ತಿದೆ. ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಹೀಗಾಗಿ, ಗ್ರಾಹಕರು ರಸಪೂರಿತ ಮಾವಿನ ಹಣ್ಣು ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪಟ್ಟಣದಲ್ಲಿ ತಳ್ಳುವ ಗಾಡಿಗಳಲ್ಲೇ ಹೆಚ್ಚಾಗಿ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದೆ. ಆದಾಗ್ಯೂ ಸುತ್ತಲಿನ ವಳಖಿಂಡಿ, ಇಟಗಾ, ರಾಮಪುರ್‌, ಕುಡಂಬಲ್‌, ಮುಸ್ತರಿ, ಉಡಬಾಳ ಗ್ರಾಮಗಳಿಂದ ನಸುಕಿನ ಜಾವದಲ್ಲಿಯೇ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣು ತುಂಬಿಕೊಂಡು ಬಂದು ಬಸವರಾಜ್‌ ವೃತ್ತದಲ್ಲಿ ಸಾಲಾಗಿ ಕುಳಿತು ಮಾರಾಟ ಮಾಡುತ್ತಾರೆ. ರಸಪೂರಿ, ಕಸಿಮಾವು, ಸಿಂಧೂರು ಇತ್ಯಾದಿ ತಳಿಯ ಮಾವಿನ ಹಣ್ಣು ಇಲ್ಲಿ ಕಂಡುಬರುತ್ತಿವೆ.

ರಸಪೂರಿ ಮಾವಿನ ಹಣ್ಣಿಗೆ ಒಂದು ಕೆಜಿಗೆ ₹100 ಧಾರಣೆಯಿದೆ. ಉಳಿದ ತಳಿಯ ಹಣ್ಣಿನ ಧಾರಣೆ ₹80 ರಿಂದ ₹90 ಇದೆ. ಕೊಳ್ಳುವವರು ಚೌಕಾಸಿ ಮಾಡಿದರೂ ವ್ಯಾಪಾರಿಗಳು ದರ ಇಳಿಸುವುದಕ್ಕೆ ನಿರಾಕರಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಾವಿನ ಕಾಯಿ ಹದಕ್ಕೆ ಬಂದ ವೇಳೆ ಮರದಿಂದ ಕಿತ್ತು ಹಣ್ಣು ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ, ಈಗ ಅಂಥ ವ್ಯವಸ್ಥೆ ಇಲ್ಲ. ಪ್ರಸ್ತುತ ಮಾವಿನ ಕಾಯಿಗೆ ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡುವ ಪದ್ಧತಿ ಚಾಲ್ತಿಗೆ ಬಂದಿದೆ. ಹೀಗಾಗಿ, ಎಳೆಯ ಕಾಯಿಕೂಡ ಹಣ್ಣಾಗುತ್ತದೆ.

ವ್ಯಾಪಾರಿಗಳೇ ಹೇಳುವಂತೆ ಮಹಾರಾಷ್ಟ್ರ, ತೆಲಂಗಾಣಗಳಿಂದ ಮಧ್ಯವರ್ತಿಗಳ ಮೂಲಕ ಹಣ್ಣುಗಳನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಾಗಿ, ಜಿಲ್ಲೆ, ತಾಲ್ಲೂಕಿನ ಕೆಲವೆಡೆ ಮಾವು ಬೆಳೆದಿರುವ ರೈತರು ವ್ಯಾಪಾರಿಗಳ ಮನೋಧರ್ಮದಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಗ್ರಾಮೀಣ ಭಾಗದ ಮಾವು ಬೆಳೆಗಾರರು ಹದಕ್ಕೆ ಬಂದಮಾವಿನ ಕಾಯಿಯನ್ನೇ ನೈಸರ್ಗಿಕವಾಗಿ ಹಣ್ಣುಮಾಡಿ ಪಟ್ಟಣದ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕರು ಅವರ ಬಳಿಯಲ್ಲಿ ಹಣ್ಣು ಕೊಳ್ಳಲು ಮುಂದಾಗುವುದಿಲ್ಲ. ರಾಸಾಯನಿಕ ಮಿಶ್ರಣದಿಂದ ಹಣ್ಣಾದ ಮಾವು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.

‘ಪ್ರಸ್ತುತ ಮಾವಿನ ಹಣ್ಣಿನ ಭರಾಟೆ ಹೆಚ್ಚಿದೆ. ಸದ್ಯ ಪಟ್ಟಣ ತಾಲ್ಲೂಕಿನ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಮಾರಾಟ ನಡೆಯುತ್ತಿದೆ. ಜೊತೆಗೆ ಸ್ಥಳದಿಂದ ಸ್ಥಳಕ್ಕೆ ಬೆಲೆ ವ್ಯತ್ಯಾಸವೂ ಕಂಡುಬರುತ್ತಿದೆ.

ಈಗಷ್ಟೆ ಮಾವಿನಕಾಯಿ ಮಾರಾಟದ ಸುಗ್ಗಿ ಆರಂಭವಾಗಿದ್ದು ಮಾರುಕಟ್ಟೆಯಲ್ಲಿ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇದೆ. ಕ್ರಮೇಣ ದಿನಕಳೆದಂತೆ ಹಣ್ಣು ಸೇವಿಸುವವರ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ

-ಶರಣಮ್ಮ ಹಣ್ಣು ವ್ಯಾಪಾರಿ ವಳಖಿಂಡಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT