ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್‌: ನೀರಿಗಾಗಿ ಹಾಹಾಕಾರ

ಗುಂಡು ಅತಿವಾಳ
Published 22 ಮಾರ್ಚ್ 2024, 6:07 IST
Last Updated 22 ಮಾರ್ಚ್ 2024, 6:07 IST
ಅಕ್ಷರ ಗಾತ್ರ

ಹುಮನಾಬಾದ್: ‘ದಿನ  ಬೆಳಗಾದರೆ ನಾವು ಕೂಲಿ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಮನೆಯ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಮಂದಿ ಎಲ್ಲರೂ ನೀರಿಗಾಗಿ ಕಾಯ್ದುಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ’. ಇದು ಹುಮನಾಬಾದ್‌ ಪಟ್ಟಣದ ಉಪಾರ್ ಹಾಗೂ ಧನಗರ್ ಗಡ್ಡ ಬಡಾವಣೆಯ ಜನರ ಗೋಳು.

‘ಕಾರಂಜಾ ಜಲಾಶಯದಿಂದ ಮೂರ್ನಾಲ್ಕು ದಿನಕ್ಕೆ ಒಮ್ಮೆ ಬಿಡಲಾಗುತ್ತಿರುವ ನೀರು ಸಮಯಕ್ಕೆ ಬಾರದೆ ಇರುವುದರಿಂದ   ನಮ್ಮ ಬೇರೆಲ್ಲ ಕೆಲಸ ಬಿಟ್ಟು ನೀರಿಗಾಗಿ ಕಾಯುವುದು ನಿತ್ಯದ  ಕಾಯಕವಾಗಿದೆ’ ಎಂದು ಉಪಾರ್ ಬಡಾವಣೆಯ ಸಾವಿತ್ರಿಬಾಯಿ, ಶಾಂತಾಬಾಯಿ ಗೋವಿಂದ್  ಬೇಸರ ವ್ಯಕ್ತಪಡಿಸಿದರು.

‘ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳಿದ್ದು ಬಹುತೇಕ ವಾರ್ಡ್‌ಗಳಲ್ಲಿ ನೀರಿಗಾಗಿ ನಿತ್ಯ ಪರದಾಡುವುದು ಸಹಜವಾಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎನ್ನುವುದು ಸಾರ್ವಜನಿಕರ ದೂರು.

ಪಟ್ಟಣ ಸೇರಿದಂತೆ ಚಿಟಗುಪ್ಪ ಪಟ್ಟಣ ಹಾಗೂ ತಾಲ್ಲೂಕಿನ ಹುಡಗಿ, ನಂದಗಾಂವ, ಇಂದ್ರಾನಗರ, ಜನತಾ ನಗರ, ಮಾಣಿಕ್ ನಗರ, ಮದರಗಾಂವ ಇತರೆ ಗ್ರಾಮಗಳು ಸೇರಿದಂತೆ  ಒಟ್ಟು 20ಕ್ಕೂ ಅಧಿಕ ಗ್ರಾಮಗಳಿಗೆ ಕಾರಂಜಾ ಜಲಾಶಯದ ನೀರೆ ಆಧಾರವಾಗಿದೆ. ಹೀಗಾಗಿ ಕಾರಂಜಾ ಜಲಾಶಯದ ಪೈಪ್‌ಲೈನ್‌ಗಳಲ್ಲಿ ಸಮಸ್ಯೆ ಕಂಡು ಬಂದಲ್ಲಿ ನೀರು ಸರಬರಾಜಿನಲ್ಲಿ ಪಟ್ಟಣ‌  ಸೇರಿದಂತೆ ಈ ಗ್ರಾಮಗಳ ಜನರಿಗೆ ಹಾಹಾಕಾರ ತಪ್ಪಿದ್ದಲ್ಲ.  ಪಟ್ಟಣದಲ್ಲಿನ ವಾರ್ಡ್‌ಗಳಿಗೆ ನಿಗದಿಯಂತೆ ಸದ್ಯ ಮೂರ್ನಾಲ್ಕು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.  ಈಗಾಗಲೇ ಮಾರ್ಚ್ ತಿಂಗಳಲ್ಲಿಯೇ ಬಿಸಿಲಿನ ಪ್ರಖರತೆ ಅಧಿಕಗೊಂಡಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪ ಇನ್ನೂ ಅಧಿಕಗೊಳ್ಳುವ ಲಕ್ಷಣಗಳಿವೆ. ಈ ಸಮಯದಲ್ಲಿ  ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಕಳೆದ 15 ದಿನಗಳಿಂದ ನೀರಿಲ್ಲದೆ ಉಪಾರ್ ಬಡಾವಣೆಯ ಜನರು ಪರದಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಗಳು ಸಹ ನಮ್ಮ ಬಗ್ಗೆ ಗಮನ ಹರಿಸಲು ಬಂದಿಲ್ಲ’ ಎನ್ನುತ್ತಾರೆ ದಶರಥ್ ಆರ್ಯ. 

‘ನೀರಿನ  ಸಮಸ್ಯೆಯಿಂದಾಗಿ ನಾವು  ಸರಿಯಾಗಿ ಊಟ ಸಹ ಮಾಡದಂತಹ ಪರಿಸ್ಥಿತಿ ಬಂದಿದೆ. ನಮ್ಮ ಈ ಕಷ್ಟವನ್ನು ಅರಿತು  ಕನಿಷ್ಠ ಎರಡು ದಿನಕ್ಕೊಮ್ಮೆ ಆದರೂ ನೀರು ಸರಬರಾಜು ಮಾಡಿ ಎಂದು ಉಪಾರ್ ಬಡಾವಣೆಯ ಶೋಭಾ, ಮೀನಾಕ್ಷಿ ಆಗ್ರಹಿಸಿದರು.

ಶಾಸಕರು ಭೇಟಿ ನೀಡಿದರು ಸಮಸ್ಯೆ ಬಗೆಹರಿದಿಲ್ಲ: ‘ನಾವು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗೆ ಬಂದಿದ್ದ ರಾಜಕಾರಣಿಗಳಿಗೆ  ಧನಗರ್ ಗಡ್ಡ , ಉಪಾರ್ ಬಡಾವಣೆಯ ಜನರಿಗೆ ಅನೇಕ ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸುವಂತೆ ಮನವಿ ಸಹ ಮಾಡಿದ್ದೆವು. ಅದರಂತೆ ಚುನಾವಣೆ ನಂತರ ಶಾಸಕ ಡಾ.ಸಿದ್ದಲಿಂಗಪ್ಪ  ಪಾಟೀಲ ಅವರು ನಮ್ಮ ಬಡಾವಣೆಗೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾತನಾಡಿದರು. ಆದರೆ ಈವರೆಗೂ ನಮ್ಮ ಬಡಾವಣೆಯಲ್ಲಿನ ನೀರಿನ  ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಉಪಾರ್ ಹಾಗೂ ಧನಗರ್ ಗಡ್ಡ  ಬಡಾವಣೆಯಲ್ಲಿನ ಬಹುತೇಕರು ಕೂಲಿ ಕೆಲಸ ಮಾಡುವವರೆ ಇದ್ದಾರೆ. ಹೀಗಾಗಿ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಬಡಾವಣೆಯ ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT