ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಸೆಸ್ಕ್ ಇಲಾಖೆ ವಿರುದ್ಧ ದೂರಿನ ಸುರಿಮಳೆ

Published 18 ಡಿಸೆಂಬರ್ 2023, 13:36 IST
Last Updated 18 ಡಿಸೆಂಬರ್ 2023, 13:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಸೆಸ್ಕ್ ಕಚೇರಿಯಲ್ಲಿ ಸೋಮವಾರ ಚಾಮರಾಜನಗರ ಹಾಗೂ ಕೊಡಗು ವೃತ್ತದ ಅಧೀಕ್ಷಕ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರಿನ ಸುರಿ ಮಳೆಗೈದರು.

ಮೋಳೆ ನಟರಾಜು ಮಾತನಾಡಿ, ‘2018ರಲ್ಲಿ ಉಪ್ಪಾರ ಮೋಳೆ ಗ್ರಾಮದಲ್ಲಿ 1 ಎಕರೆ ಕಬ್ಬು ಹಾಗೂ ಮಹದೇವಶೆಟ್ಟಿ ಅವರ 50 ಸೆಂಟ್ ಕಬ್ಬು ವಿದ್ಯುತ್ ತಗುಲಿ ನಾಶವಾಗಿತ್ತು. ಪರಿಹಾರಕ್ಕಾಗಿ ಅರ್ಜಿಸಲ್ಲಿಸಿದರೂ ಇನ್ನು ಪರಿಹಾರ ದೊರೆತಿಲ್ಲ. ಪರಿಹಾರಕ್ಕೆ ಮೈಸೂರಿನ ಸೆಸ್ಕ್ ಕಚೇರಿಗೆ ಅಲೆದು ಸಾಕಾಗಿದೆ. 4 ಬಾರಿ ಜನ ಸಂಪರ್ಕ ಸಭೆಯಲ್ಲಿ ಮನವಿ ಮಾಡಿದ್ದೇನೆ. ಇನ್ನು ಪರಿಹಾರ ದೊರೆತಿಲ್ಲ’ ಎಂದರು.

ಇದಕ್ಕೆ ಉತ್ತರಿಸಿದ ಅಧೀಕ್ಷಕ,‘ಈ ಬಗ್ಗೆ ಪರಿಶೀಲಿಸುತ್ತೇನೆ ಜೊತೆಗೆ ಇಂತಹ ಸಮಸ್ಯೆಗಳು ಬೇಗನೆ ಪರಿಹಾರವಾಗಬೇಕು ಇಲ್ಲದಿದ್ದರೆ ಸುಮ್ಮನಿರುವುದಿಲ್ಲ’ ಎಂದರು.

ತಾಲ್ಲೂಕಿನ ಸತ್ತೇಗಾಲ ಗ್ರಾಮದ ನಿವಾಸಿ ಶಶಿ ಮಾತನಾಡಿ, ‘ಜಾಗೇರಿಯ ಸರ್ವೆ ನಂ 174 ಪ್ರದೇಶಕ್ಕೆ ಸೆಸ್ಕ್ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದೆ. ಆದರೆ, ರೈತರು ಸಮರ್ಪಕವಾಗಿ ವಿದ್ಯುತ್ ಕೇಳಿದರೆ ಕೊಡುವುದಿಲ್ಲ. ನಾನು ಹಲವು ತಿಂಗಳ ಹಿಂದೆಯೇ, ಟಿಸಿ ಅಳವಡಿಕೆ ಅರ್ಜಿ ಸಲ್ಲಿಸಿದ್ದು ಹಣವನ್ನೂ ಕಟ್ಟಿದ್ದೇನೆ, ಇನ್ನೂ ಟಿಸಿ ಅಳವಡಿಸಿಲ್ಲ. ಈ ಬಗ್ಗೆ ಜೆಇ ಅವರನ್ನು ಹಲವು ಬಾರಿ ಕೇಳಿದರೂ ಉಡಾಫೆ ಉತ್ತರ ನೀಡುತ್ತಾರೆ’ ಎಂದು ದೂರಿದರು.

ಇದಕ್ಕೆ ಎಇಇ ಲಿಂಗರಾಜು ಪ್ರತಿಕ್ರಿಯಿಸಿ, ‘ಈಗಾಗಲೇ ಕ್ರೀಯಾ ಯೋಜನೆ ರೂಪಿಸಲಾಗಿದ್ದು ಜರೂರಾಗಿ ಟಿಸಿ ಅಳವಡಿಸಲಾಗುತ್ತದೆ’ ಎಂದರು.

ಹೊಸ ಅಣಗಳ್ಳಿ ನಿವಾಸಿ ಶಂಕರ್ ಮಾತನಾಡಿ, ‘ಇತ್ತೀಚೆಗಷ್ಟೆ ಮನೆ ವಿದ್ಯುತ್ ಬಿಲ್ ₹2800 ಹಣ ಪಾವತಿ ಮಾಡುವಂತೆ ಸೆಸ್ಕ್ ನೋಟಿಸ್ ಬಂದಿತ್ತು. ಅದರಂತೆ ಹಣವನ್ನು ಕಟ್ಟಿದ್ದೇವೆ.  2 ತಿಂಗಳ ಬಳಿಕ ₹4 ಸಾವಿರ ಬಾಕಿ ವಿದ್ಯುತ್ ಶುಲ್ಕ ಕಟ್ಟಿ ಎಂದು ರಶೀತಿ ನೀಡಿದ್ದೀರಿ’ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಸರಿಪಡಿಸುವುದಾಗಿ ಅಧೀಕ್ಷಕ ಸೋಮಶೇಖರ್ ಭರವಸೆ ನೀಡಿದರು.

ಭೀಮನಗರದ ಹೊಸಬೀದಿ ನಿವಾಸಿ ಕೃಷ್ಣರಾಜ್ ಮಾತನಾಡಿ, ‘ನಗರ ವ್ಯಾಪ್ತಿಯ ಕೃಷಿ ಭೂಮಿಗೆ ವಿದ್ಯುತ್ ಸರಬರಾಜು ಮಾಡುವಾಗ ತಾರತಮ್ಯ ಮಾಡಲಾಗುತ್ತಿದೆ. ಬೂದಿತಿಟ್ಟು, ಶಂಕನಪುರ, ಮುಡಿಗುಂಡ, ಭೀಮನಗರ, ಹೊಸ ಅಣಗಳ್ಳಿ ಇನ್ನಿತರ ಕಡೆಗೆ 24 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಹರಳೆ ಐಪಿ ಸೆಟ್ ಜಮೀನುಗಳಿಗೆ ಕೇವಲ 7 ಗಂಟೆ ನೀಡಲಾಗುತ್ತಿದೆ. ಈ ತಾರತಮ್ಯ ಏಕೆ’ ಎಂದು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಅಧೀಕ್ಷಕರು ಪ್ರತಿಕ್ರಿಯಿಸಿ,‘ಇನ್ನೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ. ಈ ತೊಂದರೆ ಟೌನ್ ವ್ಯಾಪ್ತಿಯಲ್ಲಿ ಎಲ್ಲೆಡೆ ಇದೆ’ ಎಂದರು.

ವಿದ್ಯುತ್ ಬಿಲ್ ಹೆಚ್ಚಳ, ಕಂಬಗಳ ಅಳವಡಿಕೆ, ಟಿಸಿ ಅಳವಡಿಕೆ ಇನ್ನಿತರ ಸಮಸ್ಯೆಗಳ 25 ದೂರು ಅರ್ಜಿಗಳು ಸ್ವೀಕಾರಗೊಂಡವು. ಈ ಸಂದರ್ಭದಲ್ಲಿ ಸೆಸ್ಕ್ ಲೆಕ್ಕಾಧಿಕಾರಿ ವಿನೋದ್, ಸೆಸ್ಕ್ ಎಇಇ ರಾಜು, ಯಳಂದೂರು ಸೆಸ್ಕ್ ಎಇಇ ಲಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT