ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಜಿಲ್ಲೆ ಹಸಿರಾಗಿಸಲು ಸಂಕಲ್ಪ: 20 ಲಕ್ಷ ಸಸಿ ನೆಡುವ ಗುರಿ

ಜಿಲ್ಲೆಯಲ್ಲಿ 20 ಲಕ್ಷ ಸಸಿ ನೆಡುವ ಗುರಿ; 200 ಕಿ.ಮೀ ರಸ್ತೆ ಬದಿ ಸಸಿ ನೆಟ್ಟ ಅರಣ್ಯ ಇಲಾಖೆ
Published 10 ಜೂನ್ 2024, 6:23 IST
Last Updated 10 ಜೂನ್ 2024, 6:23 IST
ಅಕ್ಷರ ಗಾತ್ರ

ಬೀದರ್‌: ಅರಣ್ಯ ಇಲಾಖೆಯು ಬೀದರ್‌ ಜಿಲ್ಲೆಯನ್ನು ಸಂಪೂರ್ಣ ಹಸಿರಾಗಿಸಲು ಸಂಕಲ್ಪ ತೊಟ್ಟಿದ್ದು, ಸತತ ಎರಡನೇ ವರ್ಷವೂ ದೊಟ್ಟ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಕೆಲಸ ಆರಂಭಿಸಿದೆ.

ಹೋದ ವರ್ಷ 15 ಲಕ್ಷ ಸಸಿಗಳನ್ನು ಜಿಲ್ಲೆಯಾದ್ಯಂತ ನೆಡಲಾಗಿತ್ತು. ಈ ವರ್ಷ 20 ಲಕ್ಷ ಸಸಿಗಳನ್ನು ಜಿಲ್ಲೆಯಲ್ಲಿ ನೆಡಲು ಅರಣ್ಯ ಇಲಾಖೆ ಗುರಿ ಹಾಕಿಕೊಂಡಿದೆ.

‘ಬೀದರ್‌ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಟ್ಟು, ಅವುಗಳನ್ನು ಸಂರಕ್ಷಿಸಿ, ಪೋಷಿಸಿ ಹೆಚ್ಚಿನ ಭಾಗ ಹಸಿರು ಮಾಡುವ ಸಂಕಲ್ಪ ನಮ್ಮದು’ ಎಂದು ಹೋದ ವರ್ಷ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದರು. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಈಗಾಗಲೇ ‘ವೃಕ್ಷ ಅಭಿಯಾನ’ ಆರಂಭಗೊಂಡಿದೆ.

ಹಿಂದೆ ನೆಟ್ಟು ಬೆಳೆಸಿದ ಗಿಡ–ಮರಗಳನ್ನು ಸಂರಕ್ಷಿಸುವುದು ಜೊತೆಗೆ ಹೊಸದಾಗಿ ದೊಡ್ಡ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಹಸಿರು ಪ್ರದೇಶ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈಗಾಗಲೇ ಜಿಲ್ಲೆಗೆ ಮುಂಗಾರು ಆಗಮನ ಆಗಿರುವುದರಿಂದ ಅರಣ್ಯ ಇಲಾಖೆ ಚುರುಕುಗೊಂಡಿದೆ. ಜೂನ್‌ ಮೊದಲ ವಾರದಲ್ಲಿಯೇ ಜಿಲ್ಲೆಯ 200 ಕಿ.ಮೀ ರಸ್ತೆ ಬದಿ ಸಸಿ ನೆಡುವ ಕಾರ್ಯ ಪೂರ್ಣಗೊಂಡಿದೆ. ದೊಡ್ಡ ಮಳೆ ನಿರೀಕ್ಷೆಯಲ್ಲಿರುವ ಅರಣ್ಯ ಇಲಾಖೆ, ಬಿರುಸಿನ ಮಳೆ ನಂತರ ಈ ಕೆಲಸವನ್ನು ಅರಣ್ಯ ಹಾಗೂ ಇತರೆ ಬಯಲು ಪ್ರದೇಶಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.

ಆಲ, ಅರಳಿ, ಬೇವು, ಹೊಂಗೆ, ಹುಣಸೆ, ಮಾವು ಸೇರಿದಂತೆ ಇತರೆ ಜಾತಿಯ ಒಟ್ಟು 20 ಲಕ್ಷ ಸಸಿಗಳನ್ನು ಹಂತ ಹಂತವಾಗಿ ನೆಡಲು ನಿರ್ಧರಿಸಲಾಗಿದೆ.

ಸಂಘ ಸಂಸ್ಥೆಗಳಿಂದ ಆಸಕ್ತಿ:

ಮಳೆ ಆರಂಭವಾಗುತ್ತಿದ್ದಂತೆ ಅನೇಕ ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನವರು ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ನೆಡುವ ಕಾರ್ಯ ಆರಂಭಿಸಿದ್ದಾರೆ. ನರ್ಸರಿಗಳಿಂದ ಗಿಡಗಳನ್ನು ಖರೀದಿಸಿ, ಸಾರ್ವಜನಿಕರಿಗೆ ವಿತರಿಸುತ್ತಿದ್ದಾರೆ. ರಸ್ತೆ ಬದಿ, ಅವರ ಕ್ಯಾಂಪಸ್‌ಗಳಲ್ಲಿ ನೆಡುತ್ತಿದ್ದಾರೆ. ಇದು ಕೂಡ ಹಸಿರು ಪ್ರದೇಶದ ವಿಸ್ತರಣೆಗೆ ಹೆಚ್ಚಿನ ಸಹಾಯವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ವಾನತಿ ಎಂ.ಎಂ
ವಾನತಿ ಎಂ.ಎಂ
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಸಿ ನೆಡಲಾಯಿತು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಸಿ ನೆಡಲಾಯಿತು
ವಿನಯ್‌ ಮಾಳಗೆ
ವಿನಯ್‌ ಮಾಳಗೆ
ಮೊದಲ ಹಂತದಲ್ಲಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಹೆಚ್ಚಿನ ಮಳೆಯಾದ ನಂತರ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುವುದು
–ವಾನತಿ ಎಂ.ಎಂ. ಡಿಸಿಎಫ್‌ ಬೀದರ್‌

ಹೋದ ವರ್ಷದ 15 ಲಕ್ಷ ಸಸಿಗಳು ಏನಾದವು?

ಅರಣ್ಯ ಇಲಾಖೆಯ ವತಿಯಿಂದ ಹಿಂದಿನ ವರ್ಷ ಬೀದರ್‌ ಜಿಲ್ಲೆಯಲ್ಲಿ ಒಟ್ಟು 15 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಈ ಪೈಕಿ ಲಕ್ಷ ಸಸಿಗಳನ್ನು ಆಯಾ ಗ್ರಾಮ ಪಂಚಾಯಿತಿಗಳು ರೈತರು ಶಾಲಾ–ಕಾಲೇಜಿನವರಿಗೆ ನೀಡಲಾಗಿತ್ತು. ಅವರೇ ಬೆಳೆಸಿ ಸಂರಕ್ಷಿಸಲು ತಿಳಿಸಲಾಗಿತ್ತು. ಇನ್ನುಳಿದ 10 ಲಕ್ಷ ಸಸಿಗಳನ್ನು ಸಾರ್ವಜನಿಕ ಸ್ಥಳ ರಸ್ತೆಬದಿ ಬಯಲು ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನೆಡಲಾಗಿತ್ತು. ಅರಣ್ಯ ಇಲಾಖೆಯ ಪ್ರಕಾರ ಒಟ್ಟು 10 ಲಕ್ಷ ಗಿಡಗಳಲ್ಲಿ ಶೇ 80ರಷ್ಟು ಬೆಳೆದಿವೆ. ಖಾಸಗಿಯವರಿಗೆ ಕೊಟ್ಟ 5 ಲಕ್ಷ ಗಿಡಗಳು ಏನಾದವು ಎಂಬ ನಿಖರ ಮಾಹಿತಿ ಅದರ ಬಳಿ ಇಲ್ಲ.

ಫೋಟೊಕ್ಕಾಗಿ ಸಸಿ

ಮುಂಗಾರು ಆಗಮನವಾಗುತ್ತಿದ್ದಂತೆ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಹೆಚ್ಚಿನವರು ಫೋಟೊ ಶೂಟ್‌ಗಷ್ಟೇ ಸೀಮಿತವಾಗಿವೆ. ಸಸಿಗಳನ್ನು ನೆಟ್ಟು ಅವುಗಳಿಗೆ ನೀರೆರೆದು ಛಾಯಾಚಿತ್ರ ತೆಗೆಸಿಕೊಂಡು ತಮ್ಮ ಕೆಲಸ ಮುಗಿಯಿತು ಎಂಬ ಭಾವನೆ ಹೆಚ್ಚಿನವರಲ್ಲಿದೆ. ಸಸಿಗಳನ್ನು ನೆಟ್ಟ ನಂತರ ಅವುಗಳ ಸಂರಕ್ಷಣೆ ಪೋಷಣೆಗೆ ಯಾರೂ ಹೆಚ್ಚು ಒತ್ತು ಕೊಡುತ್ತಿಲ್ಲ. ಇದರ ಪರಿಣಾಮ ಅನೇಕ ಕಡೆಗಳಲ್ಲಿ ಗಿಡಗಳನ್ನು ನೆಟ್ಟರು ಅವುಗಳು ಬೆಳೆಯುತ್ತಿಲ್ಲ. ಸೂಕ್ತ ಸಂರಕ್ಷಣೆ ನಿರ್ವಹಣೆ ಕೊರತೆಯೇ ಅದಕ್ಕೆ ಕಾರಣ. ಈ ಮನೋಭಾವ ಬದಲಾಗಬೇಕು ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಸಾರ್ವಜನಿಕರು ಏನಂತಾರೆ?

‘ನೆಟ್ಟ ಸಸಿಗಳ ಪೋಷಣೆಯಾಗಲಿ’ (ಚಿತ್ರ ಇದೆ) ‘ಅರಣ್ಯ ಇಲಾಖೆ ಶಾಲಾ ಕಾಲೇಜು ಹಾಗೂ ಸಂಘ–ಸಂಸ್ಥೆಗಳ ವತಿಯಿಂದ ಪ್ರತಿ ವರ್ಷ ಪರಿಸರ ದಿನಾಚರಣೆಯ ಅಂಗವಾಗಿ ಅಸಂಖ್ಯ ಸಸಿಗಳನ್ನು ನೆಡುತ್ತಾರೆ. ಆದರೆ ಅವುಗಳ ಪೋಷಣೆ ಮಾಡುವುದಿಲ್ಲ. ನೆಟ್ಟ ಸಸಿಗಳು ಬೆಳೆಯದೆ ನಶಿಸಿ ಹೋಗುವುದೆ ಹೆಚ್ಚು. ಅರಣ್ಯ ಇಲಾಖೆಯವರು ಪ್ರತಿ ವರ್ಷ ಕೋಟಿ ವೃಕ್ಷ ಅಭಿಯಾನ ಯೋಜನೆಯಡಿ ಸಸಿಗಳನ್ನು ನೆಡುತ್ತಾರೆ. ಆದರೆ ನೆಟ್ಟ ಸಸಿಗಳಿಗೆ ನಿಯಮಿತವಾಗಿ ನೀರುಣಿಸುವುದು ಬೇಲಿ ಸಂರಕ್ಷಣೆ ಒದಗಿಸುವುದು ದನಕರುಗಳಿಂದ ಬಿರುಗಾಳಿಯಿಂದ ರಕ್ಷಣೆ ನೀಡುವುದು ಬಾಗಿದ ಸಸಿಗಳನ್ನು ಮತ್ತೆ ನೆಟ್ಟಗೆ ನಿಲ್ಲಿಸುವುದು ಕಾರ್ಯ ಸಮರ್ಪಕವಾಗಿಲ್ಲದಿದ್ದರೆ ಸಸಿ ನೆಡುವುದಕ್ಕೆ ಅರ್ಥವಿಲ್ಲದಂತಾಗುತ್ತದೆ. ಅದಕ್ಕಾಗಿ ನೆಟ್ಟ ಸಸಿಗಳ ಪೋಷಣೆ ಕಾಳಜಿ ಅವಶ್ಯಕ.

–ಪ್ರೊ.ಸಂಗಯ್ಯ

ವಿ.ಕಲ್ಮಠ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕರು ‘ಪ‍್ರಚಾರಕ್ಕಾಗಿ ಸಸಿ ನೆಡುವುದು ಬೇಡ’ (ಚಿತ್ರ ಇದೆ) ‘ಅನೇಕರು ಪ್ರಚಾರಕ್ಕಾಗಿ ಸಸಿಗಳನ್ನು ನೆಡುತ್ತಿದ್ದಾರೆ. ಈ ಪರಿಪಾಠ ಸರಿಯಲ್ಲ. ಸಾಧ್ಯವಾದರೆ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಡಬೇಕು. ಅದನ್ನು ಅವರ ಮಕ್ಕಳಂತೆ ಕಾಳಜಿ ವಹಿಸಿ ಬೆಳೆಸಿದರೆ ಎರಡ್ಮೂರು ವರ್ಷಗಳಲ್ಲಿ ಜಿಲ್ಲೆ ಹಸಿರಾಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ‘ಟೀಮ್‌ ಯುವ’ ಸಂಚಾಲಕ ವಿನಯ್‌ ಮಾಳಗೆ ಅಭಿಪ್ರಾಯಪಟ್ಟರು. ‘ಅರಣ್ಯ ಇಲಾಖೆಯವರು ಅಲ್ಲಲ್ಲಿ ಸಸಿಗಳನ್ನು ನೆಡುತ್ತಾರೆ. ಅವುಗಳು ನಮ್ಮದೆಂದು ಭಾವಿಸಿ ಸಂರಕ್ಷಿಸಿ ಪೋಷಿಸಬೇಕು. ಎಲ್ಲರೂ ಹೊಣೆಗಾರಿಕೆಯಿಂದ ಕೆಲಸ ಮಾಡಿದರೆ ಫಲ ಸಿಗುತ್ತದೆ’ ಎಂದು ಹೇಳಿದರು.

ಯಾವ್ಯಾವ ಸಸಿಗಳು?

  • ಆಲ

  • ಅರಳಿ

  • ಬೇವು

  • ಹೊಂಗೆ

  • ಹುಣಸೆ

  • ಮಾವು

  • ಶ್ರೀಗಂಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT