ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಪಾದಯಾತ್ರೆ ಅಂತ್ಯ; ಅಹವಾಲು ಆಲಿಸಿದ ಸಚಿವ

ಹಾಡಿ, ಕಾಡಂಚಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವ ಭರವಸೆ
Published 27 ಜನವರಿ 2024, 7:23 IST
Last Updated 27 ಜನವರಿ 2024, 7:23 IST
ಅಕ್ಷರ ಗಾತ್ರ

ಚಾಮರಾಜನಗರ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹಾಡಿಗಳು ಮತ್ತು ಕಾಡಂಚಿನ ಪ್ರದೇಶಗಳ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೂ ಹಮ್ಮಿಕೊಂಡಿದ್ದ ಪಾದಯಾತ್ರೆ ಶುಕ್ರವಾರ ಅಂತ್ಯಗೊಂಡಿದೆ. 

ಶುಕ್ರವಾರ ಮುಂಜಾನೆ ಸಂತೇಮರಹಳ್ಳಿಯಿಂದ ಹೊರಟ ಪಾದಯಾತ್ರೆ ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಮುಕ್ತಾಯಕಂಡಿತು. 

ಪ್ರವಾಸಿ ಮಂದಿರದ ಆವರಣದಲ್ಲಿ ಧರಣಿ ನಡೆಸುತ್ತಿದ್ದ ರೈತರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಅಹವಾಲು ಆಲಿಸಿದರು. 

ಸಂಘದ ಮುಖಂಡ ಹೊನ್ನೂರು ಪ್ರಕಾಶ್‌ ಮಾತನಾಡಿ, ‘ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹಾಡಿಗಳು ಹಾಗೂ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್‌ ಹಾಗೂ ರಸ್ತೆ ಸೌಲಭ್ಯ ಕಲ್ಪಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಆದಷ್ಟು ಶೀಘ್ರ ಎರಡು ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲಿದದಿದ್ದರೆ ಅಲ್ಲಿನ ನಿವಾಸಿಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಿದ್ದಾರೆ’ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್‌, ‘ಈ ಗ್ರಾಮಗಳಿಗೆ ಸಮಗ್ರ ಮೂಲ ಸೌಕರ್ಯ ಕಲ್ಪಿಸಲು ₹38 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ’ ಎಂದರು. 

‘ಸೌಲಭ್ಯ ಕಲ್ಪಿಸಲು ನಿಮಗೆ ಇನ್ನೆಷ್ಟು ಸಮಯ ಬೇಕು’ ಎಂದು ಹೊನ್ನೂರು ಪ್ರಕಾಶ್‌ ಪ್ರಶ್ನಿಸಿದರು. ಸಚಿವ ವೆಂಕಟೇಶ್‌ ಮಾತನಾಡಿ, ‘ಈವರೆಗೂ ಯಾರೂ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಖಂಡಿತವಾಗಿ ಜನರಿಗೆ ಸೌಕರ್ಯ ಕಲ್ಪಿಸಲಿದ್ದೇವೆ’ ಎಂದರು.

‘ಇನ್ನು ಆರು ತಿಂಗಳೊಳಗೆ ರಸ್ತೆ, ವಿದ್ಯುತ್‌ ಸೌಕರ್ಯ ಕಲ್ಪಿಸಬೇಕು’ ಎಂದು ಹೊನ್ನೂರು ಪ್ರಕಾಶ್‌ ಆಗ್ರಹಿಸಿದರು.

‘ಹಂದಿಗಳು ಹಾಗೂ ಇತರೆ ಸಣ್ಣ ಪ್ರಾಣಿಗಳಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆ ಹಂದಿಯಿಂದ ಹಾನಿಯಾದರೆ ಪರಿಹಾರ ಕೊಡುವುದಿಲ್ಲ. ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಅರಣ್ಯದ ಒಳಗೆ ಇದೆ. ಅಲ್ಲಿ ಬೆಳೆ ಹಾನಿಯಾದರೆ, ಅರಣ್ಯದೊಳಗೆ ಪ್ರಾಣಿಗಳು ದಾಳಿ ಮಾಡಿರುವ ಕಾರಣಕ್ಕೆ ಪರಿಹಾರ ನೀಡಲು ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ದೂರಿದರು. 

‘ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳೆಯುವ ದೊಡ್ಡ ರಾಗಿ, ಅವರೆ ಸೇರಿದಂತೆ ಇತರೆ ಬೆಳೆಗಳಿಗೆ ಜಿಯೊ ಟ್ಯಾಗ್‌ ಕಲ್ಪಿಸಬೇಕು. ಸಾವಯವ ಬೆಳೆ ಸಂರಕ್ಷಣೆ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮಳೆಯಾಶ್ರಿತ ಬೆಳೆಗಳಿಗೆ ₹25 ಸಾವಿರ ಪರಿಹಾರ ನಿಗದಿಪಡಿಸಬೇಕು. ಅಕ್ರಮ ಕರಿಕಲ್ಲು ಮತ್ತು ಬಿಳಿಕಲ್ಲು ಗಣಿಗಾರಿಕೆ ತಡೆಯಬೇಕು. ನರೇಗಾ ಕೂಲಿ ದಿನಗಳನ್ನು 200 ದಿನಗಳಿಗೆ ಏರಿಸಬೇಕು. ಜಿಲ್ಲೆಯ ಹನೂರು ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ಕಲ್ಪಿಸಬೇಕು’ ಎಂದು ಪ್ರಕಾಶ್‌ ಒತ್ತಾಯಿಸಿದರು. 

ಸಚಿವ ಕೆ. ವೆಂಕಟೇಶ್ ಮಾತನಾಡಿ, ‘ರೈತರು ಪ್ರತಿಯೊಂದು ವಿಚಾರಕ್ಕೂ ಪ್ರತಿಭಟನೆ ಮಾಡುವುದನ್ನು ಬಿಡಬೇಕು. ನಿಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.  

‘ಸದ್ಯ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿದ್ದು, ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಇದರ ಬಗ್ಗೆ ಕ್ರಮವಹಿಸಲಾಗುವುದು. ಎಲ್ಲ ಮನವಿಗಳಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಎಸ್‌ಪಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ, ಬಿಆರ್‌ಟಿ ಡಿಸಿಎಫ್ ದೀಪ್ ಜೆ. ಕಾಂಟ್ರ್ಯಾಕ್ಟರ್, ಎಡಿಸಿ ಗೀತಾ ಹುಡೇದ, ಎಎಸ್‌ಪಿ ಉದೇಶ, ತಹಶೀಲ್ದಾರ್‌ ಬಸವರಾಜು, ಕಾಂಗ್ರೆಸ್‌ ಮುಖಂಡ ಕಾಗಲವಾಡಿ ಶಿವಣ್ಣ, ನೂರಾರು ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT