ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಿಂದ 13, 14ಕ್ಕೆ ವಿಧಾನಸೌಧ ಚಲೋ

Published 3 ಫೆಬ್ರುವರಿ 2024, 16:25 IST
Last Updated 3 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ಚಾಮರಾಜನಗರ: ಆಶಾ ಪಾವತಿ ಪ್ರಕ್ರಿಯೆಯಿಂದ ಆರ್‌ಸಿಎಚ್‌ ಪೋರ್ಟಲ್‌ ಅನ್ನು ಡಿ–ಲಿಂಕ್‌ ಮಾಡಬೇಕು. ಮೊಬೈಲ್‌ ಆಧಾರಿತ ಕೆಲಸಗಳನ್ನು ಮಾಡಿಸಬಾರದು ಮಾಸಿಕ ₹15 ಸಾವಿರ ಕನಿಷ್ಠ ವೇತನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತರು ಇದೇ 13 ಮತ್ತು 14ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಂಡಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಉಮಾದೇವಿ, ‘ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹5,000 ಗೌರವ ಧನ ಕೊಡುತ್ತದೆ. ಆಶಾ ಕಾರ್ಯಕರ್ತರು ಮಾಡುವ 30 ವಿಧದ ಕೆಲಸಗಳನ್ನು ಆಧರಿಸಿ ಕೇಂದ್ರ ಸರ್ಕಾರ ಇನ್ಸೆಂಟಿವ್‌ ನೀಡುತ್ತದೆ. ಇದು ಸಿಗಬೇಕಾದರೆ ಅವರು ಮಾಡಿರುವ ಕೆಲಸಗಳ ಮಾಹಿತಿಯನ್ನು ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ತಾಂತ್ರಿಕವಾಗಿ ಪರಿಣತರಲ್ಲದ ಆಶಾ ಕಾರ್ಯಕರ್ತೆಯರಲ್ಲಿ ಎಲ್ಲರಿಗೂ ಇದನ್ನು ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಬೇಕಾದ ಮೂಲಸೌಕರ್ಯಗಳೂ ಅವರ ಬಳಿ ಇಲ್ಲ. ಹೀಗಾಗಿ, ಹಲವರಿಗೆ ಹಣವೇ ಬರುವುದಿಲ್ಲ’ ಎಂದು ದೂರಿದರು. 

‘ಮಾಡಿದ ಕೆಲಸಗಳ ದತ್ತಾಂಶಗಳನ್ನು ಸರ್ಕಾರ ಕೇಳಲಿ. ನಾವು ಕೊಡುತ್ತೇವೆ. ಆದರೆ ಈ ರೂಪದಲ್ಲಿ ಅಲ್ಲ. ನಮ್ಮ ಮೇಲಿನ ಅಧಿಕಾರಿಗಳಿಗೆ ಕೊಡುತ್ತೇವೆ. ಅವರು ವರದಿ ಮಾಡಿಕೊಳ್ಳಲಿ. ಈಗ ಪೋರ್ಟಲ್‌ನಲ್ಲಿ ನಮೂದು ಮಾಡಬೇಕಾಗಿರುವುದರಿಂದ ರಾಜ್ಯದಲ್ಲಿರುವ 45 ಸಾವಿರ ಆಶಾ ಕಾರ್ಯಕರ್ತರಿಗೆ ನಷ್ಟವಾಗುತ್ತಿದೆ. ಹಾಗಾಗಿ, ಈ ವ್ಯವಸ್ಥೆಯನ್ನು ರದ್ದುಪಡಿಸಬೇಕು’ ಎಂದರು.  

‘ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಮಾಡುವ ಕೆಲಸಗಳನ್ನೂ ಆಶಾ ಕಾರ್ಯಕರ್ತೆಯರಿಂದ ಮಾಡಿಸಲಾಗುತ್ತದೆ. ಆದರೆ, ಇದಕ್ಕಾಗಿ ಅವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ಉತ್ತಮ ಸ್ಮಾರ್ಟ್‌ಫೋನ್‌ಗೆ ₹10 ಸಾವಿರದಿಂದ ₹12 ಸಾವಿರ ಇದೆ. ಬರುವ ಆರೇಳು ಸಾವಿರ ರೂಪಾಯಿ ಸಂಬಳದಲ್ಲಿ ಅದನ್ನು ಖರೀದಿಸಲು ಸಾಧ್ಯವೇ’ ಎಂದು ಉಮಾದೇವಿ ಪ್ರಶ್ನಿಸಿದರು. 

‘ಇತ್ತೀಚೆಗೆ ನಮ್ಮ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹12 ಸಾವಿರ ಸಂಬಳ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಕೆಲವು ಆಶಾ ಕಾರ್ಯಕರ್ತೆಯರ ಕುಟುಂಬಗಳಲ್ಲಿ ಬರುತ್ತಿರುವ ಸಂಬಳದ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಗಲಾಟೆಗಳೂ ಆಗಿವೆ. ರಾಜ್ಯ ಸರ್ಕಾರ ಕೊಡುವ ₹5000 ಬರುತ್ತದೆ. ಕೇಂದ್ರದ ಪ್ರೋತ್ಸಾಹ ಧನ ಯಾವಾಗಲೂ ಬರುವುದು ಗ್ಯಾರಂಟಿ ಇಲ್ಲ. ಅದರಲ್ಲಿ ಕಡಿತವೂ ಆಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಕನಿಷ್ಠ ₹15 ಸಾವಿರ ಪಾವತಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದರು. 

‘ಇದಲ್ಲದೇ ಕೋವಿಡ್‌ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುವ ಆಶಾ ಕಾರ್ಯಕರ್ತೆಯರಿಗೆ ಹಣ ಇನ್ನೂ ಸಿಕ್ಕಿಲ್ಲ. ಅದನ್ನು ಪಾವತಿಸಬೇಕು ಎಂಬುದು ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿವಾರ್ಯವಾಗಿ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಂಡಿದ್ದೇವೆ’ ಎಂದರು. 

ಸಂಘದ ಜಿಲ್ಲಾ ಅಧ್ಯಕ್ಷೆ ಕವಿತಾ ಮಾತನಾಡಿದರು. ತಾಲ್ಲೂಕು ಅಧ್ಯಕ್ಷರಾದ ರಾಣಿ, ಉಮಾ ಮಹೇಶ್ವರಿ, ಸುಜಾತ, ಮಂಜುಳಾ, ತಾಲ್ಲೂಕು ಕಾರ್ಯದರ್ಶಿ ಶಶಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT