ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಲೋಕಸಭಾ ಚುನಾವಣೆ | ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮಿ?

ಕುತೂಹಲಕ್ಕೆ ತೆರೆ ಇಂದು, ಮುಖಂಡರ ಎದೆಯಲ್ಲಿ ತಳಮಳ, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ
ಸೂರ್ಯನಾರಾಯಣ ವಿ.
Published 4 ಜೂನ್ 2024, 4:32 IST
Last Updated 4 ಜೂನ್ 2024, 4:32 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದ್ದು, ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. 

ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗಿದೆ. 

ಕಾಂಗ್ರೆಸ್‌ನ ಸುನಿಲ್‌ ಬೋಸ್‌, ಬಿಜೆಪಿ–ಜೆಡಿಎಸ್‌ (ಎನ್‌ಡಿಎ) ಮೈತ್ರಿ ಕೂಟದ ಎಸ್‌.ಬಾಲರಾಜ್‌, ಬಿಎಸ್‌ಪಿಯ ಎಂ.ಕೃಷ್ಣಮೂರ್ತಿ ಸೇರಿದಂತೆ 14 ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. 

14 ಅಭ್ಯರ್ಥಿಗಳು ಕಣದಲ್ಲಿದ್ದರೂ, ಕಾಂಗ್ರೆಸ್‌ ಮತ್ತು ಎನ್‌ಡಿಎ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಎಸ್‌ಪಿ ಪೈಪೋಟಿ ನೀಡಿರುವ ಸಾಧ್ಯತೆ ಕ್ಷೀಣ ಎಂದು ಹೇಳಲಾಗುತ್ತಿದೆ. 

ಮುಖಂಡರಲ್ಲಿ ತಳಮಳ: ಕ್ಷೇತ್ರದಲ್ಲಿ ಏಪ್ರಿಲ್‌ 26ರಂದೇ ಮತದಾನ ನಡೆದಿತ್ತು. ಫಲಿತಾಂಶಕ್ಕಾಗಿ ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಗಿತ್ತು. ಫಲಿತಾಂಶಕ್ಕೆ ಕ್ಷಣೆ ಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯರ್ಥಿಗಳು, ಪಕ್ಷದ ಮುಖಂಡರ ಎದೆಯಲ್ಲಿ ತಳಮಳ ಆರಂಭವಾಗಿದೆ. ಮತದಾರ ಯಾರ ಬಗ್ಗೆ ಒಲವು ತೋರಿರಬಹುದು ಎಂಬ ‌ನಿರೀಕ್ಷೆಯೂ ಅವರಲ್ಲಿದೆ. 

ಕಾಂಗ್ರೆಸ್‌ಗೆ ವಿಶ್ವಾಸ: ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಖಾತೆ ತೆರೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬಂದಿರುವುದರಿಂದ, ಗೆಲುವು ಪಕ್ಷಕ್ಕೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಪಕ್ಷದ ಮುಖಂಡರಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಶಾಸಕರು ಇರುವುದು ಅವರ ಗೆಲುವಿನ ವಿಶ್ವಾಸಕ್ಕೆ ಇನ್ನೊಂದು ಕಾರಣ.

ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಪಕ್ಷದ ಕೈ ಹಿಡಿಯಲಿವೆ ಎಂಬ ಭರವಸೆಯೂ ಅವರಿಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು ಸುನಿಲ್‌ ಬೋಸ್‌ ಅವರನ್ನು ಬೆಂಬಲಿಸಿದ್ದಾರೆ ಎಂಬುದು ಕಾಂಗ್ರೆಸ್‌ ಮುಖಂಡರ ಬಲವಾದ ನಂಬಿಕೆ. 

ಲಾಭವಾಗಲಿದೆಯೇ ಮೈತ್ರಿ?: ಇತ್ತ ಬಿಜೆಪಿಯು ಪ‍್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ನಂಬಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿರುವುದು ಎನ್‌ಡಿಎಗೆ ಮತ್ತೊಂದು ಬಲ. ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿರುವುದು ಮೈತ್ರಿಗೆ ವರವಾಗಲಿದೆ ಎಂಬುದು ಬಿಜೆಪಿ ಮುಖಂಡರ ನಂಬಿಕೆ. 

ಜೆಡಿಎಸ್‌ನೊಂದಿಗಿನ ಮೈತ್ರಿಯೂ ಪಕ್ಷಕ್ಕೆ ನೆರವಾಗಿದೆ. ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದರಲ್ಲಿ (ಹನೂರು) ಜೆಡಿಎಸ್‌ ಶಾಸಕರಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಗೆ ಬರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಈ ಬಾರಿ ಪ‍ಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಇದು ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿದೆ ಎಂಬುದು ಮುಖಂಡರ ಪ್ರಬಲವಾದ ವಾದ. ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಎನ್‌ಡಿಎಗೆ 20ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನೋಡಿರುವುದು ಬಿಜೆಪಿ, ಜೆಡಿಎಸ್‌ ಮುಖಂಡರ ಆಶಾ ಭಾವನೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. 

ಎಸ್‌.ಬಾಲರಾಜ್‌
ಎಸ್‌.ಬಾಲರಾಜ್‌
ಮರಿಸ್ವಾಮಿ
ಮರಿಸ್ವಾಮಿ
ಸಿ.ಎಸ್‌.ನಿರಂಜನ್‌ಕುಮಾರ್
ಸಿ.ಎಸ್‌.ನಿರಂಜನ್‌ಕುಮಾರ್
ಎಂ.ಕೃಷ್ಣಮೂರ್ತಿ
ಎಂ.ಕೃಷ್ಣಮೂರ್ತಿ

ಜನರಲ್ಲೂ ಮೂಡಿದ ಕುತೂಹಲ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭ ಗೆಲುವಿನ ನಿರೀಕ್ಷೆಯಲ್ಲಿ ಕಾಂಗ್ರೆಸ್‌, ಎನ್‌ಡಿಎ

ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ನಮಗೆ ಮುನ್ನಡೆ ಸಿಗಲಿದೆ

–ಪಿ.ಮರಿಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪರವಾಗಿದೆ. ದೇಶ ರಾಜ್ಯ ಮತ್ತು ಚಾಮರಾಜನಗರ ಕ್ಷೇತ್ರದಲ್ಲೂ ನಾವೇ ಗೆಲ್ಲಲಿದ್ದೇವೆ

–ಸಿ.ಎಸ್‌.ನಿರಂಜನ್‌ಕುಮಾರ್‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜೆಡಿಎಸ್‌ ಮೈತ್ರಿ ನಮಗೆ ಅನುಕೂಲ ತಂದಿದೆ. ಖಂಡಿತವಾಗಿಯೂ ಗೆಲ್ಲಲಿದ್ದೇವೆ

–ಎಸ್‌.ಬಾಲರಾಜ್‌ ಎನ್‌ಡಿಎ ಅಭ್ಯರ್ಥಿ

ಈ ಬಾರಿ ದಾಖಲೆ ಮತದಾನ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಶೇ 76.82ರಷ್ಟು ಮತದಾನವಾಗಿತ್ತು. ಮತದಾನದ ದಿನವಾದ ಏಪ್ರಿಲ್‌ 26ರಂದು ಇಂಡಿಗನತ್ತದಲ್ಲಿ ಘರ್ಷಣೆ ನಡೆದಿದ್ದು ಬಿಟ್ಟರೆ ಉಳಿದ ಕಡೆ ಶಾಂತಿಯುತವಾಗಿ ಮತದಾನ ನಡೆದಿತ್ತು. ಇಂಡಿಗನತ್ತದಲ್ಲಿ ಏ.29ರಂದು ಮರು ಮತದಾನ ನಡೆಸಲಾಗಿತ್ತು.  ಕ್ಷೇತ್ರದಲ್ಲಿ 878702 ಪುರುಷರು 899501 ಮಹಿಳೆಯರು ಹಾಗೂ 107 ಇತರೆ ಸೇರಿದಂತೆ ಒಟ್ಟು 1778310 ಮತದಾರರಿದ್ದರು. ಈ ಪೈಕಿ 682993 ಪುರುಷರು 682991 ಮಹಿಳೆಯರು ಹಾಗೂ 31 ಇತರೆ ಮತದಾರರು ಸೇರಿದಂತೆ 1366015 ಮಂದಿ ಹಕ್ಕು ಚಲಾಯಿಸಿದ್ದರು.  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 82.35ರಷ್ಟು ಮತದಾನವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT