ಶನಿವಾರ, ಏಪ್ರಿಲ್ 1, 2023
23 °C
ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ

ಜೆಜೆಎಂ ಯೋಜನೆಗೆ 51 ಗ್ರಾಮಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: 2020-21ನೇ ಸಾಲಿನ ಜಲ ಜೀವನ ಮಿಷನ್ ಯೋಜನೆಗೆ ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕಿನ 51 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಲ ಜೀವನ ಮಿಷನ್ ಯೋಜನೆ ತಂಡದ ಮುಖ್ಯಸ್ಥ ಡಾ. ನಂದಕುಮಾರ ತಾಂದಳೆ ಹೇಳಿದರು.

ಬಸವಕಲ್ಯಾಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜೆಜೆಎಂ ಯೋಜನೆ ಹಾಗೂ ಲಾಲ್ ಬಹಾದ್ದೂರ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನ ಕುರಿತು ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕುಗಳ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈಗಾಗಲೇ ಈ ಎರಡೂ ತಾಲ್ಲೂಕುಗಳ 35 ಗ್ರಾಮಗಳಲ್ಲಿ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿ ಇವೆ. 2025 ರ ಒಳಗೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಾಗಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನಲ್ಲಿ ಸಂಪರ್ಕ, ಇಂಗು ಗುಂಡಿ, ಗೃಹ ಶೌಚಾಲಯ ನಿರ್ಮಾಣ ಹಾಗೂ ಬಳಕೆ ಕುರಿತು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಸಮುದಾಯದ ಶೇ 10 ರಷ್ಟು ವಂತಿಕೆ ಸಂಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾಮಗಾರಿಗಳ ಮೇಲುಸ್ತುವಾರಿ ಮಾಡಬೇಕು. ಯೋಜನೆ ಉದ್ದೇಶ ಸಾಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಲ ಜೀವನ ಮಿಷನ್ ಯೋಜನೆ ಮಹತ್ವದ ಯೋಜನೆಯಾಗಿದೆ. ಪಂಚಾಯಿತಿ ಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದರ ಯಶಸ್ಸಿಗೆ ಕೈಜೋಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್ ಹೇಳಿದರು.

ಗ್ರಾಮಗಳಲ್ಲಿ ಗುಣಮಟ್ಟದೊಂದಿಗೆ ಕಾಲ ಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪ್ರತಿ ಕುಟುಂಬಕ್ಕೂ ಯೋಜನೆ ಲಾಭ ದೊರಕುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಅಪರ್ಣಾ, ತಾಲ್ಲೂಕು ಪಂಚಾಯಿತಿ ಯೋಜನಾ ಅಧಿಕಾರಿ ರಾಜಶೇಖರ ನೆಲ್ಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಎಂಜಿನಿಯರ್ ಸುರೇಶ ಮೋರೆ. ಜೆಜೆಎಂ ಯೋಜನೆ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪೇತ್ರು ಬಜಾಕರ್ ಇದ್ದರು.

ಸಂಪನ್ಮೂಲ ವ್ಯಕ್ತಿಗಳಾದ ದಿಲೀಪಕುಮಾರ ಮೋಘಾ, ಅರ್ಚನಾ ತರಬೇತಿ ನೀಡಿದರು. ಓಂಕಾರ ಹಿರೇಮಠ ಸ್ವಾಗತಿಸಿದರು. ಸಚ್ಚಿದಾನಂದ ಬಿರಾದಾರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.