ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ : ಕಲ್ಯಾಣಿ ಕಲುಷಿತ!

ದೊಡ್ಡಕೆರೆ ಕಾಮಗಾರಿಗೆ ಆಮೆಗತಿ, ಈ ವರ್ಷ ನಡೆಯಲಿದೆಯೇ ತೆಪ್ಪೋತ್ಸವ?
ಜಿ.ಪ್ರದೀಪ್‌ಕುಮಾರ್‌
Published 20 ಫೆಬ್ರುವರಿ 2024, 6:28 IST
Last Updated 20 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇತ್ತ ಈ ಕಲ್ಯಾಣಿಯ ಮಗ್ಗುಲಲ್ಲೇ ಕೊಳಚೆ ನೀರು ನಿಂತುಕೊಳ್ಳುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳೂ ಸೇರಿ ಆ ಪ್ರದೇಶ ಅನೈರ್ಮಲ್ಯದ ಗೂಡಾಗಿದೆ. 

ಮಹದೇಶ್ವರ ಬೆಟ್ಟದ ಮಜ್ಜನ ಬಾವಿ ಬಳಿ ದೊಡ್ಡಕೆರೆ ಇದೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು 2021ರ ಸಾಲಿನಲ್ಲಿ ದೊಡ್ಡಕೆರೆ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು. ₹4.80 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆರಂಭದಿಂದಲೇ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈಗ ಕಲ್ಯಾಣಿ ಹಂತದಲ್ಲಿ ಕಲ್ಲು ಜೋಡಣೆ ಕೆಲಸ ನಡೆಯುತ್ತಿದೆ.

ಇದೇ ಕೆರೆಯಲ್ಲಿ ವರ್ಷಕ್ಕೆ ಮೂರು ಬಾರಿ ಮಾದಪ್ಪನ ತೆಪ್ಪೋತ್ಸವ ನಡೆಯುತ್ತದೆ. ಕಾಮಗಾರಿ ಮುಕ್ತಾಯವಾಗದಿರುವುದರಿಂದ ಮೂರು ವರ್ಷಗಳಿಂದ ತೆಪ್ಪೋತ್ಸವ ನಡೆಯುತ್ತಿಲ್ಲ. 

ಕೊಳಚೆಯೊಂದಿಗೆ ಪ್ಲಾಸ್ಟಿಕ್‌: ಬೆಟ್ಟದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದರಿಂದ ಕೊಳಚೆ ನೀರು ಹರಿದು ಹೋಗಲು ಸರಿಯಾದ ಜಾಗ ಇಲ್ಲ. ಈ ದೊಡ್ಡ ಕೆರೆಯ ಬಳಿ ಗಲೀಜು ನೀರು ನಿಂತಿದೆ. ಇಲ್ಲಿ ಪ್ಲಾಸ್ಟಿಕ್‌, ಕಸ ಕಡ್ಡಿಗಳೂ ಕಂಡು ಬರುತ್ತಿದೆ. 

ಬಸ್ ನಿಲ್ದಾಣ ಬಳಿಯಿರುವ ಹೋಟೆಲ್‌ಗಳು, ಪ್ರಾಧಿಕಾರಕ್ಕೆ ಸೇರಿದ ಜೇನುಮಲೆ ಭವನ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ 512 ವಸತಿಗೃಹ ನಿರ್ಮಾಣಕ್ಕೆ ಆಗಮಿಸಿದ ಕಾರ್ಮಿಕರು ಬಳಸುವ ನೀರು ಕೂಡ ದೊಡ್ಡಕೆರೆ ಬಳಿ ಸೇರುತ್ತಿದೆ. ಇದರಿಂದಾಗಿ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಬಾವಿಯ ನೀರು ಕೂಡ ಕಲುಷಿತವಾಗುತ್ತಿದೆ.

ಇದೇ ಕೊಳಚೆ ನೀರು ಕಲ್ಯಾಣಿ ಹಾಗೂ ಮಜ್ಜನ ಬಾವಿಗೆ ಸೇರಿದರೆ ಅಲ್ಲಿನ ನೀರೂ ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ ಎಂಬುದು ಭಕ್ತರ ಆತಂಕ.

ಮಹದೇಶ್ವರಸ್ವಾಮಿಯ ದರ್ಶನ ಪಡೆದ ಭಕ್ತರು ಹಾಗೂ ಬಸ್ ನಿಲ್ದಾಣದಿಂದ ಜೇನುಮಲೆ ಭವನಕ್ಕೆ ಇದೇ ಮಾರ್ಗದಲ್ಲಿ ಸಾಗಬೇಕಿದೆ. ಕೊಳಚೆ ನೀರು, ಗಬ್ಬುನಾತ ಎಂದು ಮೂಗುಮುಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

‘ಸಮಸ್ಯೆ ಬಗೆಹರಿಸಲು ಕ್ರಮ’
ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು. ಎ.ಈ ‘ಈಗಷ್ಟೇ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮಹದೇಶ್ವರಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದೊಡ್ಡಕೆರೆ ಕಾಮಗಾರಿ ಸ್ಥಳ ಹಾಗೂ ಕೊಳಚೆ ನೀರು ತುಂಬಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಲಾಗುವುದು. ದೊಡ್ಡಕೆರೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಕೊಳಚೆ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT