ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯಾ ಮೈತ್ರಿಕೂಟಕ್ಕೆ ನಾಯಕನಾರು: ಬಿಜೆಪಿ ಪ್ರಶ್ನೆ

Published 12 ಏಪ್ರಿಲ್ 2024, 16:29 IST
Last Updated 12 ಏಪ್ರಿಲ್ 2024, 16:29 IST
ಅಕ್ಷರ ಗಾತ್ರ

ಚಾಮರಾಜನಗರ: ‘ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟದಲ್ಲಿ ನಾಯಕರಿಲ್ಲ. ಒಂದು ವೇಳೆ ಇದ್ದರೆ, ಯಾರೆಂದು ಸ್ಪಷ್ಟಪಡಿಸಲಿ’ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಶುಕ್ರವಾರ ಸವಾಲು ಹಾಕಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ಒಟ್ಟಾಗಿ ಮಾಡಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದಲ್ಲಿ ನಾಯಕರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಾ ಅಥವಾ ಮಮತಾ ಬ್ಯಾನರ್ಜಿಯವರಾ ಇಲ್ಲಾ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರಾ ಅಥವಾ ಡಿಎಂಕೆಯ ಸ್ಟಾಲಿನ್‌ ಅವರಾ’ ಎಂದು ಪ್ರಶ್ನಿಸಿದರು. 

‘ಇವರಲ್ಲಿ ಒಬ್ಬರ ಹೆಸರು ಕೇಳಿದರೆ ಇನ್ನೊಬ್ಬರಿಗೆ ಕೋಪ ಬರುತ್ತದೆ. ಅವರಲ್ಲೇ ಒಮ್ಮತ ಇಲ್ಲ. ನಿರ್ದಿಷ್ಟ ನಾಯಕನಿಲ್ಲದೆ, ಗೊಂದಲದ ವಾತಾವರಣ ಮೂಡಿದೆ’ ಎಂದು ಟೀಕಿಸಿದರು. 

‘ರಾಜ್ಯದಲ್ಲಿ ಕಾಂಗ್ರೆಸ್‌ನವರು ಬಿಜೆಪಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸುತ್ತಾ ಮತ ಕೇಳುತ್ತಿದ್ದಾರೆ. ಜನರು ಗ್ಯಾರಂಟಿ ಯೋಜನೆಗಳಿಗೆ ಮಾರುಹೋಗಿ ಮತ ಚಲಾಯಸಿದರೆ ಈ ಬಾರಿ ದೇಶ ಅಧೋಗತಿಗೆ ಇಳಿಯುವುದರಲ್ಲಿ ಸಂಶಯವಿಲ್ಲ’ ಎಂದರು.

‘ನರೇಂದ್ರ ಮೋದಿಯವರು ಎಲ್ಲಿಯೂ ಎಲ್ಲರ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿಲ್ಲ. ಆ ರೀತಿ ಹೇಳಿದ್ದರೆ ಅದನ್ನು ದಾಖಲೆ ಸಮೇತ ರುಜುವಾತು ಮಾಡಲಿ’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಗೆ ಜಲಜೀವನ್ ಮಿಷನ್, ಜನೌಷಧಿ ಕೇಂದ್ರ,  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ’ ಎಂದು ನೂರೊಂದು ಶೆಟ್ಟಿ ಹೇಳಿದರು. 

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಶಿವರುದ್ರಸ್ವಾಮಿ, ಸಹ ವಕ್ತಾರ ಎನ್.ಮಂಜುನಾಥ್, ಮಾಧ್ಯಮ ಸಂಚಾಲಕ ಅಶ್ವಿನ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT