ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ದಿಢೀರ್ ಏರಿಕೆ ಕಂಡ ನೀಲಿ ಬದನೆ!

ದರ ಹೆಚ್ಚಾದರೂ ಲಾಭ ಮರೀಚಿಕೆ: ಬದನೆ ಬೆಳೆಗಾರರ ಸಂಕಷ್ಟ
Published 14 ಅಕ್ಟೋಬರ್ 2023, 12:46 IST
Last Updated 14 ಅಕ್ಟೋಬರ್ 2023, 12:46 IST
ಅಕ್ಷರ ಗಾತ್ರ

ಯಳಂದೂರು: ತಿಂಗಳಿಂದ ಕಡಿಮೆ ಬೆಲೆ ಮತ್ತು ಬೇಡಿಕೆ ಇಲ್ಲದೆ ಕಂಗೆಟ್ಟಿದ್ದ ನೀಲಿ ಬದನೆ ಬೆಳೆಗಾರರು, ದಸರಾ ಸಮಯದಲ್ಲಿ ಬೇಡಿಕೆ ಹೆಚ್ಚಾಗಿರುವ ಖುಷಿಯಲ್ಲಿದ್ದಾರೆ. ಆದರೆ, ನಿರ್ವಹಣಾ ವೆಚ್ಚ ಹಾಗೂ ಮೈಸೂರು ಮಾರುಕಟ್ಟೆಗೆ ಸಾಗಿಸಬೇಕಾದ ಅನಿವಾರ್ಯತೆಯಿಂದಾಗಿ ಅವರ ಸರಾಸರಿ ಲಾಭ ತಗ್ಗಿಸಿದೆ.

ತಾಲ್ಲೂಕಿನಲ್ಲಿ ಮಳೆ ಕೊರತೆಯ ನಡುವೆಯೇ ರೈತರು ಬದನೆ, ಟೊಮೆಟೊ ಮತ್ತು ಮಂಗಳೂರು ಸೌತೆ ತರಕಾರಿಗಳನ್ನು ಬೆಳೆದಿದ್ದಾರೆ. ಇವುಗಳ ಬೆಲೆ ಕೆಲವು ವಾರಗಳಿಂದ ದಿಢೀರ್ ಕುಸಿತ ಕಂಡಿತ್ತು. ಹಾಗಾಗಿ, ಬಹುತೇಕ ಕೃಷಿಕರು ಇವುಗಳ ಕೊಯ್ಲು ಮಾಡದೆ ಗಿಡದಲ್ಲಿ ಬಿಟ್ಟಿದ್ದರು.

ತೀವ್ರ ಬರ, ನೀರಿನ ಕೊರತೆ ಮತ್ತು ರೋಗ ಬಾಧೆಯಿಂದ ಬದನೆ ಮತ್ತು ಟೊಮೆಟೊ ನಿರ್ಲಕ್ಷಿಸಿದ್ದರು. ಮಹಾಲಯ ಅಮಾವಾಸ್ಯೆ, ಮಹಾನವಮಿ, ಆಯುಧಪೂಜೆ ಮತ್ತು ವಿಜಯದಶಮಿ ಕಾರಣಕ್ಕೆ ನಿಧಾನಕ್ಕೆ ತರಕಾರಿಗಳ ಧಾರಣೆ ಏರಿಕೆಯಾಗುತ್ತಿದೆ. ಈ ಕಾರಣದಿಂದ ಬೆಳೆಗಾರರು ಅಳಿದುಳಿದ ಫಸಲು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

‘ಬದನೆ ಮೂರು ತಿಂಗಳ ಬೆಳೆ. ಮುಕ್ಕಾಲು ಎಕರೆ ಪ್ರದೇಶದಲ್ಲಿ ಕೊಯ್ಲಿಗೆ ಬಂದಿದೆ. ಖರ್ಚು ₹50 ಸಾವಿರ ದಾಟಿದೆ. ಮಳೆ ಕೊರತೆ ಇಳುವರಿ ತಗ್ಗಿಸಿದೆ. ಕೀಟಬಾಧೆಯೂ ಇದ್ದು, ಕೀಟನಾಶಕದ ಖರ್ಚು ಹೆಚ್ಚಿಸಿದೆ. ಆರಂಭದಲ್ಲಿ ಕೆಜಿಗೆ ₹3ರಂತೆ ಸ್ಥಳೀಯ ಮಾರಾಟಗಾರರು ಕೊಂಡರು. ಇದರಿಂದ ಹಾಕಿದ ಬಂಡವಾಳ ಕೈಸೇರಲಿಲ್ಲ. ಹಾಗಾಗಿ ಗಿಡಗಳ ಪೋಷಣೆ ಮಾಡದೆ ಬಿಟ್ಟಿದ್ದೆ. ಈಗ ಮೈಸೂರು ಮಾರುಕಟ್ಟೆಯಲ್ಲಿ ಗುಣಮಟ್ಟದ ಬದನೆ ಕೆ.ಜಿಗೆ ₹15ರ ದರದಲ್ಲಿ ಮಾರಾಟವಾಗುತ್ತಿದೆ’ ಎಂದು ಅಂಬಳೆ ಕೃಷಿಕ ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಹೆಚ್ಚಿದ ಖರ್ಚು

‘ಮೈಸೂರು ಮಾರುಕಟ್ಟೆಗೆ ಸಾಗಣೆ ಮಾಡಲು ಗೂಡ್ಸ್‌ ಆಟೊಗೆ ₹1,600 ಭರಿಸಬೇಕು. ಮಾರಾಟದ ಸಮಯದಲ್ಲಿ ₹100ಕ್ಕೆ ₹10 ಕಮೀಷನ್ ಕೊಡಬೇಕು. ಕೂಲಿ ನಿರ್ವಹಣಾ ವೆಚ್ಚ ದಿನಕ್ಕೆ ₹1000 ಕಳೆಯಬೇಕು. ಬೇಸಾಯಗಾರರು ಇಷ್ಟೆಲ್ಲ ಕಷ್ಟಪಟ್ಟರೂ ಮಾರಾಟಕ್ಕೆ ಪೂರೈಸಿದರೂ ಗುಣಮಟ್ಟದ ನೆಪದಲ್ಲಿ ಬದನೆಯನ್ನು ವರ್ಗೀಕರಿಸಿ ಸರಾಸರಿ ಬೆಲೆಯನ್ನು ಕುಗ್ಗಿಸಲಾಗುತ್ತದೆ’ ಎಂದು ಎಂದು ಬೆಳೆಗಾರರು ದೂರಿದರು.

ದಸರಾ ಬೆಲೆ ಏರುಗತಿ

‘ನಾಡಹಬ್ಬ ದಸರಾ ಕಾರಣದಿಂದ ಎರಡು ವಾರಕ್ಕೆ ಮೊದಲೇ ತರಕಾರಿ ಧಾರಣೆ ನಿಧಾನಕ್ಕೆ ಹೆಚ್ಚಳವಾಗುತ್ತಿದೆ. ಕುಸಿದ ಹೂಗಳ ಬೆಲೆಯಲ್ಲೂ ಏರಿಕೆ ಕಂಡು ಬರುತ್ತಿದೆ. ರೈತರು ಉತ್ತಮ ದರ್ಜೆಯ ತರಕಾರಿಗಳನ್ನು ಮೂಲದಲ್ಲಿ ವಿಂಗಡಿಸಿ ಮಾರುಕಟ್ಟೆಗೆ ಸಾಗಿಸಬೇಕು’ ಎಂದು ಸಲಹೆ ನೀಡುತ್ತಾರೆ ಅಧಿಕಾರಿಗಳು.  ‘ತಾಲ್ಲೂಕಿನಲ್ಲಿ ತುಂತುರು ಮಳೆ ಸುರಿಯುತ್ತಿದ್ದು ಬೆಳೆ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಗಿಡಕ್ಕೆ ಔಷಧ ಸಿಂಪಡಿಸಿದ ತಕ್ಷಣ ಬೆಳೆ ಕೊಯ್ಲು ಮಾಡದೆ ಕಾಯಿಪಲ್ಯಗಳಿಗೆ ಕೀಟನಾಶಕ ಸೇರದಂತೆ ಎಚ್ಚರ ವಹಿಸಬೇಕು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT