ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ ತಹಶೀಲ್ದಾರ್ ಪುಷ್ಪಾವತಿ ಅಮಾನತು

ಅಗರ ಹೋಬಳಿ ವ್ಯಾಪ್ತಿಯಲ್ಲಿ ಅನರ್ಹರಿಗೆ ಪಿಂಚಣಿ ಪ್ರಕರಣ, ಪ್ರಾದೇಶಿಕ ಆಯುಕ್ತ ಆದೇಶ
Published 30 ಮೇ 2024, 5:32 IST
Last Updated 30 ಮೇ 2024, 5:32 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕು ಅಗರ ಹೋಬಳಿ ವ್ಯಾಪ್ತಿಯಲ್ಲಿ ಅನರ್ಹ ಪಿಂಚಿಣಿದಾರರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಅಗರ ನಾಡಕಚೇರಿ ಉಪತಹಶೀಲ್ದಾರ್ ಸಿ.ಪುಷ್ಪಾವತಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಮೈಸೂರು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.  

ಅಗರ ಹೋಬಳಿಯಲ್ಲಿ ನಕಲಿ ಅಥವಾ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಪಡೆಯುತ್ತಿದ್ದ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖಾ ತಂಡವನ್ನು ನೇಮಿಸಿ  ಅವರು ಆದೇಶ ಹೊರಡಿಸಿದ್ದರು. ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದು, ಆರೋಪಗಳು ಸಾಬೀತಾಗಿದ್ದವು. 

ಬಳಿಕ  ರಾಜಸ್ವ ನಿರೀಕ್ಷಕ ಮತ್ತು ನಾಲ್ವರು ಗ್ರಾಮ ಆಡಳಿತ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಆದೇಶಿಸಿದ್ದರು. ಉಪ ತಹಶೀಲ್ದಾರ್‌ ಪುಷ್ಪಾವತಿ ಅವರ ವಿರುದ್ಧದ ಆರೋಪವೂ ಸಾಬೀತಾಗಿತ್ತು. ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದರು. 

ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾಗಿದ್ದ 73 ವೃದ್ಧಾಪ್ಯ ವೇತನ ಪಿಂಚಣಿ ಕಡತ ಸೇರಿ 78 ಕಡತಗಳನ್ನು ಮಾರ್ಚ್‌ 23ರಂದು ಅಧಿಕಾರಿಗಳು ಪರಿಶೀಲಿಸಿದ್ದರು. ಐದು ಅಂಗವಿಕಲ ವೇತನ ಪ್ರಕರಣ ಬಿಟ್ಟು, 73 ವೃದ್ಧಾಪ್ಯ ವೇತನ ಪಿಂಚಣಿ ಕಡತಗಳಲ್ಲಿ ಅರ್ಜಿದಾರರ ವಯಸ್ಸಿಗೆ ಸಂಬಂಧಿಸಿದಂತೆ ವೈದ್ಯರ ದೃಢೀಕರಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ದಾಖಲೆಗಳಲ್ಲಿ ಫಲಾನುಭವಿಗಳ ವಯಸ್ಸು ಅರ್ಹ ವಯಸ್ಸಿಗಿಂತಲೂ ಕಡಿಮೆ ಇದ್ದುದು ಕಂಡು ಬಂದಿತ್ತು. 

‘ಉಪತಹಶೀಲ್ದಾರ್ ಸಿ.ಪುಷ್ಪಾವತಿ ಅವರು ಪಿಂಚಣಿ ಕಡತಗಳಲ್ಲಿ ಕಾರ್ಯ ವಿಧಾನ ಲೋಪ ಮಾಡಿ, ಮದ್ದೂರು, ಕೆ.ಹೊಸೂರು, ಕೆಸ್ತೂರು, ಬಸಾಪುರ, ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ, ಕಿನಕಳ್ಳಿ, ಅಗರ, ಮಲ್ಲಿಗೆಹಳ್ಳಿ, ಗೌಡಹಳ್ಳಿ, ಗಣಿಗನೂರು ಗ್ರಾಮಗಳ ಅನರ್ಹರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿ ₹2,53,200 ರಷ್ಟು ಆರ್ಥಿಕ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ನೋಟಿಸ್‌ಗೆ ಪುಷ್ಪಾವತಿ ನೀಡಿರುವ ಸಮಜಾಯಿಷಿ ಸಮರ್ಪಕವಾಗಿ ಇಲ್ಲದ ಕಾರಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಅವರು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT