ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ತ್ವರಿತ ಪೂರ್ವ ಸಿದ್ಧತೆಗೆ ಸೂಚನೆ

ನೋಡೆಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್‌
Published 14 ಮಾರ್ಚ್ 2024, 6:32 IST
Last Updated 14 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಚುನಾವಣಾ ಕಾರ್ಯಗಳಿಗೆ ನಿಯೋಜಿತರಾಗಿರುವ ವಿವಿಧ ನೋಡೆಲ್ ಅಧಿಕಾರಿಗಳು ಪೂರ್ವ ಸಿದ್ಧತಾ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬುಧವಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗಾಗಿ ನಿಯೋಜಿತರಾಗಿರುವ ಜಿಲ್ಲಾ ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಚುನಾವಣಾ ಸಂಬಂಧಿ ಕರ್ತವ್ಯ ನಿರ್ವಹಣೆಗೆ 16 ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಚುನಾವಣೆ ಘೋಷಣೆಯಾದ ಕೂಡಲೇ ನಿರ್ವಹಿಸಬೇಕಿರುವ ಕರ್ತವ್ಯಗಳ ಕುರಿತ ಪೂರ್ವ ಸಿದ್ಧತಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು. 

‘ಮತಗಟ್ಟೆಗಳ ಭೌತಿಕ ಪರಿಶೀಲನೆ, ಮತಗಟ್ಟೆ ಸಿಬ್ಬಂದಿ ನಿಯೋಜನೆ, ಚುನಾವಣೆಗೆ ಅಗತ್ಯ ಬೀಳಬಹುದಾದ ವಾಹನಗಳ ಬೇಡಿಕೆ, ಇನ್ನಿತರ ಬಹುಮುಖ್ಯ ಸಿದ್ಧತೆಗಳನ್ನು ಪರಿಪೂರ್ಣಗೊಳಿಸಬೇಕು. ಸಮರ್ಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು’ ಎಂದರು.

ಮಾದರಿ ನೀತಿ ಸಂಹಿತೆ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಂತರ ಜಿಲ್ಲಾ, ರಾಜ್ಯ, ಗಡಿ ಚೆಕ್ ಪೋಸ್ಟ್‌ಗಳನ್ನು ತೆರೆದು ಕಾರ್ಯನಿರ್ವಹಿಸಬೇಕಿದೆ. ಚೆಕ್‌ಪೋಸ್ಟ್‌ಗಳಲ್ಲಿ ಕುಡಿಯುವ ನೀರು, ಹತ್ತಿರದಲ್ಲಿಯೇ ಶೌಚಾಲಯ, ಇನ್ನಿತರ ಮೂಲ ಸೌಕರ್ಯಗಳು ಇರಬೇಕು. ಚೆಕ್‌ಪೋಸ್ಟ್‌ಗಳು 24x7 ಕಾರ್ಯ ನಿರ್ವಹಿಸಬೇಕಿದೆ. ಬಿಸಿಲ ಬೇಗೆಯೂ ಹೆಚ್ಚಿದೆ. ಹೀಗಾಗಿ ಉತ್ತಮ ಗುಣಮಟ್ಟದ ನೆರಳಿನ ವ್ಯವಸ್ಥೆ ಇರಬೇಕಿದೆ. ಈ ಎಲ್ಲ ಕೆಲಸಗಳನ್ನು ಬೇಗ ಮಾಡಬೇಕು’ ಎಂದು ಸೂಚಿಸಿದರು. 

‘ಮತದಾನ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಗಳು ವ್ಯಾಪಕವಾಗಿ ನಡೆಸಬೇಕು. ವಿಭಿನ್ನ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿಯೂ ಆಯೋಜಿಸಿ ಮತದಾನದ ಮಹತ್ವ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಯುವಜನರಲ್ಲಿ ವಿಶೇಷವಾಗಿ ಮತದಾನದ ಬಗ್ಗೆ ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು. ಕಳೆದ ಬಾರಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿರುವ ಮತಗಟ್ಟೆಗಳ ವ್ಯಾಪ್ತಿಯ ಪ್ರದೇಶದಲ್ಲಿ ಹೆಚ್ಚು ಮತದಾನ ಜಾಗೃತಿ ಮೂಡಿಸಬೇಕು’ ಎಂದು ಶಿಲ್ಪಾ ನಾಗ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರರು, ನೋಡೆಲ್ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT