ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವ ಸರ್ವಕಾಲಕ್ಕೂ ಯೋಗ್ಯವಾದ ವ್ಯವಸ್ಥೆ: ವೆಂಕಟರಾಜು

ಸರ್ವೋದಯ ಸಾಮರಸ್ಯ ವೇದಿಕೆಯಿಂದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಚಿಂತನಾ ಸಭೆ ಆಯೋಜನೆ
Published 5 ಡಿಸೆಂಬರ್ 2023, 16:10 IST
Last Updated 5 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ಚಾಮರಾಜನಗರ: 'ಸರ್ಕಾರಗಳ ನಿಲುವು ಸಂವಿಧಾನ ಬದ್ಧವಾಗಿರಬೇಕು. ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ದೇಶದ ಸಂವಿಧಾನದ ಮೂಲ ಆಶಯ, ತತ್ವ ಸಿದ್ಧಾಂತಕ್ಕೆ ಅನುಸಾರವಾಗಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಮತ್ತು ಅಭದ್ರತೆ ಹೊಂದಿರುವವರಿಗೆ ಸರ್ಕಾರ ಆಸರೆಯಾಗಬೇಕು’ ಎಂದು ರಂಗಕರ್ಮಿ ಕೆ.ವೆಂಕಟರಾಜು ಮಂಗಳವಾರ ಅಭಿಪ್ರಾಯಪಟ್ಟರು. 

ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಸರ್ವೋದಯ ಸಾಮರಸ್ಯ ವೇದಿಕೆಯು ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತ ಚಿಂತನಾಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಹಾಗೂ ಬಂಧುತ್ವ ಪ್ರಜಾಪ್ರಭುತ್ವದ ಸಿದ್ದಾಂತ. ಪ್ರಜಾಪ್ರಭುತ್ವವು  ಸರ್ವಕಾಲಕ್ಕೂ ಯೋಗ್ಯವಾದ, ಉತ್ತಮವಾದ ವ್ಯವಸ್ಥೆ. ಅದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಅವರು ಪ್ರತಿಪಾದಿಸಿದರು. 

‘ಯಾವುದೇ ಪಕ್ಷ ಚುನಾವಣೆಯಲ್ಲಿ ಬಹುಮತ ಅಥವಾ ಅಲ್ಪಮತಗಳಿಸಲಿ. ಆ ಸರ್ಕಾರವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸಬೇಕು. ನಮ್ಮ ಸಂವಿಧಾನ ಆಶಯವೂ ಇದುವೇ’ ಎಂದು ವೆಂಕಟರಾಜು ಹೇಳಿದರು. 

ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್.ರಾಜು ಮಾತನಾಡಿ, ‘ಸಂವಿಧಾನ ನಮ್ಮ ದೇಶದ ಪವಿತ್ರಗ್ರಂಥವಾಗಿದ್ದು, ಸಮಾಜದಲ್ಲಿ ಹೇಗೆ ನಾವು ಸಾಮರಸ್ಯದಿಂದ ಬದುಕಬೇಕು ಎಂಬ ಜಾಗೃತಿಯನ್ನು ಅದು ಮೂಡಿಸುತ್ತದೆ. ಸಂವಿಧಾನದ 14ನೇ ಪರಿಚ್ಛೇದವು ಕಾನೂನಿನದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರೆ, 15ನೇ ಪರಿಚ್ಛೇದ ಲಿಂಗತಾರತಮ್ಯ ಮಾಡದಂತೆ ಹೇಳುತ್ತದೆ. 16ನೇ ಪರಿಚ್ಛೇದ ಸಮಾನತೆ ಹಕ್ಕಿನ ಬಗ್ಗೆ ಹೇಳುತ್ತದೆ. 17ನೇ ಪರಿಚ್ಛೇದ ಅಸ್ಪೃಶ್ಯತೆಯ ವಿರುದ್ಧವಾಗಿದೆ. 17 ನೇ ಪರಿಚ್ಛೇದ ವಾಕ್ ಸ್ವಾತಂತ್ರ್ಯ ನೀಡಿದರೆ, 325ನೇ ಪರಿಚ್ಛೇದವು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದೆ.  ಚುನಾವಣೆಯಲ್ಲಿ ನಿರ್ಭೀತಿಯಿಂದ ಆ ಹಕ್ಕನ್ನು ಚಲಾವಣೆ ಮಾಡಬೇಕು ಎಂದು ಸಂವಿಧಾನ ಹೇಳಿದೆ’ ಎಂದು ವಿವರಿಸಿದರು. 

ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಾದಿ ಶರಣರು ಇಂದಿನ ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಸೇರಿದಂತೆ ಇತರೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಸಂವಿಧಾನದ ಚೌಕಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಿದರೆ, ಅದು ಅಂಬೇಡ್ಕರ್‌ ಅವರಿಗೆ ಸಲ್ಲಿಸುವ ಗೌರವ’ ಎಂದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಮಾತನಾಡಿ, ‘ಸಾಮರಸ್ಯ ದೀಪವನ್ನು ಹಚ್ಚಿ ಎಲ್ಲರಿಗೂ ಬೆಳಕು ನೀಡುವಂತಹ ವಾತಾವರಣವನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ಅಂಬೇಡ್ಕರ್ ನೀಡಿರುವ ಸಂವಿಧಾನವು ಜ್ಯೋತಿಯಂತೆ. ಅದು ಪ್ರಜ್ವಲಿಸಿ ಎಲ್ಲರಿಗೂ ಬೆಳಕು ನೀಡುವ ಜೊತೆಗೆ ಜನರ ಬದುಕು ಬದಲಿಸುವ ಶಕ್ತಿ ಹೊಂದಿದೆ’ ಎಂದು ಬಣ್ಣಿಸಿದರು. 

ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಮುಖಂಡರಾದ ಸುರೇಶ್ ನಾಯಕ, ಬಸವರಾಜು, ಜಿ.ರಾಜಪ್ಪ, ಮಂಜುಳ, ಮಲ್ಲಣ್ಣ, ತೊರಹಳ್ಳಿ ಕುಮಾರ್, ಎಪಿಎಂಸಿ ಅಧ್ಯಕ್ಷ ಮನೋಜ್ ಕುಮಾರ್, ಕೂಡ್ಲೂರು ಶ್ರೀಧರಮೂರ್ತಿ, ಆಲೂರುಮಲ್ಲು, ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ.ಮಂಜುನಾಥ್,  ಸೇರಿದಂತೆ ಸರ್ವೋದಯ ಸಾಮರಸ್ಯ ವೇದಿಕೆಯ ಪದಾಧಿಕಾರಿಗಳು, ಸಂಚಾಲಕರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT