ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ಆರತಿ ಕಾಲೇಜು ಶಿಕ್ಷಣಕ್ಕೆ ಬಡತನ ಅಡ್ಡಿ

ಲಕ್ಷಾಂತರ ಸಾಲ ಇದ್ದರೂ 6 ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ತಂದೆ ತಾಯಿ
ಮಾಣಿಕ ಆರ್.ಭುರೆ
Published 12 ಮೇ 2024, 4:33 IST
Last Updated 12 ಮೇ 2024, 4:33 IST
ಅಕ್ಷರ ಗಾತ್ರ

ಬಸವಕಲ್ಯಾಣ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6 ನೇ, ಜಿಲ್ಲಾ ಮಟ್ಟದಲ್ಲಿ 2 ನೇ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಖಾನಾಪುರ(ಕೆ)ವಾಡಿಯ ಆರತಿಗೆ ಕಾಲೇಜು ಶಿಕ್ಷಣ ಪಡೆಯುವುದಕ್ಕೆ ಬಡತನ ಅಡ್ಡಿಯಾಗಿದೆ. ತಂದೆ ಗಣಪತಿ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಾರಣವೂ ಸಮಸ್ಯೆಯಾಗಿದೆ. ಇದುವರೆಗೆ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ದೊರಕಿದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ಹಣದ ಅವಶ್ಯಕತೆ ಇರುವುದರಿಂದ ಮುಂದೇನು ಎಂಬ ಚಿಂತೆ ಇವರ ತಂದೆ-ತಾಯಿಗೆ ಕಾಡುತ್ತಿದೆ.

ಹಾಗೆ ನೋಡಿದರೆ, ಆರ್ಥಿಕ ಸಂಕಷ್ಟದಲ್ಲಿಯೂ ತಂದೆ ಗಣಪತಿ ಮತ್ತು ತಾಯಿ ಅನಸೂಯಾ ಅವರದ್ದು ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಾಧನೆಯಾಗಿದೆ. ಇವರು ಕೂಲಿ ಕಾರ್ಮಿಕರಾದರೂ ತಮ್ಮ 6 ಜನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದಕ್ಕೆ ಎಂದೂ ಹಿಂದೇಟು ಹಾಕಿಲ್ಲ. ಅದರಲ್ಲಿಯೂ ಐವರು ಹೆಣ್ಣುಮಕ್ಕಳಿದ್ದರೂ ಅವರಿಗೆ ಯಾವುದರ ಕೊರತೆಯೂ ಮಾಡಿಲ್ಲ.

ದೊಡ್ಡವನಾದ ಮಗ ದೇವರಾಜ್ ಐಐಟಿ ಪದವಿ ಪಡೆದು ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದಾನೆ. ದೆಹಲಿಯ ವಾಜೀರಾಂ ಆ್ಯಂಡ್ ರವಿ ಸಂಸ್ಥೆಯಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದಾನೆ. ಹೆಣ್ಣುಮಕ್ಕಳಲ್ಲಿ ಸವಿತಾ ಬಿ.ಎ ಪದವೀಧರೆ, ಭಾಗ್ಯಶ್ರೀ ಬಿ.ಎ ಓದುತ್ತಿದ್ದಾಳೆ. ರಂಜೀತಾ (ವಿಜ್ಞಾನ) ಮತ್ತು ಗೀತಾ (ಕಾಮರ್ಸ್) ಪಿಯುಸಿಯಲ್ಲಿದ್ದಾರೆ. ಚಿಕ್ಕವಳಾದ ಆರತಿ ಎಸ್.ಎಸ್.ಎಲ್.ಸಿ ಯಲ್ಲಿ 620 ಅಂಕಗಳನ್ನು (ಶೇ99.20) ಪಡೆದಿದ್ದಾಳೆ. `ನನ್ನ ಯಶಸ್ಸಿಗೆ ತಂದೆ ತಾಯಿ ಹಾಗೂ ವಸತಿ ಶಾಲೆಯ ಪ್ರಾಚಾರ್ಯರ ಮತ್ತು ಇತರೆ ಸಿಬ್ಬಂದಿಯವರ ಸಹಕಾರ ಕಾರಣವಾಗಿದೆ. ಪಿಯುಸಿಯಲ್ಲಿ ವಿಜ್ಞಾನ ಓದಿ ಐಐಟಿಗೆ ಪ್ರವೇಶ ಪಡೆಯುವುದಕ್ಕೆ ಪ್ರಯತ್ನಿಸುತ್ತೇನೆ. ನಂತರ ಅಣ್ಣನಂತೆ ನಾನೂ ಯುಪಿಎಸ್ಸಿ ಪರೀಕ್ಷೆ ಬರೆಯುತ್ತೇನೆ' ಎನ್ನುತ್ತಾಳೆ ಆರತಿ.

`ಈಗಾಗಲೇ ಕೆಲ ಕಾಲೇಜುಗಳಿಗೆ ಭೇಟಿನೀಡಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು ಎಲ್ಲೆಡೆ ವರ್ಷಕ್ಕೆ ರೂ.2 ಲಕ್ಷಕ್ಕಿಂತ ಅಧಿಕ ಖರ್ಚು ಬರುತ್ತಿದೆ. ಹೀಗಾಗಿ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಕೂಲಿಯಿಂದ ಬಂದ ಹಣ ಮಕ್ಕಳ ಶಿಕ್ಷಣಕ್ಕೆ ಸಾಕಾಗದೆ ಬ್ಯಾಂಕ್ ನಿಂದ ಮತ್ತು ಖಾಸಗಿಯಾಗಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದೇವೆ. ಈಗ ಮತ್ತೆ ಸಾಲ ಯಾರು ಕೊಡುತ್ತಾರೆ. ತಗಡಿನ ಹೊದಿಕೆಯ ಮನೆ ಇದೆ. ಎರಡು ಎಕರೆ ಜಮೀನಿದ್ದರೂ ಬೆಳೆ ಬೆಳೆಯುವುದಿಲ್ಲ' ಎಂದು ತಾಯಿ ಅನಸೂಯ ಸಂಕಟ ತೋಡಿಕೊಂಡಿದ್ದಾರೆ.

`ಆರತಿ ಆಟ ಪಾಠ ಎರಡರಲ್ಲೂ ಮುಂದಿದ್ದಾಳೆ. ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಾಗಿನಿಂದಲೂ ಪ್ರತಿ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದು ಉತ್ತೀರ್ಣ ಆಗಿದ್ದಾಳೆ. ಗುರಿ ಇಟ್ಟುಕೊಂಡಿರುವುದನ್ನು ಸಾಧಿಸುವ ಛಲ ಆಕೆಯದ್ದಾಗಿದೆ. ಬಡತನದ ಕಾರಣ ಆರತಿಯ ಶಿಕ್ಷಣಕ್ಕೆ ತೊಂದರೆ ಆಗಬಾರದು' ಎಂದು ಶಾಲೆಯ ಪ್ರಾಚಾರ್ಯ ಶರಣಬಸಪ್ಪ ದಂಡೆ ಹೇಳಿದ್ದಾರೆ. ಆರ್ಥಿಕ ಸಹಾಯಕ್ಕಾಗಿ ಫೋನ್ ಪೇ ಸಂಖ್ಯೆ: 9880286205 ಆಗಿದೆ. ಹೆಚ್ಚಿನ ಮಾಹಿತಿಗಾಗಿ 9110298873 (ಗಣಪತಿ) 9449028679 (ಶರಣಬಸಪ್ಪ) ಈ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಆರತಿಯ ಶಿಕ್ಷಣ ಮುಂದುವರಿಕೆಗಾಗಿ ಕೆಲವರು ಸಹಾಯ ನೀಡುವುದಕ್ಕೆ ಮುಂದೆ ಬಂದಿದ್ದು ಇತರೆ ಆಸಕ್ತರು ಸಹ ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
ಶರಣಬಸಪ್ಪ ದಂಡೆ, ಪ್ರಾಚಾರ್ಯ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಆರತಿ ಜತೆ ತಾಯಿ ಅನಸೂಯಾ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಆರತಿ ಜತೆ ತಾಯಿ ಅನಸೂಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT