ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತರಿಗೆ ಸಿದ್ದರಾಮಯ್ಯ ಅಪಾಯಕಾರಿ: ಪ್ರಕಾಶ್‌

Published 14 ಮಾರ್ಚ್ 2024, 14:09 IST
Last Updated 14 ಮಾರ್ಚ್ 2024, 14:09 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿಯವರು ಸಂವಿಧಾನ ಉಳಿಸುವುದಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಪ್ರಕಾರ ನಡೆದುಕೊಂಡಿದ್ದಾರೆಯೇ? ನೈತಿಕತೆ ಇದ್ದರೆ ಅವರು ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಬಿಟ್ಟುಕೊಡಲಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್‌ ಗುರುವಾರ ಸವಾಲು ಹಾಕಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಇತ್ತೀಚೆಗೆ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಅವರೀಗ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡುತ್ತಿಲ್ಲವೇ? ದೇಶ, ರಾಜ್ಯವನ್ನು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ ಸಂವಿಧಾನದ ಆಶಯದಂತೆ ಕೆಲಸ ಮಾಡಿದೆಯೇ? ಶೋಷಿತರಿಗೆ ರಾಜಕೀಯ ಸ್ಥಾನಮಾನ ಸಿಗಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನ ಹೇಳುತ್ತದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು. 

‘ಸಂಸದ ಅನಂತಕುಮಾರ ಹೆಗಡೆ ಅವರು ಈ ಬಾರಿ ಸಂವಿಧಾನ ಬದಲಿಸುವ ಹೇಳಿಕೆ ಕೊಟ್ಟಿರಲಿಲ್ಲ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಪಡಿಸುವಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಂವಿಧಾನ ತಿದ್ದುಪಡಿ ಮಾಡಬೇಕು. ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಪಾಲಿಗೆ ಅನಂತಕುಮಾರ ಹೆಗಡೆಯವರಿಗಿಂತಲೂ ಅಪಾಯಕಾರಿ. ದಲಿತ ಮುಖಂಡರನ್ನು ಅವರು ತುಳಿಯುತ್ತಲೇ ಬಂದಿದ್ದಾರೆ. ಮುಖ್ಯಮಂತ್ರಿಯಾಗಲೂ ಅವಕಾಶ ಕೊಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರನ್ನು ರಾಜಕೀಯವಾಗಿ ಮುಗಿಸಲಿದ್ದಾರೆ’ ಎಂದರು.

‘ಅವರು ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಮತ್ತೆ ಅವರೇ ಯಾಕೆ ಮುಂದುವರಿಯಬೇಕು? ಸಂವಿಧಾನದ ಆಶಯದಂತೆ ದಲಿತರಿಗೆ ಹುದ್ದೆಯನ್ನು ಬಿಟ್ಟುಕೊಡಲಿ’ ಎಂದು ಆಗ್ರಹಿಸಿದರು. 

ಬಿಜೆಪಿ ಜಿಲ್ಲಾ ವಕ್ತಾರ ಕೆರೆಹಳ್ಳಿ ಶಿವರುದ್ರಸ್ವಾಮಿ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಎಸ್‌ಸಿ ಮೋರ್ಚಾ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮುಕುಂದ ಮೂರ್ತಿ, ಮುಖಂಡರಾದ ನಾಗರಾಜ್‌, ವೇಣುಗೋಪಾಲ್‌, ಮಾಧ್ಯಮ ಸಹ ಸಂಚಾಲಕ ಅಶ್ವಿನ್‌ ಭಾಗವಹಿಸಿದ್ದರು.

‘ಪಕ್ಷದಿಂದ ಹೊರ ಹಾಕಿ’

‘ಸಂಸದ ಅನಂತಕುಮಾರ ಹೆಗಡೆಯವರು ಸಂವಿಧಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ವರಿಷ್ಠರು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪಕ್ಷದಿಂದ ಹೊರ ಹಾಕಬೇಕು’ ಎಂದು ಮೂಡ್ನಾಕೂಡು ಪ್ರಕಾಶ್‌ ಆಗ್ರಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT